ಮದ್ಯಪಾನ ದೇಹ, ಮನಸ್ಸನ್ನು ಹಾಳು ಮಾಡುತ್ತೆ

110

Get real time updates directly on you device, subscribe now.

ತುಮಕೂರು: ಕುಡಿತ ಮನುಷ್ಯನ ದೇಹ ಮತ್ತು ಮನಸ್ಸು ಎರಡನ್ನು ಹಾಳು ಮಾಡುವುದರ ಜೊತೆಗೆ, ಸಮಾಜ ನಿಮ್ಮನ್ನು ನೋಡುವ ದೃಷ್ಟಿಕೋನವನ್ನು ಕೆಳಮಟ್ಟಕ್ಕೆ ತರುತ್ತದೆ ಎಂದು ತುಮಕೂರು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಮ್ಮ ತಿಳಿಸಿದರು.

ನಗರದ ಮಹಾವೀರ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜನಜಾಗೃತಿ ಸಮಿತಿ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಿದ್ದ 1538ನೇ ಮದ್ಯವರ್ಜನ ಶಿಬಿರದ ಐದನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮದ್ಯಪಾನದಿಂದ ಆಗುವ ದುಷ್ಪರಿಣಾಮ ಕುರಿತು ಮಾಹಿತಿ ನೀಡುತ್ತಿದ್ದ ಅವರು, ಕುಡಿತದಿಂದ ದೇಹದ ಬಹು ಅಂಗಾಂಗ ವೈಲ್ಯತೆ ಕಾಣುವುದರ ಜೊತೆಗೆ ಮನೆಯ ಆರ್ಥಿಕ ಸ್ಥಿತಿ ಹದಗೆಡಲಿದೆ, ಇದು ಮತ್ತೊಂದು ವ್ಯಸನಕ್ಕೆ ದಾರಿ ಮಾಡಿಕೊಡಲಿದೆ ಎಂದರು.
ತುಮಕೂರು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸುಮಾರು 438 ಖೈದಿಗಳಿದ್ದು, ಇವರಲ್ಲಿ ಶೇ.70 ರಷ್ಟು ಜನರು ಕುಡಿತದ ಅಮಲಿನಲ್ಲಿ ತಪ್ಪು ಮಾಡಿದವರು, ಕುಡಿತ ಮನುಷ್ಯನನ್ನು ಪ್ರಲೋಭನೆಗೆ ಒಳಪಡಿಸುತ್ತಿದೆ, ಇಂತಹ ಸಂದರ್ಭದಲ್ಲಿ ತನಗೆ ಅರಿವಿಲ್ಲದೆ ಅನೇಕ ತಪ್ಪುಗಳನ್ನು ಮಾಡಿ ಜೈಲು ಶಿಕ್ಷೆಗೆ ಒಳಗಾಗಿ ಬರುವವರನ್ನು ಕಾಣುತಿದ್ದೇವೆ, ಹಾಗಾಗಿ ಇಂತಹ ದುಶ್ಚಟದಿಂದ ದೂರ ಇರಬೇಕೆಂದು ಶಾಂತಮ್ಮ ಸಲಹೆ ಮಾಡಿದರು.
ಬೆಳ್ಳಿ ಬ್ಲಡ್ ಬ್ಯಾಂಕ್ ನ ಬೆಳ್ಳಿ ಲೋಕೇಶ್ ಮಾತನಾಡಿ, ವ್ಯಕ್ತಿ ಸಮಾಜದಲ್ಲಿ ಘನತೆ, ಗೌರವದಿಂದ ಬದುಕುಬೇಕಾದರೆ ದುಶ್ಚಟಗಳಿಂದ ದೂರ ಇರಬೇಕು, ದುಃಖ, ಸುಖದ ನೆಪದಲ್ಲಿ ಕುಡಿಯುವುದನ್ನು ಬಿಟ್ಟು ಇಂತಹ ಸಂದರ್ಭಗಳಲ್ಲಿ ಕುಟುಂಬದವರೊಂದಿಗೆ ಕಾಲ ಕಳೆಯುವ ಮೂಲಕ ಒಳ್ಳೆಯ ಬದುಕನ್ನು ರೂಢಿಸಿಕೊಳ್ಳಬೇಕು, ಕುಡಿದ ಅಮಲಿನಲ್ಲಿ ನಾವು ಮಾಡುವ ತಪ್ಪುಗಳು ನಮ್ಮನ್ನು ಮಾರಣಾಂತಿಕ ರೋಗಗಳಿಗೆ ದೂಡುವ ಸಾಧ್ಯತೆ ಹೆಚ್ಚು, ಇದರ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿವಿ ಕುಲಸಚಿವ ಡಾ.ರಮೇಶ್ ಸಾಲಿಯಾನ, ಬಡತನ, ಅನಕ್ಷರತೆಯ ನೆಪದಲ್ಲಿ ಮನುಷ್ಯ ಕುಡಿತದ ಚಟಕ್ಕೆ ಬಲಿಯಾಗಿ ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಿದ್ದಾರೆ, ಪ್ರಸ್ತುತ ಸಂದರ್ಭದಲ್ಲಿ ಹಣ, ಅಂತಸ್ತು, ಅಧಿಕಾರ ಇದ್ದವನು ಶ್ರೀಮಂತನಲ್ಲ, ಒಳ್ಳೆಯ ಆರೋಗ್ಯ ಇರುವವನೇ ನಿಜವಾದ ಶ್ರೀಮಂತ, ಈ ಸಮಾಜಕ್ಕಾಗಿ ನೀವು ಕುಡಿತದ ಚಟ ಬಿಡುವುದು ಬೇಡ, ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ಕುಡಿತದಂತಹ ದುಶ್ಚಟದಿಂದ ದೂರವಿರಿ, ತಪ್ಪು ಮಾಡುವುದು ಸಹಜ, ಅಪರಾಧಿ ಪ್ರಜ್ಞೆ ಬೇಡ, ತಪ್ಪು ತಿದ್ದಿಕೊಳ್ಳಲು ಇದೊಂದು ಸುವರ್ಣ ಅವಕಾಶ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಬಿರದ ಅಧ್ಯಕ್ಷ ಪ್ರೆಸ್ ರಾಜಣ್ಣ ವಹಿಸಿದ್ದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಯೋಜನಾಧಿಕಾರಿ ಸುನೀತಾಪ್ರಭು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಡಾ.ಸಂಜಯ್ ನಾಯಕ್, ಸಮಾಜ ಸೇವಕ ಅಮರನಾಥಶೆಟ್ಟಿ, ರಾಮಲಕ್ಷ್ಮಮ್ಮ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!