ನರೇಂದ್ರ ಮೋದಿ ಸರಕಾರದಿಂದ ಬಡವರ ಕಲ್ಯಾಣ

175

Get real time updates directly on you device, subscribe now.

ತುಮಕೂರು: ನಮ್ಮ ದೇಶದ ಅತ್ಯಂತ ಕ್ರೀಯಾಶೀಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾವಾಗಲೂ ಬಡವರು, ವಂಚಿತರು, ಶೋಷಿತರು, ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ, ಅಭಿವೃದ್ಧಿಗಾಗಿ ತಮ್ಮನ್ನು ತಾವು ಮುಡಿಪಾಗಿಟ್ಟುಕೊಂಡಿದ್ದಾರೆ ಎಂದು ಸಂಸದ ಜಿ.ಎಸ್ಬಸವರಾಜು ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ 30ನೇ ಮೇ 2022 ರಂದು 8 ವರ್ಷ ಪೂರೈಸಿದೆ, ಕಳೆದ 8 ವರ್ಷಗಳಲ್ಲಿ ದೇಶದ ಹಿತಾಸಕ್ತಿಗಾಗಿ ಅನೇಕ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ದೇಶವು ಅಭಿವೃದ್ಧಿಯಲ್ಲಿ ಹೊಸ ಎತ್ತರ ಸ್ಪರ್ಶಿಸಿ ಮುನ್ನುಗ್ಗುವ ಮೂಲಕ ಅಂತ್ಯೋದಯದ ಗುರಿ ಸಾಧಿಸುತ್ತಿದೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಎಲ್ಲಾ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಫಲವಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರ ರಾಜ್ಯಗಳಲ್ಲಿ ಪಕ್ಷ ವ್ಯಾಪಕ ಸಾರ್ವಜನಿಕ ಬೆಂಬಲ ಪಡೆದು ಪೂರ್ಣ ಬಹುಮತದ ಸರ್ಕಾರ ರಚಿಸಿ ಹೊಸ ಇತಿಹಾಸ ಬರೆದಿದೆ ಎಂದರು.
2014ರ ಮಹಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್ಡಿಎಯಲ್ಲಿ ಭಾರತದ ಜನರು ತಮ್ಮ ನಂಬಿಕೆಯನ್ನು ಮರು ಸ್ಥಾಪಿಸಿದರು, 30 ವರ್ಷಗಳ ನಂತರ ಒಂದೇ ಪಕ್ಷಕ್ಕೆ ಭಾರತದ ಜನರು ಪೂರ್ಣ ಬಹುಮತ ನೀಡಿದರು. 2019 ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಇನ್ನೂ ದೊಡ್ಡ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳಿತು. ಬಿಜೆಪಿಯ ಸಂಖ್ಯೆಯು 282 ರಿಂದ 303 ಕ್ಕೆ ಏರಿತು, ಅದೇ ಪ್ರಧಾನಮಂತ್ರಿಯ ಅಡಿಯಲ್ಲಿ 5 ವರ್ಷಗಳ ಸಂಪೂರ್ಣ ಅಧಿಕಾರಾವಧಿ ಪೂರ್ಣಗೊಳಿಸಿದ ನಂತರ ಪೂರ್ಣ ಬಹುಮತದ ಸರ್ಕಾರದ ಪುನರಾವರ್ತನೆಯು ಸುಮಾರು 6 ಸುದೀರ್ಘ ದಶಕಗಳ ನಂತರ ಸಂಭವಿಸಿದೆ ಎಂದರು.
ನರೇಂದ್ರ ಮೋದಿಜಿ ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಜನಪರ ನಾಯಕರಾಗಿ ಬೆಳೆದವರು, ದೂರದೃಷ್ಟಿಯ ಯೋಜನೆಗಳು, ಯೋಜನೆಗಳ ಅನುಷ್ಠಾನಕ್ಕೆ ಬದ್ಧತೆ, ನೇರ ಸೌಲಭ್ಯ ವರ್ಗಾವಣೆ ಮೂಲಕ ಭ್ರಷ್ಟಾಚಾರ ದೂರವಿಟ್ಟ ಮಹಾನ್ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ಕೋವಿಡ್-19 ನಂತರ ದೇಶದ ಆರ್ಥಿಕ ಪ್ರಗತಿಯ ವೇಗ ಧಿಡೀರ್ ಕುಸಿದು ದೇಶದ ಪ್ರಗತಿಗೆ ಭಾರಿ ಹಿನ್ನೆಡೆ ಅನುಭವಿಸಿದ ಭಾರತಕ್ಕೆ ಪುನಶ್ಚೇತನಗೊಳಿಸಲು ಪ್ರಧಾನಿ ನರೇಂದ್ರಮೋದಿಯವರು ಹಲವಾರು ಪ್ರಗತಿಪರ ಕಾರ್ಯಕ್ರಮ ರೂಪಿಸಿದ್ದರಿಂದ ಇದೀಗ ಭಾರತದ ಆರ್ಥಿಕ ಪ್ರಗತಿ ಪುಟಿದೆದ್ದು ಮೂಲಭೂತ ಸೌಲಭ್ಯ, ಉತ್ಪಾದನೆ, ಗಣಿ ನಿರ್ಮಾಣ ವಲಯ, ಕಲ್ಲಿದ್ದಲು ನೈಸರ್ಗಿಕ ಅನಿಲ ರಸಗೊಬ್ಬರ, ಉಕ್ಕು, ಸಿಮೆಂಟ್, ಆಟೋ ಮೊಬೈಲ್ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಆರ್ಥಿಕತೆ ಮರಳಿ ಪ್ರಗತಿಯ ಹಳಿಗೆ ಬಂದು ಇದೀಗ ಜಿಡಿಪಿ 8.7 ಗೆ ಜಿಗಿದಿದ್ದು, ಪ್ರಸ್ತುತ ಆರ್ಥಿಕ ಸಾಲಿನಲ್ಲಿ ದೇಶವು ಸುಸ್ಥಿರವಾಗುತ್ತಿದೆ ಎಂದರು.
8 ವರ್ಷಗಳಲ್ಲಿ ಕೃಷಿಗೆ ಬಜೆಟ್ ನಲ್ಲಿ ಆರು ಪಟ್ಟು ಹೆಚ್ಚಳವಾಗಿದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಬಜೆಟ್ ನಲ್ಲಿ ಸುಮಾರು 1.32 ಲಕ್ಷ ಕೋಟಿ ರೂ. ಹಂಚಿಕೆಯಾಗಿದ್ದು, ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಪ್ರಾಮಾಣಿಕ ಚಿಂತನೆಗೆ ನಿದರ್ಶನ, ಆಹಾರ ಧಾನ್ಯಗಳು ಮತ್ತು ತೋಟಗಾರಿಕಾ ಬೆಳೆಗಳ ದಾಖಲೆಯ ಉತ್ಪಾದನೆಯು ಸರ್ಕಾರದ ಬಜೆಟ್ ಹಂಚಿಕೆಯನ್ನು ಸರಿಯಾದ ದಿಕ್ಕಿನಲ್ಲಿ ಖರ್ಚು ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಲಾಖಾ ಅಂದಾಜಿನ ಪ್ರಕಾರ, ಆಹಾರ ಧಾನ್ಯಗಳ ಉತ್ಪಾದನೆಯು ಸುಮಾರು 315 ಮಿಲಿಯನ್ ಟನ್ ಗಳು ಎಂದು ಅಂದಾಜಿಸಲಾಗಿದೆ, ತೋಟಗಾರಿಕಾ ವಲಯದ ಉತ್ಪಾದನೆಯು 334 ಮಿಲಿಯನ್ ಟನ್ ಗಳು ಇದು ಇದುವರೆಗಿನ ಅತ್ಯಧಿಕ ಉತ್ಪಾದನೆಯಾಗಿದೆ ಎಂದು ತಿಳಿಸಿದರು.
ಉತ್ತಮ ಜೀವನೋಪಾಯಕ್ಕಾಗಿ ರೈತರ ಆದಾಯ ಸುಧಾರಿಸಲು ಮುಂದಾಗಿದೆ. 2013- 14ನೇ ಸಾಲಿನಲ್ಲಿ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ ಗೆ 1,310 ರೂ. ಕ್ವಿಂಟಾಲ್ ಗೆ 1,940 ರೂ.ಗೆ ಏರಿಕೆಯಾಗಿದೆ, ಅದೇ ರೀತಿ 2013- 14ರಲ್ಲಿ ಗೋದಿಗೆ ಕ್ವಿಂಟಾಲ್ ಗೆ 1,400 ರೂ. ಗಳಿದ್ದ ಎಂಎಸ್ಪಿ ಇದೀಗ ಕ್ವಿಂಟಾಲ್ ಗೆ 2,015 ರೂ. ಗೆ ತಲುಪಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್, ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಜಿಲ್ಲಾ ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ಮುಖಂಡ ಬೆಟ್ಟಸ್ವಾಮಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!