ತುಮಕೂರು ಅಭಿವೃದ್ಧಿಗೆ ಹೆಚ್ಚಿನ ಒತ್ತು: ಭೈರತಿ

ಆಹಾರ ಮಳಿಗೆ, ಪರಿಸರ ಸ್ನೇಹಿ ಬೈಸಿಕಲ್, ಇ-ಬೈಕ್ ಲೋಕಾರ್ಪಣೆ

460

Get real time updates directly on you device, subscribe now.

ತುಮಕೂರು: ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸುಸಜ್ಜಿತವಾದ ಹಾಗೂ ನೈರ್ಮಲ್ಯಯುತವಾದ ಆಹಾರ ನೀಡಲು ರೂ. 65 ಲಕ್ಷ ವೆಚ್ಚದಲ್ಲಿ ಆಹಾರ ಮಾರಾಟದ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಈ ಮಳಿಗೆಗಳನ್ನು ಸಂತೋಷದಿಂದ ಲೋಕಾರ್ಪಣೆಗೊಳಿಸುತ್ತಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಿಳಿಸಿದರು.

ತುಮಕೂರು ನಗರ ಅತ್ಯಾಧುನಿಕ ನಗರವಾಗಿ ಹೊರ ಹೊಮ್ಮುತ್ತಿದೆ, ಬೆಂಗಳೂರಿಗೆ ಹತ್ತಿರದಲ್ಲಿರುವ ಕಾರಣ ತುಮಕೂರು ನಗರಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಸುಸುಜ್ಜಿತ ಆಧುನಿಕ ಬಸ್ ನಿಲ್ದಾಣ ಮತ್ತು ಸ್ಟೇಡಿಯಂ ಸೇರಿದಂತೆ ಇತರೆ ಪೂರ್ಣಗೊಂಡ ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಆಹಾರ ಮಳಿಗೆಗಳ ಫಲಾನುಭವಿಗಳು ಮಳಿಗೆಗಳನ್ನು ತಮ್ಮ ಮನೆಯ ರೀತಿಯಲ್ಲಿ ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ಕರೆ ನೀಡಿದ ಸಚಿವರು ಮತ್ತು ಅಧಿಕಾರಿಗಳು ಈ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ನೀಡಲಿದ್ದು, ಈ ಮೂಲಕ ಫಲಾನುಭವಿಗಳು ತಮ್ಮ ಜೀವನೋಪಾಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯದೆಲ್ಲೆಡೆ ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿಗಳು ಶೇ. 85ರಷ್ಟು ಪೂರ್ಣಗೊಂಡಿದ್ದು, ಬಸ್ಸ್ಟ್ಯಾಂಡ್, ಕ್ರೀಡಾಂಗಣ ಮುಂತಾದ ದೊಡ್ಡ ಸಂಕೀರ್ಣಗಳ ಕಾಮಗಾರಿಗಳನ್ನು ಹೊರತು ಪಡಿಸಿದರೆ, ಉಳಿದಂತೆ ವಿದ್ಯುತ್ ದೀಪ, ರಸ್ತೆ, ಮುಂತಾದ ಬಹುತೇಕ ಯೋಜನೆಗಳು ಪೂರ್ಣಗೊಂಡಿವೆ ಎಂದರು.
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಮಳೆ ಬಂದಂತಹ ಸಂದರ್ಭ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ ಗೊಳ್ಳುವಂತಹ ಪ್ರದೇಶಗಳನ್ನು ಗುರುತಿಸಿ ಶೀಘ್ರವೇ ನೀಲಿ ನಕ್ಷೆ ಸಿದ್ಧಪಡಿಸಿ ಪರಿಹಾರ ಮಾರ್ಗೋಪಾಯ ರಚಿಸುವಂತೆ ಪಾಲಿಕೆಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ತುಮಕೂರು ನಾಗರಿಕರಿಗೆ ಅನುಕೂಲವಾಗುವಂತೆ ಪರಿಸರ ಸ್ನೇಹಿ ಬೈಸಿಕಲ್ ಹಾಗೂ ಇ-ಬೈಕ್ ಸವಾರಿಯ ಅವಕಾಶವನ್ನು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕಲ್ಪಿಸಲಾಗಿದೆ, ನಗರದಲ್ಲಿ ಒಟ್ಟು 15 ಕಡೆ ನಿಲುಗಡೆ ಪ್ರದೇಶಗಳನ್ನು ಗುರುತಿಸಿ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 120 ಇ-ಬೈಕ್ ಹಾಗೂ 30 ಬೈಸಿಕಲ್ ಗಳೊಂದಿಗೆ ಯೋಜನೆಯ ಅನುಷ್ಠಾನ ಕೈಗೊಳ್ಳಲಾಗಿದೆ ಎಂದರು.
ಪರಸರ ಸ್ನೇಹಿಯಾದ ಈ ಯೋಜನೆಯಿಂದ ತುಮಕೂರು ನಾಗರಿಕರಿಗೆ ಅನುಕೂಲವಾಗಲಿದ್ದು, ಬಸ್ ಮತ್ತು ರೈಲ್ವೆ ನಿಲ್ದಾಣಕ್ಕೆ ಸಂಚರಿಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅತೀ ಕಡಿಮೆ ದರದಲ್ಲಿ ತೆರಳಲು ಇವು ನೆರವಾಗಲಿದೆ. ಇ-ಬೈಕ್ ಸವಾರಿ ಉಪಯೋಗಿಸಲು ಬಯಸುವವರು ನಿಗದಿತ 15 ನಿಲ್ದಾಣಗಳಲ್ಲಿ ತಮ್ಮ ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ ನೀಡಿ ಹೆಸರನ್ನು ನೋಂದಾಯಿಸಬೇಕು, ಆನ್ಲೈನ್ ಅಪ್ಲಿಕೇಶನ್ ನಲ್ಲಿ ಪೂರ್ವ ಪಾವತಿ ಮೂಲಕ ತಮಗೆ ಬೇಕಾದ ನಿಲ್ದಾಣದಿಂದ ಬೈಸಿಕಲ್ ಬೈಕ್ ನ್ನು ಪಡೆದು ಉಪಯೋಗಿಸಬಹುದು ಎಂದರು.
ಮಂಜುನಾಥ ಸಮುದಾಯ ಭವನದ ಪಕ್ಕದಲ್ಲಿರುವ ಫುಡ್ಸ್ಟ್ರೀಟ್ ಬಹಳ ಕಿರಿದಾಗಿದ್ದು, ಇಲ್ಲಿ ಅತೀ ಹೆಚ್ಚು ವಾಹನ ದಟ್ಟಣೆ ಇದ್ದ ಕಾರಣ ಇಲ್ಲಿನ ಆಹಾರ ಮಾರಾಟಗಾರರನ್ನು ಗುರುತಿಸಿ ನೋಂದಣಿ ಮಾಡಿಸಿ, ಅವರಿಗೆ ಕೋತಿತೋಪಿನಲ್ಲಿ ಸುಸಜ್ಜಿತ ಆಹಾರ ಮಳಿಗೆಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳಿಗೆಗಳನ್ನು ನಿರ್ಮಿಸಿ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮಹಾಪೌರ ಬಿ.ಜಿ.ಕೃಷ್ಣಪ್ಪ, ಕಾರ್ಪೋರೇಟರ್ ಗಳಾದ ರೂಪಾ ಶೆಟ್ಟಳ್ಳಿ ಹಾಗೂ ಶ್ರೀನಿವಾಸ್, ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ ಮುಂತಾದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!