ಫಲಾನುಭವಿ ರೈತರಿಗೆ ಸಿಕ್ತು ಜಮೀನು

ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದವನಿಗೆ ತಕ್ಕ ಶಾಸ್ತಿ- ತಹಶೀಲ್ದಾರ್ ಕಾರ್ಯಕ್ಕೆ ಮೆಚ್ಚುಗೆ

329

Get real time updates directly on you device, subscribe now.

ಶಿರಾ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 61 ರಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಯಲ್ಲಿ ಮಂಜೂರಾದ ಫಲಾನುಭವಿ ರೈತರನ್ನು ಸಾಗುವಳಿ ಮಾಡಲು ಬಿಡದೆ ಹೆದರಿಸಿ ದಬ್ಬಾಳಿಕೆಯಿಂದ ಭೀಮರಾಜು ಉರ್ಫ್ ಭೀಮಾ ಬೋವಿ ಬಿನ್ ಹನುಮಂತ ಭೋವಿ ಎಂಬಾತನು ವಶಪಡಿಸಿಕೊಂಡಿದ್ದನು. ಸುಮಾರು ನಾಲ್ಕು ವರ್ಷಗಳಿಂದ ರೈತರು ಸಾಗುವಳಿ ಮಾಡಲು ಹೋದಾಗ ದೌರ್ಜನ್ಯಕ್ಕೊಳಗಾಗಿ ನ್ಯಾಯಕ್ಕಾಗಿ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಕಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ, ತಹಶೀಲ್ದಾರ್ ಮಮತಾ ಅವರಿಗೆ ರೈತರು ದೂರು ನೀಡಿದಾಗ ಅದನ್ನು ದಾಖಲಿಸಿಕೊಂಡು ಈತನನ್ನು ಕರೆಸಿ ವಿಚಾರಣೆ ನಡೆಸಿ ದಿನಾಂಕ ಜೂನ್ 7 ರಂದು ಬೆಳಗ್ಗೆ 9.30 ರಿಂದ ಡಿವೈಎಸ್ಪಿ ಸಹಯೋಗದೊಂದಿಗೆ ತಹಶೀಲ್ದಾರ್ ಮಮತಾ ದಿಡೀರ್ ಕಾರ್ಯಾಚರಣೆ ನಡೆಸಿ ಒತ್ತುವರಿ ಜಮೀನನ್ನು ತೆರವು ಮಾಡಿಸಿ ಮಂಜೂರು ಆಗಿರುವ ಜಮೀನನ್ನು ಅಳತೆ ಮಾಡಿ 18 ಎಕರೆ ಜಮೀನನ್ನು 9 ಫಲಾನುಭವಿಗಳಿಗೆ ಹಸ್ತಾಂತರ ಮಾಡಿದ್ದಾರೆ. ರೈತರ ಮೇಲೆ ದಬ್ಬಾಳಿಕೆ ಮಾಡಿ ಸ್ವತಃ ತಾನೇ ಸುಳ್ಳು ಕೇಸ್ ದಾಖಲಿಸುತ್ತಿದ್ದ ಭೀಮರಾಜು ಮತ್ತು ಕುಟುಂಬದವರ ಮೇಲೆ ಪ್ರಕರಣ ಇದೀಗ ದಾಖಲಾಗಿದೆ. ಇದೇ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದ ಜಮೀನಿನಲ್ಲಿ ಕಾಡು ಪ್ರಾಣಿಗಳ ತಲೆ ಮತ್ತು ಮೂಳೆ ಸಿಕ್ಕಿವೆ, ಪ್ರಾಣಿಗಳನ್ನು ಬೇಟೆ ಆಡಲು ಬಳಸುತ್ತಿದ್ದ ಸ್ಫೋಟಕ ವಸ್ತುಗಳು ಹಾಗೂ ಆಯುಧಗಳು ದೊರಕಿವೆ. ಇದಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಅರಣ್ಯ ಇಲಾಖೆಯಿಂದ ಮತ್ತು ಪೋಲಿಸ್ ಇಲಾಖೆಯಿಂದ ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸರ್ಕಾರಿ ಜಮೀನನ್ನು ಒತ್ತುವರಿ ಮಾಡುವ ಭೂ ಮಾಫಿಯಾದವರಿಗೆ ತಹಶೀಲ್ದಾರ್ ಮತ್ತು ಡಿವೈಎಸ್ಪಿ ತಂಡ ಕಾನೂನಿನ ಅಡಿಯಲ್ಲಿ ಪಾಠ ಕಲಿಸಿದ್ದಾರೆ. ಈ ಮೂಲಕ ತಾಲ್ಲೂಕಿನಲ್ಲಿ ಭೂ ಮಾಫಿಯಾ ಮಾಡುವವರಿಗೆ ಎಚ್ಚರಿಕೆ ಗಂಟೆಯಾಗಿದೆ, ರೈತರ ಪರವಾಗಿ ಕೆಲಸ ನಿರ್ವಹಿಸಿ ಅವರಿಗೆ ನ್ಯಾಯ ಕೊಡಿಸಲು ಮುಂದಾದ ಶಿರಾ ತಾಲ್ಲೂಕು ತಹಶೀಲ್ದಾರ್ ಮಮತ.ಎಂ ಹಾಗೂ ಡಿವೈಎಸ್ಪಿ ಕುಮಾರಪ್ಪ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒತ್ತುವರಿ ಭೂಮಿ ತೆರವು ಕಾರ್ಯಾಚರಣೆಯಲ್ಲಿ ಸಿಪಿಐ ರವಿಕುಮಾರ್, ಪಿಎಸ್ಐ ಭಾಸ್ಕರ್, ಪಿಎಸ್ಐ ಪಾಲಾಕ್ಷ ಪ್ರಭು, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್ ಮತ್ತು ರಾ.ನಿ.ಉಮೇಶ್, ಗ್ರಾಮ ಲೆಕ್ಕಿಗರು ಸರ್ವೆಯರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!