ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಕ್ಕೆ ಸಿದ್ಧತೆ: ಡೀಸಿ

ಜೂನ್ 9ಕ್ಕೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆ ಆಯೋಜನೆ

157

Get real time updates directly on you device, subscribe now.

ತುಮಕೂರು: ಜೂನ್ 12ರಂದು ನಡೆಯಲಿರುವ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನದ ಅಂಗವಾಗಿ ಜೂನ್ 9ರಂದು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜೂನ್ 12ರಂದು ವಿಶ್ವ ಬಾಲಕಾಮಿಕ ವಿರೋಧಿ ದಿನ ಕಾರ್ಯಕ್ರಮದ ಅಂಗವಾಗಿ ಜೂ. 9 ರಂದು ಬೆಳಗ್ಗೆ 10 ಗಂಟೆಗೆ ನಗರದ ಬಾಲಭವನದ ಆವರಣದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಬಾಲಕಾರ್ಮಿಕರ ಸಂಕಷ್ಟಗಳು ವಿಷಯ ಕುರಿತು ಚಿತ್ರಕಲೆ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ಬಾಲಕಾರ್ಮಿಕತೆಯಿಂದ ಸಮಾಜದ ಮೇಲೆ ಪರಿಣಾಮ ವಿಷಯದ ಕುರಿತು ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆ ಆಯೋಜಿಸಲಾಗುವುದು. ಪ್ರತಿ ಸ್ಪರ್ಧೆಗಳಲ್ಲೂ ಕನಿಷ್ಠ 10 ಜನ ವಿದ್ಯಾರ್ಥಿಗಳು ಭಾಗವಹಿಸಬೇಕು, ಸ್ಪರ್ಧೆಯ ಸಂಪೂರ್ಣ ಜವಾಬ್ದಾರಿಯನ್ನು ಡಿಡಿಪಿಐ ವಹಿಸಿಕೊಳ್ಳಬೇಕೆಂದು ಡಿಡಿಪಿಐ ನಂಜಯ್ಯ ಅವರಿಗೆ ತಿಳಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ಪಟ್ಟಿಯನ್ನು ಜೂನ್ 10ರೊಳಗೆ ಬಾಲಕಾರ್ಮಿಕ ಇಲಾಖೆಗೆ ತಲುಪಿಸುವುದು ಹಾಗೂ ವಿಜೇತರಾದ ಮಕ್ಕಳಿಗೆ ಪ್ರಥಮ ಬಹುಮಾನ 3000 ರೂ., ಎರಡನೇ ಬಹುಮಾನ 2000 ರೂ., ಮೂರನೇ ಬಹುಮಾನ 1000 ರೂ. ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಬಾಲಭವನದಲ್ಲಿ ಸ್ಥಳಾವಕಾಶವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿದೇರ್ಶಕರು ಒದಗಿಸುವುದರ ಜೊತೆಗೆ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ನಂತರ ಜೂನ್ 10 ರಿಂದ ಜೂನ್ 18ರವರೆಗೆ ಬಾಲಕಾರ್ಮಿಕ ವಿರೋಧಿ ದಿನದ ಪ್ರಮಾಣ ವಚನ ಭೋದಿಸುವುದು ಹಾಗೂ ಮಕ್ಕಳ ಸಹಾಯವಾಣಿ 1098 ದೂರವಾಣಿ ಸಂಖ್ಯೆ ಬಗ್ಗೆ ಮಾಹಿತಿ ತಿಳಿಸಬೇಕು. ಈ ಕಾರ್ಯಕ್ರಮವನ್ನು ಆಯೋಜಿಸಲು ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಆಧರಿಸಿ, ಪ್ರಚಾರ ಕಾರ್ಯಕ್ರಮಗಳು ಮತ್ತು ಬೀದಿ ನಾಟಕಗಳನ್ನು ಕಾರ್ಮಿಕ ಇಲಾಖೆಯಿಂದ ಒದಗಿಸಬೇಕೆಂದು ಜಿಲ್ಲಾ ಕಾರ್ಮಿಕಾಧಿಕಾರಿಗಳಿಗೆ ಸೂಚಿಸಿದರು.
ಈ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಆಚರಿಸಲು ಜಿಲ್ಲೆಯಾದ್ಯಂತ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಅನಿರೀಕ್ಷಿತ ತಪಾಸಣೆಗಳನ್ನು ಕೈಗೊಳ್ಳಲು ಕ್ರಮವಹಿಸಬೇಕು. ಜೂನ್ 12ರಂದು ಜಿಲ್ಲಾ ಮಟ್ಟದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದ ನಂತರ ಜೂನ್ 20ರವರೆಗೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ತಹಶೀಲ್ದಾರ್ ಹಾಗೂ ಕಾರ್ಮಿಕ ನಿರೀಕ್ಷಕರು ಕಾರ್ಯಕ್ರಮ ಆಯೋಜಿಸಿ ವರದಿ ಮಾಡಬೇಕು. ಈ ಉದ್ದೇಶಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ ಆಯವ್ಯಯದಲ್ಲಿ ಪ್ರತಿ ತಾಲ್ಲೂಕಿಗೆ ಕಾರ್ಮಿಕ ಅಧಿಕಾರಿ ಅನುದಾನ ಬಿಡುಗಡೆ ಮಾಡುವರು ಎಂದು ತಿಳಿಸಿದರು.
ಜೂನ್ 12ರಂದು ಅಂದರೆ, ವಿಶ್ವ ಬಾಲಕಾಮಿಕ ವಿರೋಧಿ ದಿನದಂದು, ಜಾಗೃತಿ ಜಾಥಾವನ್ನು ಬೆಳಗ್ಗೆ 9 ಗಂಟೆಗೆ ಎಲ್ಲಾ ಅಧಿಕಾರಿಗಳು, ಸರ್ಕಾರೇತರ ಸಂಘ- ಸಂಸ್ಥೆಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಅಮಾನಿಕೆರೆ ಗ್ಲಾಸ್ ಹೌಸ್ ಆವರಣದಲ್ಲಿ ಸೇರ್ಪಡೆಯಾಗಬೇಕು. ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದ ನಂತರ ಜಾಗೃತಿ ಜಾಥಾ ನಡೆಸಬೇಕು. ಈ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಶಿಕ್ಷಕರು, ಬಿಆರ್ಸಿಗಳು ಹಾಗೂ ಕನಿಷ್ಠ 200 ಜನ ಪ್ರೌಢ ಶಾಲಾ ಮಕ್ಕಳು ಮತ್ತು ಪಿಯುಸಿ ವಿದ್ಯಾರ್ಥಿಗಳು ಹಾಜರಾಗುವಂತೆ ಕ್ರಮವಹಿಸಬೇಕು. ಜಾಗೃತಿ ಜಾಥಾವು ಗ್ಲಾಸ್ ಹೌಸ್ ಆವರಣದಿಂದ ಎಂ.ಜಿ.ರಸ್ತೆ, ಗಾಯತ್ರಿ ಚಿತ್ರ ಮಂದಿರ ಮುಂಭಾಗದಿಂದ ಟೌನ್ ಹಾಲ್ ವ್ರತ್ತದ ಮೂಲಕ ಖಾಸಗಿ ಬಸ್ ನಿಲ್ದಾಣದವರೆಗೆ ಚಲಿಸಿ ಮುಕ್ತಾಯಗೊಳ್ಳಬೇಕು ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ರಮೇಶ್, ಡಿಡಿಪಿಐ ನಂಜಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!