ನಿವೇಶಕ್ಕಾಗಿ ನಿವೇಶನ ರಹಿತ ಹೋರಾಟ

ಧರಣಿ ಕೈಬಿಡಲು ಜಿಲ್ಲಾಧಿಕಾರಿ ಮನವಿ- ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್

148

Get real time updates directly on you device, subscribe now.

ತುಮಕೂರು: ನಗರದ ವಿವಿಧ ಸ್ಲಂಗಳ 400 ನಿವೇಶನ ರಹಿತ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸ್ಲಂ ಜನರ ಕುಂದು ಕೊರತೆ ಸಭೆಯ ತೀರ್ಮಾನದಂತೆ 5 ಎಕರೆ ಸರ್ಕಾರಿ ಭೂಮಿ ಮಂಜೂರು ಮಾಡಲು ಆಗ್ರಹಿಸಿ ನಿರಂತರ ಧರಣಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಸಮಿತಿ ಮತ್ತು ನಿವೇಶನ ರಹಿತರ ಸಮಿತಿಯಿಂದ ಹಮ್ಮಿಕೊಳ್ಳಲಾಯಿತು.

ಧರಣಿ ನಿರತ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಸಂಘಟನೆ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಅಜಯ್.ವಿ. ಹೆಬ್ಬಾಕ ಸರ್ವೇ ನಂ.70 ರಲ್ಲಿ ಇರುವ 3 ಎಕರೆ ಸರ್ಕಾರಿ ಗೋಮಾಳ, ನರಸಾಪುರ ಸರ್ವೇ ನಂಬರ್ 54 ರಲ್ಲಿರುವ 9 ಎಕರೆ ಸರ್ಕಾರಿ ಗೋಮಾಳದಲ್ಲಿ ನಿವೇಶನ ರಹಿತ ಸ್ಲಂ ನಿವಾಸಿಗಳಿಗೆ ನಿವೇಶನ ನೀಡುವುದು ಅಥವಾ ಈಗಾಗಲೇ ನಗರಪಾಲಿಕೆಗೆ ನಿವೇಶನ ರಹಿತರಿಗೆ ಹಸ್ತಾಂತರಿಸಿರುವ 15.13 ಎಕರೆ ಭೂಮಿಯಲ್ಲಿ ನಿರ್ಮಿಸುವ ವಸತಿ ಸಮುಚ್ಛಯಗಳಲ್ಲಿ ವಿಶೇಷ ಆದ್ಯತೆ ಮೇಲೆ 400 ಕುಟುಂಬಗಳನ್ನು ಪರಿಗಣಿಸಲು ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿಗೆ ಕೋರಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಹೇಳಿದರು.

ಜೂನ್ 8 ರಂದು ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದಿದ್ದು ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಿದ್ದು ನಿರಂತರ ಧರಣಿ ಕೈಬಿಡುವಂತೆ ಮನವಿ ಮಾಡಿದರು. ಜಿಲ್ಲಾಡಳಿತದ ತುರ್ತು ಸ್ಪಂದನೆ ಮತ್ತು ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ತಾತ್ಕಾಲಿಕವಾಗಿ ಧರಣಿ ಹಿಂಪಡೆದು ಜೂನ್ 8 ರ ಸಭೆ ನೋಡಿಕೊಂಡು ಮುಂದಿನ ಹಂತದ ಹೋರಾಟ ರೂಪಿಸಲು ತೀರ್ಮಾನಿಸಲಾಯಿತು.
ಈ ವೇಳೆ ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಮಾತನಾಡಿ, ತುಮಕೂರು ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ನಿವೇಶನ ರಹಿತರಿದ್ದು 20 ವರ್ಷಗಳಿಂದ ನಿವೇಶನ ಹಂಚಿಕೆಯಾಗಿಲ್ಲ, ಇತ್ತೀಚೆಗೆ ನಗರ ಪಾಲಿಕೆಯಿಂದ ಅರ್ಹ ಫಲಾನುಭುವಿಗಳ ಸಮೀಕ್ಷೆಯಲ್ಲಿ ಒಂದು ಸಮುದಾಯವನ್ನು ಹೊರಗಿಡಲಾಗುತ್ತಿದೆ, 3 ವರ್ಷಗಳಿಂದ ಕೊಳಗೇರಿ ಸಮಿತಿ ನಿವೇಶನ ರಹಿತರ ಹೋರಾಟ ಮಾಡುತ್ತಿದ್ದು ಬಡವರಿಗೆ ಸಿಗುತ್ತಿಲ್ಲ, ಆದರೆ ಎಂಎಲ್ಎ, ಎಂಪಿ ಮತ್ತು ಸಚಿವರ ಸಂಬಂಧಿಗಳಿಗೆ ರಾತ್ರೋರಾತ್ರಿ ಸರ್ಕಾರಿ ಭೂಮಿ ಮಂಜೂರಾಗುತ್ತವೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸರ್ಕಾರಿ ಭೂಮಿ ಸಿಗುತ್ತದೆ, ಸಾವಿರಾರು ಎಕರೆ ಲೇಔಟ್ಗಳು ಖಾಲಿ ಬಿದ್ದಿವೆ, ಆದರೆ ಬಡವರಿಗೆ ಭೂಮಿ ಸಿಗುತ್ತಿಲ್ಲ, ಅದಕ್ಕೆ ನಮ್ಮ ಪ್ರಬಲ ಹೋರಾಟ ಮಾಡಬೇಕಂದರು.
ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿ 2020 ರಿಂದ 1 ಮತ್ತು 2ನೇ ಹಂತದ ನಿರಂತರ ಹೋರಾಟದ ಫಲವಾಗಿ ಜಿಲ್ಲಾಡಳಿತ ನಿವೇಶನ ರಹಿತ ಕುಟುಂಬಗಳಿಗೆ ಜಿ+2 ಮಾದರಿಯ ಮನೆ ನಿರ್ಮಿಸಿಕೊಡಲು ವಿವಿಧ ಸರ್ಕಾರಿ ಸರ್ವೇ ನಂಬರ್ ಗಳಲ್ಲಿ ಲಭ್ಯವಿದ್ದ 15.13 ಎಕರೆ ಭೂಮಿಯನ್ನು ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿರುವುದು ಸರಿಯಷ್ಟೇ, ಈ ಭೂಮಿಯಲ್ಲಿ ತಕ್ಷಣಕ್ಕೆ ಅಗತ್ಯವಿರುವವರಿಗೆ ನಿವೇಶನ ಮಂಜೂರು ಮಾಡಬೇಕೆಂದು ಕಾರ್ಯದರ್ಶಿ ಅರುಣ್ ಮತ್ತು ನಿವೇಶನ ರಹಿತರ ಹೋರಾಟ ಸಮಿತಿಯ ಮಂಗಳಮ್ಮ ಒತ್ತಾಯಿಸಿದರು.
ಕೊಳಗೇರಿ ಸಮಿತಿಯ ನರಸಿಂಹಮೂರ್ತಿ, ದೀಪಿಕಾ, ದೀಪಿಕಾ, ಕಣ್ಣನ್, ಶಂಕ್ರಯ್ಯ, ಹಯಾತ್ಸಾಬ್, ಅರುಣ್, ತಿರುಮಲಯ್ಯ, ಜಾಬೀರ್ಖಾನ್,ಮುನೀರ್, ಚಕ್ರಪಾಣಿ, ರಂಗನಾಥ್, ಪುಟ್ಟರಾಜು, ಗುಲ್ನಾಜ್, ಧನಂಜಯ್, ಮೋಹನ್, ಲಕ್ಷ್ಮೀಪತಿ, ಸ್ವಾಮಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!