ಸ್ಮಶಾನ ಒತ್ತುವರಿ ದೂರು- ಅಧಿಕಾರಿಗಳಿಂದ ಪರಿಶೀಲನೆ

182

Get real time updates directly on you device, subscribe now.

ಕುಣಿಗಲ್: ಪಟ್ಟಣದ 19ನೇ ವಾರ್ಡ್ನಲ್ಲಿರುವ ಕುಂಬಾರಗುಂಡಿ ಸ್ಮಶಾನ ಒತ್ತುವರಿಯಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣಕ್ಕೆ ಹೊಂದಿಕೊಂಡಿರುವ ಸರ್ವೇ ನಂಬರ್ 89ರಲ್ಲಿ 20.04 ಎಕರೆ ವಿಸ್ತೀರ್ಣ ಇರುವ ಕುಂಬಾರಗುಂಡಿ ಸ್ಮಶಾನ ಒತ್ತುವರಿಯಾಗಿದೆ ಎಂದು ಸಂಘ ಸಂಸ್ಥೆಗಳು, ಸಾರ್ವಜನಿಕರು ದೂರು ನೀಡಿದ್ದರು. ಈ ಮಧ್ಯೆ ಸದರಿ ಸ್ಮಶಾನ ಪ್ರದೇಶಕ್ಕೆ ಹೊಂದಿಕೊಂಡಂತೆ ಖಾಸಗಿ ಜಮೀನಿನಲ್ಲಿ ನಿವೇಶನ ವಿಂಗಡನೆ ಕಾರ್ಯ ಆರಂಭವಾಗಿದ್ದು ಸ್ಮಶಾನ ಪ್ರದೇಶ ಅತಿಕ್ರಮಣವಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ತುಮಕೂರು ಲೋಕಾಯುಕ್ತ ನಿರೀಕ್ಷಕ ವಿಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು.
ಈ ವೇಳೆ ತಹಶೀಲ್ದಾರ್ ಮಹಾಬಲೇಶ್ವರ್, ಮುಖ್ಯಾಧಿಕಾರಿ ಶಿವಪ್ರಸಾದ್, ತಾಲೂಕು ಸರ್ವೇಯರ್ ನರಸೇಗೌಡ, ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಸ್ಥಾಯಿಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಕೋಟೆ ನಾಗಣ್ಣ ಇತರರು ಇದ್ದರು.
ಅಧಿಕಾರಿಗಳು ಸ್ಥಳ ಪರಿಶೀಲನೆ ವೇಳೆ ಖಾಸಗಿ ಜಮೀನಿನವರ ಪರವಾಗಿ, ಸ್ಮಶಾನ ಒತ್ತುವರಿಯಾಗಿದೆ ಎಂದು ದೂರು ನೀಡಿದವರ ನಡುವೆ ವಾದ ವಿವಾದ ನಡೆಯಿತು. ತೀವ್ರ ವಾಗ್ವಾದ ನಡೆಯುವ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್ ಮಹಾಬಲೇಶ್ವರ್ ಇಡೀ ಪ್ರದೇಶವನ್ನು ಸರ್ವೇ ಮಾಡಲು ಸೂಚನೆ ನೀಡಲಾಗಿದೆ, ಶೀಘ್ರದಲ್ಲೆ ವರದಿ ನೀಡಲು ಸೂಚನೆ ನೀಡಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಗೊಂದಲಬೇಡ ಎಂದರು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ ಸ್ಮಶಾನ ಒತ್ತುವರಿ ಮಾಡಿ ನಿವೇಶನ ವಿಂಗಡನೆ ಮಾಡಿದ್ದಲ್ಲಿ ಸರ್ವೇ ವರದಿಯಲ್ಲಿ ಒತ್ತುವರಿ ಕಂಡು ಬಂದಲ್ಲಿ ಕೂಡಲೆ ತೆರವುಗೊಳಿಸುತ್ತೇವೆ, ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.

Get real time updates directly on you device, subscribe now.

Comments are closed.

error: Content is protected !!