ಡಾ.ರಂಗನಾಥ್ ಪ್ರಚಾರಕ್ಕೆ ಸೀಮಿತ: ಕೃಷ್ಣಕುಮಾರ್

257

Get real time updates directly on you device, subscribe now.

ಕುಣಿಗಲ್: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗಿರುವ ಸಾಧನೆಯನ್ನು ನಾನು ಮಾಡಿದೆ ಎಂದು ಕುಣಿಗಲ್ನ ಕಾಂಗ್ರೆಸ್ ಶಾಸಕರು ಹೇಳಿಕೊಳ್ಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಮುಖಂಡ, ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಹೇಳಿದರು.

ತಾಲೂಕಿನ ಅಮೃತೂರಿನಲ್ಲಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಅಭಿನಂದನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಾರ್ಕೋನಹಳ್ಳಿ- ಮಂಗಳ ಫೀಡರ್ ಕೆನಾಲ್ ಕಾಮಗಾರಿ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಉಸ್ತುವಾರಿ ಸಚಿವ ಮಾಧುಸ್ವಾಮಿಯವರನ್ನು ಮಾರ್ಕೋನಹಳ್ಳಿ ಜಲಾಶಯದ ಪೂಜೆಗೆ ಕರೆತಂದಾಗ ಈ ಭಾಗದ ಜನರು ನಾವು ಸತತ ಒತ್ತಡ ಹೇರಿದ್ದರಿಂದ ಮೂಲೆಗುಂಪಾಗಿದ್ದ ಕಾಮಗಾರಿಗೆ ಮರುಜೀವ ತುಂಬಿ ಸರ್ಕಾರದ ಮಟ್ಟದಲ್ಲಿ ನೀರಾವರಿ ಸಚಿವರು, ಮುಖ್ಯಮಂತ್ರಿಗಳ ಗಮನ ಸೆಳೆದು ಸತತ ಒತ್ತಡ ಹಾಕಿದ್ದರಿಂದ ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ, ಹಾಲಿ ಶಾಸಕರ ಸಂಬಂಧಿಯೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಫೀಡರ್ ಕೆನಾಲ್ ಕಾಮಗಾರಿ ಮಾಡಿಸದೆ ಶಾಸಕರು ಸುಮ್ಮನಿದ್ದರು. 2008 ರಲ್ಲಿ ಸಿಎಂ ಯಡಿಯೂರಪ್ಪನವರು ನಿಡಸಾಲೆಯ ಅಜ್ಜಿಯ ಮನೆಗೆ ಬಂದಿದ್ದಾಗ ಗ್ರಾಮಸ್ಥರು, ನಾವು ಮನವಿ ನೀಡಿದ ಮೇರೆಗೆ ಸಣಬಘಟ್ಟ ಗ್ರಾಮದಲ್ಲಿ ಕೆಪಿಟಿಸಿಎಲ್ ರಿಸಿವಿಂಗ್ ಸ್ಟೇಷನ್ ಕಾಮಗಾರಿ ಮಂಜೂರು ಮಾಡಿದ್ದರು, ಆದರೆ ಅಂದು ತಾಲೂಕಿನ ರಾಜಕಾರಣದಲ್ಲಿ ಅಂಬೆಗಾಲಿಡುತ್ತಿದ್ದ ಶಾಸಕರು ಇಂದು ಏಕಾಏಕಿ ತಾವೆ ಹೋಗಿ ಸಂಸದರು, ಕೆಪಿಸಿಸಿ ಅಧ್ಯಕ್ಷರು ಕಾರಣ ಎಂದು ಸುಳ್ಳು ಹೇಳುವ ಮೂಲಕ ತಾಲೂಕಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜವಾಬ್ದಾರಯುತ ಸ್ಥಾನದಲ್ಲಿರುವ ಶಾಸಕರು, ನರೇಗ ಕಾಮಗಾರಿಗೂ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಗ್ರಾಪಂ ಸದಸ್ಯರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ, ತಮ್ಮ ಅವಧಿಯಲ್ಲಿ ಯಾವುದೇ ಶಾಶ್ವತ ಕಾಮಗಾರಿ ಮಾಡಿಸದ ಕಾಂಗ್ರೆಸ್ನ ಶಾಸಕರು ಬರಿ ಫೇಸ್ಬುಕ್ಗೆ ಸೀಮಿತವಾಗಿ ಪ್ರಚಾರಕ್ಕೆ ಸೀಮಿತವಾಗಿದ್ದಾರೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್, ಕಾಂಗ್ರೆಸ್ ಶಾಸಕರು, ಸಂಸದರು, ಮಾರ್ಕೋನಹಳ್ಳಿ ಜಲಾಶಯದ ನೀರನ್ನು ಕುಡಿಯುವ ನೀರು ಸೇರಿದಂತೆ ಅನ್ಯ ಉದ್ದೇಶಕ್ಕೆ ಮೀಸಲಿರಿಸುವ ಮೂಲಕ, ಜಲಾಶಯದ ಅಚ್ಚುಕಟ್ಟು ಭಾಗದ ಜನರಿಗೆ ಮೋಸ ಮಾಡಿದ್ದಾರೆ. ಕುಣಿಗಲ್ ದೊಡ್ಡಕೆರೆಯ ನೀರನ್ನು ಸಹ ಕುಡಿಯಲು ಮೀಸಲಿರಿಸಿ ತೂಬುಗಳನ್ನು ಸೀಲ್ ಮಾಡಿಸಿದ್ದು, ಮಾರ್ಕೋನಹಳ್ಳಿ ಜಲಾಶಯದ ತೂಬುಗಳನ್ನು ಸೀಲ್ ಮಾಡಿಸುವ ದಿನ ದೂರ ಇಲ್ಲ, ಅಚ್ಚುಕಟ್ಟು ಪ್ರದೇಶದ ರೈತರು ಕಾಂಗ್ರೆಸ್ನ ಶಾಸಕರು ಮಾಡಿರುವ ಅನ್ಯಾಯ ಗಮನಿಸಬೇಕು, ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ, ಜನತೆ ಮುಂದೆ ವಾಸ್ತವ ತೆರದಿಡುತ್ತಿದ್ದೇವೆ. ಜಲಾಶಯದ ನೀರನ್ನು ಬೇರೆ ಉದ್ದೇಶಕ್ಕೆ ಮೀಸಲಿಟ್ಟಲ್ಲಿ ಕೃಷಿಗೆ ನೀರು ಸಿಗುವುದಿಲ್ಲ ಎಚ್ಚರ ಇರಲಿ, ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ನವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕೆಂದರು.
ಮುಖಂಡರಾದ ಚಿಕ್ಕರಾಮಯ್ಯ, ದಿನೇಶ, ಕೆಂಪಗೂಳಿಗೌಡ, ಸುರೇಶ್, ರವಿ, ನಾಗಾನಂದ, ವೆಂಕಟೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!