ಸಾಗುವಳಿದಾರರ ಹಕ್ಕು ರಕ್ಷಣೆಗೆ ಆಗ್ರಹಿಸಿ ಧರಣಿ 14ಕ್ಕೆ

211

Get real time updates directly on you device, subscribe now.

ತುಮಕೂರು: ರೈತರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ, ದಬ್ಬಾಳಿಕೆ- ಕಿರುಕುಳ ಖಂಡಿಸಿ, ಬಗರ್ ಹುಕುಂ ಸಾಗುವಳಿದಾರರ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜೂ. 14 ರಿಂದ ರೈತರ ಬೃಹತ್ ಅನಿರ್ಧಿಷ್ಟಾವಧಿ ಧರಣಿಯನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದೆ.

ದೌರ್ಜನ್ಯ, ದಬ್ಬಾಳಿಕೆ ಬಳಸಿ ಅರಣ್ಯ ಇಲಾಖೆ ಮೂಲಕ ಕಿತ್ತುಕೊಂಡಿರುವ ಬಗರ್ ಹುಕಂ ಸಾಗುವಳಿ ಭೂಮಿ ಮರಳಿಸಲು, ಎಲ್ಲಾ ಬಗರ್ ಹುಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು, ಸಾಗುವಳಿ ಮಂಜೂರಾತಿ ಆದೇಶ ಪಡೆದಿರುವ ಎಲ್ಲಾ ಬಗರ್ ಹುಕುಂ ರೈತರಿಗೆ ಪಹಣಿ ವಿತರಿಸಲು, ಬಗರ್ ಹುಕುಂ ಸಕ್ರಮ ಕೋರಿ ಅರ್ಜಿ ಸಲ್ಲಿಸಲು ಅವಕಾಶವನ್ನು ವಿಳಂಬ ಮಾಡದೇ ಕಲ್ಪಿಸಲು, ವಸತಿ ರಹಿತರಿಗೆ ಮನೆ- ನಿವೇಶನಕ್ಕಾಗಿ ಸರ್ಕಾರಿ ಭೂಮಿ ಲಭ್ಯ ಇಲ್ಲದ ಕಡೆ ಭೂ ಸ್ವಾಧೀನದ ಮೂಲಕ ಮನೆ -ನಿವೇಶನ ಒದಗಿಸಲು, ವಿವಿಧ ಯೋಜನೆಗಳಿಗೆ ಭೂ ಸ್ವಾಧೀನಕ್ಕೆ ಒಳಗಾದ ಬಗರ್ ಹುಕುಂ ಸಾಗುವಳಿದಾರರು ಸೇರಿದಂತೆ ಎಲ್ಲಾ ರೈತರಿಗೆ ಪರಿಹಾರದ ಹಣ ನೀಡಲು ಆಗ್ರಹಿಸಿ ರೈತರ ಬೃಹತ್ ಧರಣಿಯನ್ನು ನಡೆಸಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಟಿ.ಯಶವಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ ಎಲ್ಲಾ ಹತ್ತು ತಾಲ್ಲೂಕುಗಳಿಂದ ನೂರಾರು ರೈತರು ಈ ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ, ಅಂದು ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ನಿಂದ ಮೆರವಣಿಗೆ ಮೂಲಕ ಬಂದು ಧರಣಿ ಕುಳಿತುಕೊಳ್ಳಲಾಗುವುದು ಎಂದರು.
ಕೋವಿಡ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಅರಣ್ಯ ಇಲಾಖೆಯವರು ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಗಂಗಯ್ಯನ ಪಾಳ್ಯ, ಅಮ್ಮನಘಟ್ಟ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಹಲವಾರು ಕಡೆ ರೈತರನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸಿದ್ದಾರೆ. ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ನೂರಾರು ತೆಂಗು, ಮಾವು ಮುಂತಾದ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳು ಹಾಗೂ ಬೆಳೆಗಳನ್ನು ನಾಶಪಡಿಸಿದ್ದಾರೆ. ಈ ಸಂದರ್ಭ ಆಕ್ರಂದನ, ನೋವುಗಳು ಮಾಧ್ಯಮದಲ್ಲಿ ಬಂದಾಗ ಮೊಸಳೆ ಕಣ್ಣೀರು ಸುರಿಸುವ ಸರ್ಕಾರಗಳು ಸ್ವಲ್ಪ ದಿನದ ನಂತರ ಮತ್ತೊಬ್ಬ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗುತ್ತಿದ್ದಾರೆ. ಇದಕ್ಕೆ ಕೊನೆ ಯಾವಾಗ ಎಂದು ಈ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಸಾವಿರಾರು ರೈತರು, ಕೃಷಿ ಕೂಲಿಕಾರರು, ದಲಿತರು 40- 50 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಸಾಗುವಳಿ ಸಕ್ರಮ ಚೀಟಿಗಳು ಇರುವ ರೈತರನ್ನು ಸಹ ಒಕ್ಕಲೆಬ್ಬಿಸುವ ಆಕ್ರಮಣಗಳಿಗೆ ಗುರಿ ಮಾಡಲಾಗಿದೆ. ಫಾರಂ 50, 53, 57 ರಲ್ಲಿ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ರೈತರನ್ನು ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಲಾಗಿದೆ. ತಮ್ಮ ಹತ್ತಿರ ಇರುವ ಕಂದಾಯ ದಾಖಲಾತಿಗಳನ್ನು ತೋರಿಸಿದರೂ ಅರಣ್ಯ ಇಲಾಖೆಯ ದೌರ್ಜನ್ಯದ ಅಹಂಕಾರ ತಣಿಯುತ್ತಿಲ್ಲ ಎಂದು ದೂರಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಮಾತನಾಡಿ, ಕೋವಿಡ್ ಪೂರ್ವದಲ್ಲಿ ಅರಣ್ಯ ಇಲಾಖೆ ಕಿರುಕುಳದ ವಿರುದ್ಧ, ರೈತರು ಉಳುಮೆ ಮಾಡುತ್ತಿದ್ದ ಭೂಮಿಯನ್ನು ಸರ್ಕಾರ ಕೂಡಲೇ ಸಕ್ರಮ ಮಾಡಬೇಕು. ಅರಣ್ಯ ಇಲಾಖೆಯು ದಲಿತರು, ಬಡವರಿಂದ ಬಲಾತ್ಕಾರವಾಗಿ ಕಿತ್ತುಕೊಂಡಿರುವ ಕೃಷಿ ಭೂಮಿಯನ್ನು ವಾಪಸ್ಸು ನೀಡಬೇಕು. ಗುಬ್ಬಿ ತಾಲ್ಲೂಕಿನ ಗಂಗಯ್ಯನ ಪಾಳ್ಯದಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ 2020 ರಲ್ಲಿ ಫೆಬ್ರವರಿ 25-28 ರಂದು ಪಾದಯಾತ್ರೆ ನಡೆಸಲಾಗಿತ್ತು. ಈ ಹೋರಾಟದ ಲವಾಗಿ ಅವತ್ತಿನ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರೈತರ ಸಭೆ ನಡೆದು ರೈತರ ಮತ್ತು ಅರಣ್ಯ ಇಲಾಖೆಯ ನಡುವೆ ವಿವಾದ ಇರುವ ಕೃಷಿ ಭೂಮಿಗಳ ಸರ್ವೆ ನಡೆಸಬೇಕು. ಎಲ್ಲಾ ಬಗರ್ ಹುಕಂ ಭೂಮಿಗಳ ಸಕ್ರಮದ ಪ್ರಕ್ರಿಯೆ ವೇಗಗೊಳಿಸಬೇಕು ಎಂದು ತೀರ್ಮಾನ ಮಾಡಿ ಸರ್ವೆ ವರದಿಗಳು ಬಂದ ನಂತರ ಮತ್ತೊಂದು ಸಭೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಸರ್ವೆ ನಡೆಸಲಿಲ್ಲ. ಈಗಲೂ ಅರಣ್ಯ ಇಲಾಖೆಯ ತಕರಾರುಗಳಿಂದ ಬಗರ್ ಹುಕಂ ಸಾಗುವಳಿ ಸಕ್ರಮವಾಗುತ್ತಿಲ್ಲ ಎಂದು ಆರೋಪಿಸಿದರು.
ಈಗ ಮತ್ತೆ ಮುಂಗಾರು ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಭೂಮಿಯನ್ನು ಪಡೆದುಕೊಳ್ಳುವ ಹೋರಾಟ ಕೈಗೆತ್ತಿಕೊಳ್ಳಲು ಕರ್ನಾಟಕ ಪ್ರಾಂತ ರೈತ ಸಂಘ ನಿರ್ಧರಿಸಿ ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಜಿಲ್ಲಾ ಮಟ್ಟದ ಭೂ ಸಮಾವೇಶವನ್ನು ಕಳೆದ ಮೇ 10 ರಂದು ಸಂಘಟಿಸಿತ್ತು. ಈ ಸಮಾವೇಶದ ಕರೆಯ ಮೇರೆಗೆ ಜೂನ್ 14 ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಸಾಗುವಳಿ ಸ್ವಾಧೀನದ ಹಕ್ಕನ್ನು ಖಾತರಿ ಪಡಿಸಿಕೊಳ್ಳಲು, ಮರು ಸ್ವಾಧೀನಕ್ಕೆ ಇರುವ ಅಡ್ಡಿಯನ್ನು ನಿವಾರಿಸಿಕೊಳ್ಳಲು ಈ ಬೃಹತ್ ಧರಣಿಯಲ್ಲಿ ಜಿಲ್ಲೆಯ ಎಲ್ಲಾ ಬಗರ್ ಹುಕುಂ ಸಾಗುವಳಿದಾರರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ ಅಜ್ಜಪ್ಪ, ದೊಡ್ಡ ನಂಜಯ್ಯ, ನರಸಿಂಹಮೂರ್ತಿ, ಬಸವರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!