ನರಸಿಂಹಮೂರ್ತಿ
ಕೊರಟಗೆರೆ: ಭೂಗಳ್ಳರು ಬೆಟ್ಟ-ಗುಡ್ಡಗಳಿಗೆ ಕನ್ನ ಹಾಕಿ ಅಕ್ರಮವಾಗಿ ಕೆರೆ ಕಟ್ಟೆಗಳಿಂದ ಸಮೃದ್ದ ಮಣ್ಣು ದೋಚುತ್ತಿದ್ದಾರೆ. ಸರಕಾರಿ ಖರಾಬು-ಗೋಮಾಳದ ಜಮೀನಿಗೆ ಭದ್ರತೆ ಎಂಬುದು ಮರೀಚಿಕೆಯಾಗಿದೆ. ಕಂದಾಯ ಇಲಾಖೆ ಅಧಿಕಾರಿವರ್ಗ ಮತ್ತು ಸ್ಥಳೀಯ ಗ್ರಾಪಂ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯದಿಂದ ಅಮೂಲ್ಯವಾದ ಬೆಟ್ಟ ಮತ್ತು ಕೆರೆಯ ಮಣ್ಣು ಸರಾಗವಾಗಿ ಖಾಲಿ ಆಗುತ್ತಿದೆ.
ಕೊರಟಗೆರೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಣ್ಣಿನ ರಕ್ಷಣೆ ಬೇಕಾಗಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ಕಣ್ಮುಚ್ಚಿ ಕುಳಿತಿದೆ. ಸ್ಥಳೀಯ ಗ್ರಾಪಂ ಪ್ರಭಾವಿ ಅಧಿಕಾರಿವರ್ಗ ಮತ್ತು ರಾಜಕೀಯ ಧುರೀಣರ ಪರೋಕ್ಷ ಬೆಂಬಲದಿಂದ ಪರವಾನಗಿ ಇಲ್ಲದೇ ಪ್ರತಿನಿತ್ಯ ಸಾವಿರಾರು ಲೋಡು ಕೆರೆ-ಕಟ್ಟೆ ಮತ್ತು ಬೆಟ್ಟ-ಗುಡ್ಡ ಸಮೃದ್ದ ಮಣ್ಣು ಎಗ್ಗಿಲ್ಲದೇ ಸರಬರಾಜು ಮಾಡುತ್ತೀದ್ದಾರೆ.
ಜೆಸಿಬಿ ಮಾಲೀಕರು ಮಣ್ಣಿನ ಬೆಲೆಯನ್ನು ನಿಗಧಿ ಮಾಡ್ತಾರೇ.. ಟ್ರಾಕ್ಟರ್ ಡ್ರೈವರ್ಗೆ ಮಣ್ಣು ಸಾಗಾಣಿಕೆಯ ಜವಾಬ್ದಾರಿ ವಹಿಸ್ತಾರೇ.. ಕೊರಟಗೆರೆ ಪಟ್ಟಣದ ನಾಲ್ಕು ದಿಕ್ಕಿನಲ್ಲಿರುವ ಬೆಟ್ಟಗುಡ್ಡ, ಕೆರೆಕಟ್ಟೆ, ಗೋಮಾಳದ ಜಮೀನು, ಸರಕಾರಿ ಭೂಮಿ, ಅರಣ್ಯ ಪ್ರದೇಶದ ಸಮೃದ್ದ ಮಣ್ಣಿಗೆ ಇವರೇ ಮಾಲೀಕರಾಗಿ ಪ್ರತಿ ಟ್ರಾಕ್ಟರ್ ಲೋಡು ಮಣ್ಣಿಗೆ 750 ರೂ. ಮತ್ತು ಲಾರಿ ಲೋಡಿಗೆ 1500 ರೂ. ನಿಗಧಿ ಮಾಡಿದ್ದಾರೆ.
ಕಂದಾಯ ಇಲಾಖೆ ಮತ್ತು ಸ್ಥಳೀಯ ಗ್ರಾಪಂ ಒಳಒಪ್ಪಂದ ಮಾಡಿಕೊಂಡಿರುವ ಭೂಗಳ್ಳರು ರಾತ್ರೋರಾತ್ರಿ ಕೆರೆ ಮತ್ತು ಬೆಟ್ಟದ ಒಡಲನ್ನು ಬಗೆಯುವ ಘಟನೆಯಾರ ಭಯವು ಇಲ್ಲದೇ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತಿನಿತ್ಯ ಹತ್ತಾರು ಜೆಸಿಬಿ ಮೂವತ್ತಕ್ಕೂ ಹೆಚ್ಚು ಟ್ರಾಕ್ಟರ್ ಮತ್ತು ಹತ್ತಕ್ಕೂ ಅಧಿಕ ಟ್ರಾಕ್ಟರ್ ಗಳಲ್ಲಿ ಮಣ್ಣು ಸಾಗಾಣಿಕೆ ನಡೆಯುತ್ತಿದೆ. ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿ ಕೋಡಲೇ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ.
ಸೌತೆಕಾಯಿ ಪ್ಯಾಕ್ಟರಿಗೆ ಮಣ್ಣು ಸರಬರಾಜು..
ಮಲ್ಲೇಶಪುರಕೆರೆ ಮತ್ತು ಸರಕಾರಿ ಬೆಟ್ಟದಿಂದ ರಾಜ್ಯ ಹೆದ್ದಾರಿ ಸಮೀಪದ ಸೌತೆಕಾಯಿ ಪ್ಯಾಕ್ಟರಿಗೆ ಅಕ್ರಮವಾಗಿ ನೂರಾರು ಲೋಡು ಮಣ್ಣು ಸರಬರಾಜು ಮಾಡಲಾಗುತ್ತಿದೆ. ಜೆಸಿಬಿಗೆ ಗಂಟೆಗೆ 1200 ರೂ. ಮತ್ತು 1 ಟ್ರಾಕ್ಟರ್ ಮಣ್ಣಿಗೆ 750ರೂ. ನಂತೆ ಪ್ಯಾಕ್ಟರಿಯ ಮಾಲೀಕ ಹಣವನ್ನು ನೀಡುತ್ತಿದ್ದಾರೆ.
ಸರಕಾರಿ ಇಲಾಖೆಗಳ ಸಮನ್ವಯತೆ ಕೊರತೆ
ಗ್ರಾಮೀಣ ಪ್ರದೇಶಗಳ ಕೆರೆಯ ಅಭಿವೃದ್ದಿ ಮತ್ತು ಸಂರಕ್ಷಣೆಗೆ ಸರಕಾರಿ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಂತಾಗಿದೆ. ಮೀನುಗಾರಿಕೆ, ಜಿಪಂ ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ರಕ್ಷಣೆಗೆ ಅಧಿಕಾರಿಗಳ ಇಚ್ಚಾಶಕ್ತಿಯ ಅಗತ್ಯವಿದೆ. ಬೆಟ್ಟಗುಡ್ಡ, ಸರಕಾರಿ ಜಮೀನು ಮತ್ತು ಗೋಮಾಳದ ಭೂಮಿಯ ರಕ್ಷಣೆಗೆ ಕಂದಾಯ ಮತ್ತು ಗಣಿ ಇಲಾಖೆ ಬರಬೇಕಿದೆ. ಒಬ್ಬರ ಮೇಲೊಬ್ಬರು ದೂರುವುದರಲ್ಲೇ ನಿರತರಾಗಿರುವ ಅಧಿಕಾರಿವರ್ಗ ಕಚೇರಿಯಿಂದ ಹೊರಗಡೆ ಬರಬೇಕಿದೆ.
ಬೆಟ್ಟಗುಡ್ಡ ಮತ್ತು ಕೆರೆಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಣ್ಣು ಸರಬರಾಜಿಗೆ ಕಂದಾಯ ಇಲಾಖೆ ಪರವಾನಗಿ ಕಡ್ಡಾಯವಾಗಿ ಪಡೆಯಬೇಕಿದೆ. ಸರಕಾರಿ ಗೋಮಾಳ ಮತ್ತು ಕೆರೆಗಳಿಂದ ಅಕ್ರಮವಾಗಿ ಮಣ್ಣು ತೆಗೆಯಲು ಅವಕಾಶವಿಲ್ಲ. ವಾಣಿಜ್ಯ ಉದ್ದೇಶಕ್ಕಾಗಿ ಸರಕಾರಿ ಗೋಮಾಳ-ಬೆಟ್ಟಗುಡ್ಡ ಮಣ್ಣು ತೆಗೆದರೇ ಕಠಿಣಕ್ರಮ ಕೈಗೊಳ್ಳುತ್ತೇವೆ.
ಡಾ.ಸೋಮಪ್ಪ ಕಡಕೋಳ, ಎಸಿ, ಮಧುಗಿರಿ.
1 ಟನ್ ಮಣ್ಣಿಗೆ 40ರೂನಂತೆ ತೆರಿಗೆ ಪಾವತಿಸಿ ಜಿಲ್ಲಾಧಿಕಾರಿ ಪರವಾನಗಿ ಪಡೆಯಬೇಕಿದೆ. ಸರಕಾರಿ ಗೋಮಾಳ ಮತ್ತು ಬೆಟ್ಟಗುಡ್ಡದಲ್ಲಿ ಅಕ್ರಮವಾಗಿ ಮಣ್ಣುತೆಗೆಯಲು ಅವಕಾಶವಿಲ್ಲ. ಪರವಾನಗಿ ಪಡೆಯದೇ ಮಣ್ಣು ಸರಬರಾಜು ಮಾಡಿದರೆ ಕಾನೂನುರಿತ್ಯ ಕ್ರಮ ಕೈಗೊಳ್ಳುತ್ತೇವೆ. ಕಂದಾಯ ಮತ್ತು ಗಣಿ ಇಲಾಖೆ ಜಂಟಿಯಾಗಿ ಕಾರ್ಯಚರಣೆ ನಡೆಸುತ್ತೇವೆ.
ಡಾ.ಎಂ.ಜೆ.ಮಹೇಶ್, ಉಪನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ತುಮಕೂರು
Comments are closed.