ಕಚೇರಿಗಳಿಗೆ ಜನರನ್ನು ಅಲೆದಾಡಿಸಬೇಡಿ: ಡೀಸಿ

232

Get real time updates directly on you device, subscribe now.

ಕುಣಿಗಲ್: ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೆ ವಿನಾಕಾರಣ ಅಲೆದಾಡಿಸದೆ, ಸೂಕ್ತ ಮಾಹಿತಿ ನೀಡಿ ಕಾಲಮಿತಿಯಲ್ಲಿ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಅಂಗವಾಗಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಕೆಲವಕ್ಕೆ ಸ್ಥಳದಲ್ಲೆ ಪರಿಹಾರ ಸೂಚಿಸಿದರು. ಇಲಾಖಾ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿ, ಅರ್ಜಿಗಳ ತ್ವರಿತ ವಿಲೆವಾರಿಗೆ ಕ್ರಮ ಕೈಗೊಳ್ಳಿ, ವಿನಾಕಾರಣ ಅವುಗಳನ್ನು ನಿಮ್ಮ ಬಳಿ ಇಟ್ಟುಕೊಂಡು ಸಮಸ್ಯೆ ಮಾಡಿಕೊಳ್ಳಬೇಡಿ, ಯಾವುದೇ ಅರ್ಜಿಗೂ ಸರಿಯಾದ ಮಾಹಿತಿ ನೀಡಿ ಸಾಧ್ಯವಾದಲ್ಲಿ ಬಗೆಹರಿಸಿ, ಇಲ್ಲವಾದಲ್ಲಿ ಸಂಬಂಧಪಟ್ಟ ವಿಭಾಗಕ್ಕೆ ಹೋಗುವ ಬಗ್ಗೆ ಮಾಹಿತಿ ನೀಡಿ ಸ್ಪಷ್ಟ ಹಿಂಬರಹ ನೀಡಿ, ವಿನಾಕಾರಣ ಅರ್ಜಿಗಳನ್ನು ಬಾಕಿ ಉಳಿಸಿಕೊಂಡು ಜನರನ್ನು ಅನಗತ್ಯವಾಗಿ ಅಲೆದಾಡುವಂತೆ ಮಾಡಬೇಡಿ, ತಾಲೂಕಿನಲ್ಲಿ ಖಾತೆ, ಬಗರ್ ಹುಕುಂ ಅರ್ಜಿ ಸೇರಿದಂತೆ ಇತರೆ ಸಮಸ್ಯೆಗಳಿವೆ ಎಲ್ಲವನ್ನು ಕಾಲಮಿತಿ ಹಾಕಿಕೊಂಡು ತ್ವರಿತಗತಿಯಲ್ಲಿ ಬಗೆಹರಿಸುವಂತೆ ಸೂಚಿಸಿದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ, ಸಾರ್ವಜನಿಕರ ಕೆಲಸ ಕಾರ್ಯಗಳು ನಿಗದಿತ ಸಮಯದೊಳಗೆ ಆಗುತ್ತಿಲ್ಲ, ಖಾತೆ, ಬಗರ್ ಹುಕುಂ ಸೇರಿದಂತೆ ರೈತರ ಭೂ ದಾಖಲೆಗಳ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ, ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿ ಈ- ಆಡಳಿತ ವ್ಯವಸ್ಥೆಗೆ ರೈತರ ದಾಖಲೆಗಳ ಕಂಪ್ಯೂಟರೀಕರಣ ಮಾಡಲು ಹಾಗೂ ಅಗತ್ಯ ವ್ಯವಸ್ಥೆಗೆ ತಾವೆ ಐದು ಲಕ್ಷ ರೂ. ನೀಡುವುದಾಗಿ ಹೇಳಿ ಇಲಾಖೆಯಲ್ಲಿ ಭ್ರಷ್ಟಾಚಾರ ನಿಯಂತ್ರಿಸಿ, ಸಾರ್ವಜನಿಕರಿಗೆ, ಭೂ ಮಾಲೀಕರಿಗೆ, ರೈತರಿಗೆ ಅವರ ಸೇವೆಗಳನ್ನು ಬೆರಳಂಚಿನಲ್ಲಿ ಸಿಗುವ ಹಾಗೆ ಡಿಜಿಟಲ್ ವ್ಯವಸ್ಥೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದರು.
ತಾಲೂಕು ಕುಂಬಾರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಕುಂಬಾರ ಗುಂಟಿ ಸ್ಮಶಾನ ಪ್ರದೇಶ 20 ಎಕರೆಗೂ ಅಧಿಕವಾಗಿದ್ದು ಸ್ಮಶಾನ ಪ್ರದೇಶದ ವ್ಯಾಪಕ ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸುವಂತೆ ಮನವಿ ಸಲ್ಲಿಸಿದ ಮೇರೆಗೆ ಈ ಬಗ್ಗೆ ತ್ವರಿತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಸಮರ್ಪಕ ಭೂ ದಾಖಲೆ ನಿರ್ವಹಣೆ ಸೇರಿದಂತೆ ಭೂ ಪ್ರಕರಣಗಳ ಬಗ್ಗೆ ವ್ಯಾಪಕ ದೂರು ಬಂದಿದ್ದು ಒಟ್ಟಾರೆ 21 ಅರ್ಜಿಗಳು ಸ್ವೀಕೃತವಾದವು, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ತಹಶೀಲ್ದಾರ್ ಮಹಾಬಲೇಶ್ವರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!