ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜ ಕೊಡಿ

198

Get real time updates directly on you device, subscribe now.

ತುಮಕೂರು: ಕಳೆದ ಎರಡು, ಮೂರು ವರ್ಷಗಳಿಂದ ರಾಜ್ಯದ ರೈತರು ಅತಿವೃಷ್ಠಿ ಮತ್ತು ಆನಾವೃಷ್ಠಿ ಎರಡನ್ನು ನೋಡುತ್ತಿದ್ದು, ಕೋವಿಡ್ನಿಂದ ರೈತರು ಸಂಕಷ್ಟದಲ್ಲಿದ್ದು, ಈ ಸಾಲಿನ ಬಿತ್ತನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಅವರ ಮನೆ ಬಾಗಿಲಿಗೆ ತಲುಪಿಸಬೇಕೆಂದು ನವಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಸಿ.ಪಾಟೀಲ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಠಿ ಮತ್ತು ಆನಾವೃಷ್ಠಿಯಿಂದ ರೈತರ ಬೆಳೆ ಕಳೆದುಕೊಂದು ಸಂಕಷ್ಟ ಪಡುತ್ತಿದ್ದಾರೆ, ಪ್ರಸ್ತಕ ಸಾಲಿನ ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಭೂಮಿ ಬಿತ್ತನೆ ಮಾಡಲು ಹಣವಿಲ್ಲದ ಪರದಾಡುವಂತಹ ಸ್ಥಿತಿಯಲ್ಲಿದ್ದಾರೆ, ಇದರ ಲಾಭ ಪಡೆದ ಕೆಲವರು ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಿ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ, ಹಾಗಾಗಿ ಸರಕಾರ ಅವರಿಗೆ ಉಚಿತವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ನೀಡಿ ರೈತರಿಗೆ ನೆರವು ನೀಡುಬೇಕೆಂದರು.
ಕಲ್ಪತರು ನಾಡು ಎಂದು ಕರೆಯುವ ತುಮಕೂರು ಜಿಲ್ಲೆಯಲ್ಲಿ ತೆಂಗು ಮತ್ತು ಅಡಿಕೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟದಿಂದ ಸೂಕ್ತ ಬೆಲೆ ದೊರೆಯದಂತಾಗಿದೆ.ಹಾಗಾಗಿ ಸರಕಾರ ದಲ್ಲಾಳಿಗಳ ಹಾವಳಿ ತಪ್ಪಿಸಿ ಸರಕಾರವೇ ನೇರ ಖರೀದಿಗೆ ಮುಂದಾಗ ಬೇಕೆಂಬುದು ನಮ್ಮ ಒತ್ತಾಯವಾಗಿದೆ, ಜೊತೆಗೆ ಶುಕ್ರವಾರ ರಾತ್ರಿ ಬೀಸಿದ ಬಾರಿ ಗಾಳಿಗೆ ಮಲ್ಲಸಂದ್ರ, ಕಳ್ಳಿಪಾಳ್ಯ ಸುತ್ತಮುತ್ತ 150ಕ್ಕೂ ಹೆಚ್ಚು ಅಡಿಕೆ, ತೆಂಗಿನ ಮರಗಳು ಬಿದ್ದು ಹೋಗಿವೆ, ತಕ್ಷಣವೇ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕೆಂದು ದಯಾನಂದ ಸಿ.ಪಾಟೀಲ್ ತಿಳಿಸಿದರು.
ಜಿಲ್ಲೆಯಲ್ಲಿ ಸಾವಿರಾರು ಜನರು ಬಡವರು ಗೋಮಾಳ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ, ಸರಕಾರದ ನಿಯಮದ ಪ್ರಕಾರ ಕನಿಷ್ಠ 4 ವರ್ಷ ಉಳಮೆ ಮಾಡಿ ಬೆಳೆ ಬೆಳೆಯುತ್ತಿದ್ದರೆ ಜಮೀನು ಅವರದ್ದೇ ಎಂಬ ಆದೇಶವಿದೆ, ಆದರೆ ಅರಣ್ಯ ಇಲಾಖೆಯವರು ಸಾಗುವಳಿ ಚೀಟಿ ಪಡೆದರೂ ರೈತರಿಗೆ ತೀವ್ರ ಕಿರುಕುಳ ನೀಡುತ್ತಾ, ಸಲಿಗೆ ಬಂದ ಗಿಡಗಳನ್ನು ಕಿತ್ತು ಹಾಕಿ ತೀವ್ರ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ರೈತರೆಂದು ಮೊಸಳೆ ಕಣ್ಣೀರು ಸುರಿಸುವ ಆಡಳಿತ ಮತ್ತು ವಿರೋಧ ಪಕ್ಷಗಳು, ಈ ಹಿಂದಿನ ಅತಿವೃಷ್ಠಿ ಕಾಲದಲ್ಲಿ ಮನೆ ಕಟ್ಟಿಕೊಡುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದುವರೆಗೂ ಈಡೇರಿಸಿಲ್ಲ, ವಿರೋಧ ಪಕ್ಷಗಳು ಕೇವಲ ಕಾಡು ಹರಟೆಯಲ್ಲಿಯೇ ಕಾಲ ಕಳೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ಅತಿ ಹತ್ತಿರದಲ್ಲಿ ಕೆಲಸ ಮಾಡುವ ಕೃಷಿ ಇಲಾಖೆಯಲ್ಲಿ ಶೇ.70 ರಷ್ಟು ಹುದ್ದೆ ಖಾಲಿ ಇವೆ, ಈ ಹಿಂದೆ ಖಾಲಿ ಹುದ್ದೆಗಳ ಭರ್ತಿ ಮಾಡುವ ಭರವಸೆ ನೀಡಿದ್ದ ಕೃಷಿ ಸಚಿವರು, ಇದುವರೆಗೂ ಹುದ್ದೆಗಳನ್ನು ತುಂಬಿಲ್ಲ, ಇದರಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ, ತಾಂತ್ರಿಕ ಸಲಹೆಗಾರರ ಕೊರತೆ ಇದೆ, ಹಾಗಾಗಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂಬುದು ದಯಾನಂದ ಪಾಟೀಲ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನವಕರ್ನಾಟಕ ರೈತ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಎಂ.ಬಿ.ಜಗದೀಶ್, ರಾಜ್ಯ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಯಾಜ್, ತುಮಕೂರು ಜಿಲ್ಲಾಧ್ಯಕ್ಷ ಎಸ್.ಕೃಷ್ಣಮೂರ್ತಿ, ಉಪಾಧ್ಯಕ್ಷ ಎಂ.ಎಂ.ಬಸವರಾಜು ಇದ್ದರು.

Get real time updates directly on you device, subscribe now.

Comments are closed.

error: Content is protected !!