ಕಳಂಕ ರಹಿತ ಸೇವೆ ನೀಡಿದ ಅಧಿಕಾರಿ

ಇಂಜಿನಿಯರ್ ಡಾ.ಗಂಗಾಧರ ಕೊಡ್ಲಿಗೆ ಇಲಾಖೆಯಿಂದ ಬೀಳ್ಕೊಡುಗೆ

246

Get real time updates directly on you device, subscribe now.

ತುಮಕೂರು: ಕರ್ನಾಟಕ ಸರಕಾರದ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ತುಮಕೂರು ಮತ್ತು ಶಿರಾ ಉಪವಿಭಾಗ ಕಾರ್ಯಪಾಲಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಗಂಗಾಧರಕೊಡ್ಲಿ ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೊಟೇಲ್ನಲ್ಲಿ ಇಲಾಖೆಯ ವತಿಯಿಂದ ಅವರಿಗೆ ಬಿಳ್ಕೋಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಅಲಮಟ್ಟಿ ಅಣೆಕಟ್ಟೆಯ ನಿರ್ಮಾಣದಲ್ಲಿ ಸಹಾಯಕ ಇಂಜಿನಿಯರ್ ಆಗಿ 1984ರಲ್ಲಿ ವೃತ್ತಿ ಜೀವನ ಆರಂಭಿಸಿದ ಡಾ.ಗಂಗಾಧರಕೊಡ್ಲಿ ತದನಂತರ ಹೇಮಾವತಿ ನಾಲಾವಲಯ, ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಇಲಾಖೆ, ಪಂಚಾಯತ್ರಾಜ್ ಇಲಾಖೆ ಹೀಗೆ ಹಲವು ಇಲಾಖೆಗಳಲ್ಲಿ ಅಭಿಯಂತರಾಗಿ ವಿವಿಧ ಹುದ್ದೆಗಳ ಜವಾಬ್ದಾರಿ ನಿರ್ವಹಿಸಿ, 2022ರ ಮೇ.31ರಂದು ಕರ್ನಾಟಕ ಸರಕಾರದ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ(ಪಿಎಂಜಿಎಸ್ವೈ)ನ ಕಾರ್ಯಪಾಲಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ, ನಿವೃತ್ತಿ ಹೊಂದಿದರು. ವೃತ್ತಿಯ ಜೊತೆಗೆ ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಡಾ.ಗಂಗಾಧರ ಕೊಡ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಇಲಾಖೆಯವರು ಬಿಳ್ಕೋಟ್ಟರೆ, ಸಾಹಿತಿಗಳು ಸಾರಸ್ವತ ಲೋಕಕ್ಕೆ ಸ್ವಾಗತಿಸಿ ಬರಮಾಡಿಕೊಂಡರು.
ಸಮಾರಂಭದಲ್ಲಿ ಮೊದಲಿಗೆ ಮಾತನಾಡಿದ ಡಾ.ಗಂಗಾಧರಕೊಡ್ಲಿ ಅವರ ಸಹೋದರ, ಬೆಸ್ಕಾಂ ಮುಖ್ಯ ಇಂಜಿನಿಯರ್ ಮಾಲತೇಶ್ ಕೊಡ್ಲಿ, ನಮ್ಮ ಇಂದಿನ ಉನ್ನತಿಗೆ ನಮ್ಮ ತಂದೆ ತಾಯಿ ಕಾರಣ. ಇಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು ಕೊಂಡೇ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಮಾಡಿಸಬೇಕೆಂಬ ಕನಸು ಕಂಡುವರು. ಶೈಕ್ಷಣಿಕವಾಗಿ ಅಂತಹ ಒಳ್ಳೆಯ ವಾತಾವರಣ ಸಿಗದಿದ್ದರೂ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಇಂದು ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾಗುತ್ತಿದ್ದಾರೆ. ವಿದ್ಯಾರ್ಥಿ ದಿಸೆಯಿಂದಲೂ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಸಹೋದರ ನಿವೃತ್ತಿ ನಂತರ ಹೆಚ್ಚು ಹೆಚ್ಚು ಸಾಹಿತ್ಯ ಕೃಷಿಯಲ್ಲಿ ತೊಡಗಲಿ, ಆ ಮೂಲಕ ಕಿರಿಯರಿಗೆ ಮಾರ್ಗದರ್ಶನ ನೀಡಲಿ ಎಂಬ ಆಶಯ ವ್ಯಕ್ತಪಡಿಸಿದರು.
ಇಲಾಖೆಯ ಪರವಾಗಿ ಅಭಿನಂದನಾ ನುಡಿಗಳನ್ನಾಡಿದ ಸಹಾಯ ಇಂಜಿನಿಯರ್ ಕೃಷ್ಣಕಾಂತ್, ಸರಕಾರಿ ನೌಕರಿಯಲ್ಲಿ ನಿವೃತ್ತಿ, ವರ್ಗಾವಣೆ ಸಹಜ. ಕಳಂಕ ರಹಿತ ಸೇವೆ ಮುಖ್ಯ. ಆ ನಿಟ್ಟಿನಲ್ಲಿ ಡಾ.ಗಂಗಾಧರಕೊಡ್ಲಿ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ.ನೂನ್ಯತೆಗಳ ನಡುವೆಯೂ ಪ್ರಾಮಾಣಿಕತೆ,ದಕ್ಷತೆಯಿಂದ ಕೆಲಸ ಮಾಡಿ,ತಮ್ಮ ವೃತ್ತಿಗೆ ನ್ಯಾಯ ಒದಿಗಿಸಿದ್ದಾರೆ.ಹಾವೇರಿ ಜಿಲ್ಲೆ ಅವರ ಜನ್ಮ ಭೂಮಿಯಾದರೂ,ಅವರ ಕರ್ಮಭೂಮಿ ತುಮಕೂರು ಜಿಲ್ಲೆಯಾಗಿದೆ. ಜಿಲ್ಲೆಯ ಹಲವಾರು ನೀರಾವರಿ,ರಸ್ತೆ, ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಇವರ ಪಾತ್ರವಿದೆ ಎಂದರು.
ಬಿಳ್ಕೋಡುಗೆ ಸ್ವೀಕರಿಸಿ ಮಾತನಾಡಿದ ಡಾ.ಗಂಗಾಧರಕೊಡ್ಲಿ,ನಾನು ಇಲಾಖೆಯಲ್ಲಿ ಒತ್ತಡ ರಹಿತ, ಗುಣಮಟ್ಟದ ಕೆಲಸ ಮಾಡಲು ಅಲ್ಲಿನ ಅಧಿಕಾರಿಗಳು,ಸಿಬ್ಬಂದಿ ವರ್ಗ ಹಾಗೂ ಗುತ್ತಿಗೆದಾರರೇ ಕಾರಣ.ಎಲ್ಲ ರೀತಿಯ ಸಹಕಾರವನ್ನು ನೀಡಿದ್ದಾರೆ. ಮೊದಲು ಯೋಚಿಸಿ, ನಂತರ ಯೋಜನೆ ರೂಪಿಸಬೇಕೆಂಬುದು ನನ್ನ ಪಾಲಿಸಿ,ಹಾಗಾಗಿ ಕೆಲಸ ಮಾಡಿದ ಎಲ್ಲ ಕಡೆಯು ಒಳ್ಳೆಯ ಹೆಸರು ಪಡೆದಿದ್ದೇನೆ.ಇಂಜಿನಿಯರಿಂಗ್ ಕ್ಷೇತ್ರದಲ್ಲಿ ನಾವೆಷ್ಟೇ ಓದಿದ್ದರು ಅನುಭವವೆಂಬುದು ಕೆಲವೊಮ್ಮೆ ನಮ್ಮ ಕೈ ಹಿಡಿಯುತ್ತಿದೆ. ಹಾಗೆಯೇ ಹಿರಿಯರ ಮಾರ್ಗದರ್ಶನವೂ ಅಗತ್ಯ ಎಂದು ಡಾ.ಗಂಗಾಧರಕೊಡ್ಲಿ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಜಿ.ಕೆ.ಕುಲಕರ್ಣಿ,ಸರಕಾರಿ ವೃತ್ತಿಯಿಂದ ನಿವೃತ್ತರಾಗಿರುವ ಡಾ.ಗಂಗಾಧರಕೊಡ್ಲಿ ಅವರನ್ನು ಅವರ ಇನ್ನೊಂದು ಕ್ಷೇತ್ರ ಸಾಹಿತ್ಯಕ್ಕೆ ಸ್ವಾಗತಿಸುತ್ತಿದ್ದೇವೆ. ಸದ್ಯದಲ್ಲಿಯೇ ಹೊರಳು ಹಾದಿ ಎಂಬ ಕೃತಿಯ ಮೂಲಕ ಅವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಲಾಗುವುದೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರದ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಯ ಕಾರ್ಯಪಾಲಕ ಇಂಜಿನಿಯರ್ ರವೀಶ್ ಮಾತನಾಡಿ, ಸದಾ ಹಸನ್ಮುಖಿಗಳಾಗಿರುತ್ತಿದ್ದ ಡಾ.ಗಂಗಾಧರಕೊಡ್ಲಿ ಸರಕಾರಿ ವೃತ್ತಿಯಲ್ಲಿರುವ ಕಿರಿಯ ಇಂಜಿನಿಯರ್ಗಳಿಗೆ ಹೇಗೆ ಉತ್ತಮ ಕೆಲಸ ನಿರ್ವಹಿಸಬಹುದು ಎಂಬುದಕ್ಕೆ ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮತಿ ನಾಗರತ್ನ ಗಂಗಾಧರಕೊಡ್ಲಿ,ಗಾಯಕ ಸಿರಿವರ ಶಿವರಾಮಯ್ಯ, ಸಾಹಿತಿ ಅಬ್ಬಿನಹೊಳೆ ಸುರೇಶ್, ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಯ ಇಂಜಿನಿಯರ್ ನಟರಾಜು, ಕಾರ್ಯಪಾಲಕ ಇಂಜಿನಿಯರ್ ವೈ.ಬಿ.ಮಂಜುನಾಥ್, ತಾಂತ್ರಿಕ ಸಹಾಯಕರಾದ ಮಂಜುನಾಥ್,ಎಇಇಗಳಾದ ಶ್ರೀರಂಗಪ್ಪ, ರಮೇಶ್, ಲೆಕ್ಕ ಅಧೀಕ್ಷಕ ರೇಣುಕಾರಾಧ್ಯ, ಎ.ಇ.ಕೃಷ್ಣಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!