ಜೂ.14ಕ್ಕೆ ಮಾಹಿತಿ ಕಣಜ ವಿಶೇಷ ಗ್ರಾಮ ಸಭೆ: ಡೀಸಿ

110

Get real time updates directly on you device, subscribe now.

ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿಯಲ್ಲಿ ಜೂನ್ 14 ರಂದು ಮಾಹಿತಿ ಕಣಜ ವಿಶೇಷ ಗ್ರಾಮ ಸಭೆ ಮತ್ತು ಡಿಜಿಟಲ್ ಸಂವಾದವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯತಿಯಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ ಮಾಹಿತಿ ಕಣಜ ಯೋಜನೆ ಮತ್ತು ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಬಳಸದೆ ಸರ್ಕಾರದ ವಿವಿಧ ಯೋಜನೆ, ಸೇವೆಗಳ ಮಾಹಿತಿಯನ್ನು ಒಂದೇ ವೆಬ್ ಪೋರ್ಟಲ್ ನಲ್ಲಿ ಸಾರ್ವಜನಿಕರಿಗೆ ಒದಗಿಸಲು ಇ- ಆಡಳಿತ ಕೇಂದ್ರದಿಂದ ಮಾಹಿತಿ ಕಣಜ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದ್ದು, ಈ ವೆಬ್ ಪೋರ್ಟಲ್ಗೆ ಭೇಟಿ ನೀಡಿ ನಿರ್ದಿಷ್ಠ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಮಾಹಿತಿ ಕಣಜ ತಂತ್ರಾಂಶ ಸೌಲಭ್ಯವು ದೇಶದ ರಾಜಸ್ಥಾನ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರುವಲ್ಲಿ ಮಾರ್ಗೋಪಾಯ, ಬಜೆಟಿಂಗ್, ಅನುಷ್ಠಾನ ಮತ್ತು ಮೌಲ್ಯ ಮಾಪನದ ಹಂತಗಳಲ್ಲಿ ಸಾರ್ವಜನಿಕ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗ ಪಡಿಸಲು ಈ ತಂತ್ರಾಂಶವು ರಾಜ್ಯ ಸರ್ಕಾರ ಬಳಸಬಹುದಾದ ಏಕಗವಾಕ್ಷಿ ವೇದಿಕೆಯಾಗಿದೆ ಎಂದು ತಿಳಿಸಿದರು.
ಇ-ಆಡಳಿತ ಕೇಂದ್ರದ ಯೋಜನಾ ನಿರ್ದೇಶಕ ಶ್ರೀವ್ಯಾಸ್ ಮಾತನಾಡಿ, ಮಾಹಿತಿ ಕಣಜದ ಪಂಚಾಯತಿ ಮಟ್ಟದ ಡಿಜಿಟಲ್ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರಲ್ಲದೆ, ಮಾಹಿತಿ ಹಕ್ಕು ಕಾಯ್ದೆಯಡಿ ಸ್ವೀಕೃತವಾಗುವ ಅರ್ಜಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಎಲ್ಲಾ ಇಲಾಖೆಗಳ ಮಾಹಿತಿಯನ್ನು ಒಂದೇ ಪೋರ್ಟಲ್ ನಲ್ಲಿ ಒದಗಿಸುವುದು ಈ ಮಾಹಿತಿ ಕಣಜ ತಂತ್ರಾಂಶದ ಉದ್ದೇಶವಗಿದೆ. ಈಗಾಗಲೇ 450 ಇಲಾಖೆಗಳ 300 ಅಧಿಕಾರಿಗಳಿಗೆ ಮಾಹಿತಿ ಕಣಜ ಪೋರ್ಟಲ್ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದ್ದು, ಒಟ್ಟಾರೆ 112 ಇಲಾಖೆಗಳ 442 ಸೇವೆಗಳ ಮಾಹಿತಿ ಅಪ್ ಡೇಟ್ ಮಾಡಲಾಗಿದೆ ಎಂದರಲ್ಲದೆ, ಈ ತಂತ್ರಾಂಶದಿಂದ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ, ಆಹಾರ, ಲೋಕೋಪಯೋಗಿ, ಅರಣ್ಯ, ಗೃಹ, ಮೀನುಗಾರಿಕೆ, ಸಹಕಾರ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಸಹಿತ ಕ್ರೋಢೀಕೃತ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಮಾಹಿತಿ ಕಣಜ ಪೋರ್ಟಲ್ ನಲ್ಲಿ ನಿಗದಿತ ಅವಧಿಯೊಳಗೆ ಜಿಲ್ಲೆಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ಅಪ್ ಡೇಟ್ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು, ಜಿಲ್ಲೆಯಲ್ಲಿರುವ ಕೆರೆ ಕಟ್ಟೆ, ಕೃಷಿ, ತೋಟಗಾರಿಕೆ ಭೂಮಿ, ಅರಣ್ಯ ಪ್ರದೇಶ, ಪ್ರವಾಸಿ ತಾಣ, ಜಾನುವಾರು ಸಂಖ್ಯೆ, ಮೀನುಗಾರಿಕೆ ಅಭಿವೃದ್ಧಿ, ಪಡಿತರದಾರರ ಮಾಹಿತಿ, ರಸ್ತೆ ಸೇರಿದಂತೆ ಮತ್ತಿತರ ಯೋಜನೆ, ಸೇವೆಗಳ ಪ್ರಗತಿ ಮಾಹಿತಿಯನ್ನು ಈ ಪೊರ್ಟಲ್ ನಲ್ಲಿ ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ ಜೂನ್ 14 ರಂದು ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆಯಲಿರುವ ಮಾಹಿತಿ ಕಣಜ ವಿಶೇಷ ಗ್ರಾಮಸಭೆ ಮತ್ತು ಡಿಜಿಟಲ್ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿಸಬೇಕು. ಈ ನಿಟ್ಟಿನಲ್ಲಿ ಅವಶ್ಯವಿರುವ ಎಲ್ಲಾ ಪೂರ್ವ ಸಿದ್ಧತೆ ಕೈಗೊಳ್ಳಬೇಕು. ಮಾಹಿತಿ ಕಣಜ ಕಾರ್ಯಕ್ರಮದ ಬಗ್ಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಟಾಂ ಟಾಂ ಹೊಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕೆಂದು ಪಿಡಿಓ ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಅತೀಕ್ ಪಾಷಾ, ಮುಖ್ಯ ಯೋಜನಾ ಅಧಿಕಾರಿ ಸಣ್ಣ ಮಸಿಯಪ್ಪ, ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!