ಸೂರು ಹೊಂದುವ ಕನಸಿಗೆ ಸುವರ್ಣಾವಕಾಶ

‘ಬಿಲ್ಡ್ಟೆಕ್’ ವಸ್ತುಪ್ರದರ್ಶನಕ್ಕೆ ಅದ್ದೂರಿ ಚಾಲನೆ, ಹೊಸ ತಂತ್ರಜ್ಞಾನಗಳ ಆವಿಷ್ಕಾರ

190

Get real time updates directly on you device, subscribe now.

ತುಮಕೂರು: ಜನರಿಗೆ ಉತ್ತಮ ತಂತ್ರಜ್ಞಾನ ಮತ್ತು ಹೊಸ ಅವಿಷ್ಕಾರಗಳ ಬಗ್ಗೆ ತಿಳಿಯಲು ಬಿಲ್ಡ್ಟೆಕ್ -2022 ನಂತಹ ವಸ್ತುಪ್ರದರ್ಶನಗಳು ಸಹಕಾರಿಯಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಜಿನಮನೆಯಲ್ಲಿ ತುಮಕೂರು ಜಿಲ್ಲಾ ಇಂಜಿನಿರ್ಸ್ ಅಸೋಸಿಯೇಷನ್, ಸ್ಪೂರ್ತಿ ಗ್ರೂಪ್ ಸಹಯೋಗದಲ್ಲಿ ಆಯೋಜಸಿರುವ ಬಿಲ್ಡ್ಟೆಕ್-2022ನ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲರಿಗೂ ಒಂದು ಸೂರು ಇರಬೇಕೆಂಬ ಕನಸಿದೆ. ಆ ಕನಸು ಈಡೇರಸಬೇಕೆಂದರೆ ಇಂತಹ ವಸ್ತುಪ್ರದರ್ಶನಗಳಿಗೆ ಭೇಟಿ ನೀಡಿ, ಸಮಗ್ರ ಮಾಹಿತಿ ಪಡೆದರೆ, ಸುಂದರ, ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇಂದು ಭಾರತದ ಪ್ರತಿ ಮನೆಯಲ್ಲಿ ಹೊಸ ತಂತ್ರಜ್ಞಾನ ಹುಡುಕುವ ಮನಸ್ಸುಗಳಿವೆ. ರೈತರು ತಮ್ಮ ಕೃಷಿ ಕಾರ್ಯಗಳಿಗೆ ತಾವೇ ಕೆಲವು ಪರಿಕರಗಳನ್ನು ಅವಿಷ್ಕರಿಸಿ, ಬಳಸುತ್ತಿರುವುದನ್ನು ನೋಡಿದ್ದೇವೆ. ಇಂದಿನ ಬಹುತೇಕ ನೀರಾವರಿ ಯೋಜನೆಗಳ ಹಿಂದೆ ನುರಿತ ಇಂಜಿನಿಯರ್ ಗಳ ಪಾತ್ರವಿರುವುದನ್ನು ನಾವು ಕಾಣಬಹುದಾಗಿದೆ. ಹೊಸ ತಂತ್ರಜ್ಞಾನಗಳ ಸೃಷ್ಟಿಯಿಂದ ಉದ್ಯೋಗಗಳು ಸೃಷ್ಟಿಯಾಗಿ, ಜನಸಾಮಾನ್ಯರ ಕೊಳ್ಳುವ ಶಕ್ತಿ ಹೆಚ್ಚಾದರೆ, ಅದು ದೇಶ ಜಿಡಿಪಿ ಬೆಳೆವಣಿಗೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್ ಈ ವಸ್ತುಪ್ರದರ್ಶನ ಆಯೋಜಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಪ್ರಶಂಶಿಸಿದರು.
ಬಿಲ್ಡ್ಟೆಕ್-2022ರ ಮಳಿಗೆಗಳ ಟೇಪ್ ಕತ್ತರಿಸುವ ಮೂಲಕ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್, ಪ್ರತಿಯೊಬ್ಬರು ನಮಗೊಂದು ಮನೆ ಇರುಬೇಕೆಂದು ಬಯಸುವುದು ಸಹಜ. ಅಂತಹ ಆಸೆ ಉಳ್ಳುವರು ಒಂದೇ ಸೂರಿನಡಿ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಮಾಹಿತಿಗಳು, ತಾಂತ್ರಿಕ ಸಲಹೆಗಳು ದೊರೆಯುವ ಇಂತಹ ವಸ್ತುಪ್ರದರ್ಶನಕ್ಕೆ ಬಂದರೆ ಹೆಚ್ಚಿನ ಉಪಯೋಗವಾಗುತ್ತದೆ. ನಾಗರಿಕರು ಇದರ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸ್ಪೂರ್ತಿ ಗ್ರೂಪ್ ಕಂಪನಿ ಮುಖ್ಯಸ್ಥ ಎಸ್.ಪಿ.ಚಿದಾನಂದ ಮಾತನಾಡಿ, 15-20 ವರ್ಷಗಳ ಹಿಂದೆ ಒಂದು ಒಳ್ಳೆಯ ಕಂಪನಿ ಯಾವುದೆಂದು ಹುಡುಕಾಡಲು ಬೆಂಗಳೂರಿನಂತಹ ನಗರಕ್ಕೆ ಹೋಗಬೇಕಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ತಾಂತ್ರಿಕತೆಯ ಬೆಳವಣಿಗೆ, ಕೈಗಾರಿಕೆಗಳ ಸ್ಥಾಪನೆ, ಸಂಚಾರ ವ್ಯವಸ್ಥೆಯ ಹಿನ್ನೆಲೆಯಲ್ಲಿ ಇಂದು ಎಲ್ಲವೂ ಕೂಗಳತೆಯ ದೂರದಲ್ಲಿಯೇ ಇದೆ. ಈ ನಿಟ್ಟಿನಲ್ಲಿ ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯ ಶ್ಲಾಘನೀಯ. ಆದರೆ, ಸರಕಾರಿ ಯೋಜನೆಗಳ ಗುಣಮಟ್ಟದ ಬಗ್ಗೆ ಅಸೋಸಿಯೇಷನ್ ಗಮನಹರಿಸಿದಂತೆ ಕಾಣುತ್ತಿಲ್ಲ. ಸರಕಾರಿ ಕಟ್ಟಡಗಳಲ್ಲಿ, ಅದರಲ್ಲಿಯೂ ಶೌಚಾಲಯದ ಬಳಿ ಲೀಕೇಜ್ ಸಮಸ್ಯೆ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಇಂತಹ ತಪ್ಪುಗಳು ಆಗದಂತೆ ಸಂಘ ಕನಿಷ್ಠ ಸೂಚನೆ ನೀಡುವ ಕೆಲಸವನ್ನು ಮಾಡಲಿ ಎಂಬುದು ನಮ್ಮ ಸಲಹೆಯಾಗಿದೆ. ಸಾರ್ವಜನಿಕ ಜಾಗೃತಿಯನ್ನು ನಾವು, ನೀವು ಎಲ್ಲರೂ ಪಾಲಿಸಬೇಕಾಗಿದೆ ಎಂದರು.
ಬಿಲ್ಡ್ಟೆಕ್-2022 ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ತುಮಕೂರು ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಎಂ.ವಿ.ರಾಮಮೂರ್ತಿ, 2006ರಲ್ಲಿ ಸುಮಾರು 150 ಇಂಜಿನಿಯರ್ಗಳು ಸೇರಿ, ನಿರ್ಮಾಣ ಕ್ಷೇತ್ರದಲ್ಲಿ ಅಗತ್ಯ ಇರುವವರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವ ಉದ್ದೇಶದಿಂದ ಸಂಘ ಪ್ರಾರಂಭಿಸಿದ್ದೇವೆ. ರಾಷ್ಟ್ರದ ಎರಡನೇ ಅತಿ ದೊಡ್ಡ ಕ್ಷೇತ್ರವಾಗಿರುವ ನಿರ್ಮಾಣ ಕ್ಷೇತ್ರದಲ್ಲಿ ಆಗುವ ಬದಲಾವಣೆ, ಹೊಸ ತಾಂತ್ರಿಕ ಅವಿಷ್ಕಾರ, ತಾಂತ್ರಿಕ ಕಾರ್ಯಾಗಾರಗಳ ಮೂಲಕ ಅಗತ್ಯ ಮಾರ್ಗದರ್ಶನವನ್ನು ಮಾಡಲಾಗುತ್ತಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಬಿಲ್ಡ್ಟೆಕ್ ಹೆಸರಿನಲ್ಲಿ ಸಾರ್ವಜನಿಕರಿಗೆ ಅಗತ್ಯ ಸಲಹೆ, ಮಾರ್ಗದರ್ಶನ ನೀಡಲಾಗುತ್ತಿದೆ. ಅಲ್ಲದೆ ಹಲವಾರು ಸಮಾಜಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಒಂದು ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ವಸ್ತುಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ವೇದಿಕೆಯಲ್ಲಿ ತುಮಕೂರು ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್ನ ಕಾರ್ಯದರ್ಶಿ ಎಂ.ಡಿ.ರಾಜು, ಜಂಟಿ ಕಾರ್ಯದರ್ಶಿ ಮಂಗಳಕುಮಾರ್.ಹೆಚ್.ಎನ್., ಕಾರ್ಯಕ್ರಮದ ಸಂಚಾಲಕ ಎಂ.ಆರ್.ರಂಗನಾಥ್, ಯುಎಸ್ ಕಮ್ಯುನಿಕೇಷನ್ನ ಉಮಾಪತಿ, ಕಲ್ಮೇಶ್, ತುಮಕೂರು ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್ನ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!