ದುಬಾರಿ ಬದುಕಿನ ಹಿಂದೆ ಸವಾರಿ ಬೇಡ!

278

Get real time updates directly on you device, subscribe now.


ವರಲಕ್ಷ್ಮಿ ಮಹೇಶ್
167/B, ಹುಡ್ಕೋ ಕಾಲೋನಿ, ಭದ್ರಾವತಿ – 577301.
ಶಿವಮೊಗ್ಗ lvaralakshmi995@gmail.com

ಬದುಕಿನಲ್ಲಿ ನಾನು ಗೆದ್ದೆ! ಕಾರು, ಮನೆ, ಆಸ್ತಿ-ಪಾಸ್ತಿ ಎಲ್ಲವೂ ನನ್ನ ಬಳಿ ಇದೆ. ಇಡೀ ಜಗತ್ತು ನನ್ನ ಬೆರಳ ತುದಿಯಲ್ಲಿದೆ. ಮುಂದಿನ ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಹೊಂದಿದ್ದೇನೆ ಎಂದು ಬೀಗುವವರಿಗೆ ಈಗ ಬ್ರೇಕ್ ಬಿದ್ದಿದೆ. ಎಷ್ಟೇ ಆದರೂ ಮನುಷ್ಯ ಅಲ್ಲವೇ? ಮನುಷ್ಯನ ದುಷ್ಟ ಸ್ವಭಾವವೇ ದುರಾಸೆ. ಎಷ್ಟೇ ಇದ್ದರೂ ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎಂದು ಹಪಹಪಿಸುವ ಗುಣ. ಸಮಾಧಾನ, ಸಂತೃಪ್ತಿಗೆ ಬೇಲಿ ಹಾಕಿ ಕೊಳ್ಳದೆ ಇದ್ದರೆ ಇಂತಹದೊಂದು ಕೆಟ್ಟ ದಿನ ಬರುತ್ತದೆ ಎಂಬ ಅರಿವು ಇನ್ನಾದರೂ ಆಗಬೇಕಿದೆ.
ಆಸೆ ಇರಲಿ, ಇರಬೇಕಾದ್ದೆ! ಆದರೆ, ದುರಾಸೆಯಲ್ಲ. ತನ್ನ ಇತಿ-ಮಿತಿಗಳನ್ನು ಮೀರಿ ಬೆಳೆಯಲು ಹವಣಿಸುವ ಮನುಷ್ಯನ ಬುದ್ದಿಗೆ ಪ್ರಕೃತಿ ಹೀಗೂ ಲಗಾಮು ಹಾಕಬಹುದೆಂದು ತೋರಿಸಿಕೊಟ್ಟಿದೆ.
ಐಷರಾಮಿ ಜೀವನ ಸಾಗಿಸುತ್ತಿದ್ದ ಮನುಕುಲಕ್ಕೆ ಈಗ ಬೇಲಿ ಬಿದ್ದಿದೆ. ಹಣ ಇದ್ದರೆ ಏನು ಬೇಕಾದರೂ ಮಾಡಬಹುದೆಂಬ ಹುಂಬತನಕ್ಕೆ ಕಡಿವಾಣ ಹಾಕಿದೆ. ತಾನು ಮಾಡಿದ್ದೇ ಸರಿ ಎಂಬ ಅವಿವೇಕಿತನಕ್ಕೆ ಪೆಟ್ಟು ಬಿದ್ದಿದೆ. ಸದಾ ಮೋಜಿನಲ್ಲಿ ಮೈಮರೆತು ಪ್ರಕೃತಿ ಜೊತೆ ಚೆಲ್ಲಾಟವಾಡಿ, ಸ್ವಾಭಾವಿಕ ಪ್ರಕೃತಿಯನ್ನು ಹಾಳುಗೆಡವಲು ಹೊರಟವನಿಗೆ ಪಾಠ ಹೇಳುವಂತಾಗಿದೆ.
ಹೌದು, ದೈವದತ್ತವಾಗಿ, ಪ್ರಕೃತಿ ಸ್ವಭಾವಿಕವಾಗಿ ನೀಡುವ ಪ್ರತಿಯೊಂದನ್ನು ಆಸ್ವಾದಿಸಬೇಕು, ಪ್ರೀತಿಸಬೇಕು, ಆರಾಧಿಸಬೇಕು.. ಬೆರೆಯಬೇಕು. ಬೆರೆತ ಭಾವದಲ್ಲಿ ಸಂಭ್ರಮ ಇರಬೇಕು. ಸಂತೃಪ್ತಿ ಇರಬೇಕು. ಅದೇ ಅಲ್ಲವೇ ನಿಜವಾದ ಸೌಂದರ್ಯ, ಅದೇ ಅಲ್ಲವೇ ನಿಜವಾದ ಆಲಿಂಗನ. ಆದರೆ, ಮನುಷ್ಯ ಮೈಮರೆಯುತ್ತಿದ್ದಾನೆ, ಮೈ ಮರೆತು ಪ್ರಕೃತಿ ಜೊತೆ ಚೆಲ್ಲಾಟವಾಡಿದ್ದಕ್ಕೆ ನಮಗೀಗ ಈ ಬಂಧನ ಏರ್ಪಟಿದ್ದೆ. ಬಂಧನದಿಂದ ಮುಕ್ತವಾಗಲು ಇದೆಲ್ಲಾ ಮನುಷ್ಯ ಜೀವಿಗೆ ಅರ್ಥವಾಗಬೇಕು.. ಅರ್ಥಮಾಡಿಸಬೇಕು ಅಲ್ಲವೇ?

ಮನುಷ್ಯನ ಸದ್ದು ಅಡಗಿದೆ

ಇದೀಗ ಕೊರೊನಾ ಭೀತಿಯಿಂದ ಜಗತ್ತೇ ಲಾಕ್ ಆಗಿದೆ. ಎಲ್ಲೂ ಓಡಾಡುವಂತಿಲ್ಲ. ಓಡಾಡಿದರೆ ಬಿತ್ತು ಲಾತ ಎಂಬಂತಾಗಿದೆ. ಪ್ರಾಣಿ-ಪಕ್ಷಿಗಳು, ಗಿಡ-ಮರಗಳು, ವನ್ಯ ಮೃಗಗಳು ಈಗ ಎಲ್ಲವೂ ಸಂಭ್ರಮದಲ್ಲಿ ಕೇಕೆ ಹಾಕುತ್ತಿವೆ.. ಮನುಷ್ಯನ ಹೆಜ್ಜೆ ಗುರುತಾಗಲಿ, ಸದ್ದಾಗಲಿ ಅವುಗಳಿಗೆ ಕೇಳಿಸುತ್ತಿಲ್ಲ. ಅವುಗಳ ಸಂಭ್ರಮಕ್ಕೆ ಪಾರವೇ ಇಲ್ಲ ಎಂಬಷ್ಟು ಸಂತೃಪ್ತಿಯಲ್ಲಿವೆ, ಅವುಗಳನ್ನು ಅವುಗಳಾಗೆ ಇರಲು ಬಿಡುವಂತಹ ದೊಡ್ಡ ಮನಸ್ಸು ಮನುಷ್ಯನದ್ದಾಗಬೇಕು.. ಆದಾಗಲೇ, ಜಗತ್ತಿನ ಮತ್ತೊಂದು ರೂಪ ಅನಾವರಣಗೊಳುತ್ತದೆ.

ಕವಲೊಡೆದ ಪ್ರೀತಿ
ಪ್ರತಿ ದಿನವೂ ಒತ್ತಡದ ಜೀವನ. ಬೆಳಗ್ಗೆ ಹಾಲು ತರಬೇಕು, ಕಾಫಿ ಮಾಡಬೇಕು. ತಿಂಡಿ ಬಾಕ್ಸ್ ಗೆ ಹಾಕಿ, ಕಚೇರಿಗೆ ಕೊಂಡೊಯ್ಯ ಬೇಕು. ರಾತ್ರಿ ಮನೆಗೆ ಬರುವಷ್ಟರಲ್ಲಿ ಸುಸ್ತೋ.. ಸುಸ್ತು!. ಇನ್ನು ಪ್ರೀತಿ ಎಲ್ಲಿಂದ ಬರಬೇಕು? ಒತ್ತಡದ ಜೀವನದಲ್ಲಿ ಕಳೆದು ಹೋಗಿದ್ದ ಪ್ರೀತಿ ಈಗ ಮನೆ ಮನೆಗಳಲ್ಲಿ ಕವಲೊಡೆಯುತ್ತಿದೆ. ಮನೆ-ಮನಗಳಲ್ಲಿ ಅರಳುತ್ತಿವೆ.
ಎಷ್ಟೇ ಅತ್ತು ಕರೆದರು ಸ್ಪಂದಿಸದ ಹೃದಯಗಳು ಈಗ ತೆರೆದಿವೆ. ಒಬ್ಬರನ್ನೊಬ್ಬರು ಅಂಟಿಕೊಂಡು ಕೂರುವಷ್ಟು ಸಮಯ ದೊರೆತಿದೆ. ಏನೋ ಅಂಜಿಕೆ, ಅಸಮಾಧಾನ, ಕುಹುಕ, ಅಸೆಡ್ಡೆ, ಅಲ್ಪತನ, ಬೇಜವಾಬ್ದಾರಿತನ ಎಲ್ಲವೂ ಈಗ ಮುಖಾಮುಖಿಯಾಗಿ ಮಾತಾಗಿದೆ, ಮಾತಿನ ಮೂಲಕ ಭಾವನೆಗಳು ಅರ್ಥೈಸುತ್ತಿದೆ. ಅರ್ಥೈಸಿದ ಶಬ್ದಗಳು ಸಂಬಂಧಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಹೆಚ್ಚುತ್ತಿರುವ ಪ್ರೀತಿಯ ಮಾತುಗಳು ಸಂಬಂಧವನ್ನು ಗಟ್ಟಿಗೊಳಿಸುತ್ತಿದೆ. ಗಟ್ಟಿತನದ ಪ್ರೀತಿಗೆ ಮಾತೃ ವಾತ್ಸಲ್ಯದ ಪ್ರೀತಿ ಮೆಳೈಸಿದೆ.. ಅದೇ ಅಲ್ಲವೇ ನಿಜವಾದ ಪ್ರೀತಿ. ಮಾತಾಡಿ, ಹೆಚ್ಚು ಮಾತಾಡಿ, ಭಾವನೆಗಳಿಗೆ ನಿಜ ರೂಪ ಸಿಗುವವರೆಗೂ ಮಾತಾಡಿ, ಆದರೆ, ಮಾತಿನಲ್ಲಿ ಪ್ರೀತಿ ಇರಲಿ, ಕರುಣೆ ಇರಲಿ, ವಾತ್ಸಲ್ಯದ ಸೌಜನ್ಯತೆ ಇರಲಿ. ಲಾಕ್ ಡೌನ್ ನಿಂದ ಎಲ್ಲರ ಮನೆಯಲ್ಲೂ ಪ್ರೀತಿಯ ಕಾರಂಜಿ ಚಿಮ್ಮಲಿ!.

Get real time updates directly on you device, subscribe now.

Comments are closed.

error: Content is protected !!