ಜೀವ ಉಳಿಸುವ ರಕ್ತದಾನ ಶ್ರೇಷ್ಠ ದಾನ: ಸ್ವಾಮೀಜಿ

188

Get real time updates directly on you device, subscribe now.

ತುಮಕೂರು: ಆಧುನಿಕ ಕಾಲದಲ್ಲಿ ದಾನಗಳು ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇನ್ನೊಬ್ಬರ ಜೀವ ಉಳಿಸುವ ರಕ್ತದಾನ ಶ್ರೇಷ್ಠ ದಾನವಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಸಿದ್ದಗಂಗಾ ಮಠದ ಆವರಣದಲ್ಲಿ 117 ಬಾರಿ ರಕ್ತದಾನ ಮಾಡಿದ್ದಕ್ಕಾಗಿ ಗಿನ್ನಿಸ್ ಬುಕ್ ಆಫ್ ರೆರ್ಕಾಡ್ ಮಾಡಿದ ನ್ಯೂ ಪಬ್ಲಿಕ್ ಸ್ಕೂಲ್ ಟ್ರಸ್ಟ್ ಉಪಾಧ್ಯಕ್ಷೆ ಮಧುರ ಅಶೋಕ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಈ ಹಿಂದೆ ಅನ್ನದಾನ, ವಸ್ತ್ರದಾನ, ವಿದ್ಯಾ ದಾನಗಳನ್ನು ಬಹುವಾಗಿ ಪ್ರಶಂಶಿಸಲಾಗುತ್ತಿತ್ತು, ಆದರೆ ಇಂದು ನೇತ್ರದಾನ, ಅಂಗಾಂಗ ದಾನ ಮತ್ತು ರಕ್ತದಾನ ಆ ಸ್ಥಾನ ಪಡೆದುಕೊಳ್ಳುತ್ತಿವೆ ಎಂದರು.
ಪರೋಪಕಾರಂ ಇದಂ ಶರೀಶಂ ಎಂಬ ಮಾತಿದೆ, ಪ್ರಕೃತಿ ನಮಗೆ ಎಲ್ಲವೂ ಉಚಿತವಾಗಿ ನೀಡಿದೆ, ಮನುಷ್ಯನಾದವನು ತನಗಾಗಿ ಬದುಕುವುದರ ಜೊತೆಗೆ, ಇನ್ನೊಬ್ಬರಿಗೆ ಕಿಂಚಿತ್ತು ಸಹಾಯ ಮಾಡುವ ಮೂಲಕ ಅವರ ಬದುಕಿಗೆ ಆಸರೆಯಾದರೆ ಅದಕ್ಕಿಂತ ಸಾರ್ಥಕ ಬದುಕು ಮತ್ತೊಂದಿಲ್ಲ, ನಾವು ಕೆಲವೊಂದಕ್ಕೆ ರಕ್ತ ಹರಿಸುತ್ತೇವೆ, ಅದರ ಬದಲು ರಕ್ತ ನೀಡಿ ಇನ್ನೊಬ್ಬರ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ನಾವೆಲ್ಲಾ ಭಾಗಿಯಾಗೋಣ, ಇದಕ್ಕೆ 117 ಬಾರಿ ರಕ್ತದಾನ ಮಾಡಿರುವ ಮಧುರ ಅಶೋಕ ಕುಮಾರ್ ಅವರು ನಿಮಗೆಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಸಿದ್ದಲಿಂಗ ಸ್ವಾಮೀಜಿ ಶುಭಾ ಹಾರೈಸಿದರು.
ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಅಡ್ಜುಡಿಕೇಟರ್ ಆಗಿರುವ ಖುಷಿ ಮಾತನಾಡಿ, ನಮಗೆ ಸಿಕ್ಕ ದಾಖಲೆಗಳು ಹಾಗೂ ಮಾಹಿತಿಗಳನ್ನಾಧರಿಸಿ ಅವುಗಳನ್ನು ಎಲ್ಲಾ ಮೂಲಗಳಿಂದಲೂ ಪರಿಶೀಲಿಸಿ, ಸರಿ ಎಂದು ಸತ್ಯ ಎಂದು ಕಂಡು ಬಂದ ಹಿನ್ನಲೆಯಲ್ಲಿ ಮಧುರ ಅಶೋಕ್ ಕುಮಾರ್ ಅವರಿಗೆ 2022 ನೇ ಸಾಲಿನಲ್ಲಿ 117 ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ್ದಕ್ಕಾಗಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಗೆ ಸೇರಿಸಲಾಗಿದೆ, ಹೆಣ್ಣು ಮಗಳೊಬ್ಬರು ಈ ಸಾಧನೆ ಮಾಡಿರುವುದು ಮೆಚ್ಚುವಂತದ್ದೆಂದರು.
ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಗಾಗಿ ಪ್ರಶಸ್ತಿ ಪತ್ರ ಸ್ವೀಕರಿಸಿದ ಮಧುರ ಅಶೋಕ್ ಕುಮಾರ್ ಮಾತನಾಡಿ, ನಾನು ಎಂದಿಗೂ ರೇಕಾರ್ಡ್ಗೊಸ್ಕರ ರಕ್ತದಾನ ಮಾಡಿಲ್ಲ, ನಮ್ಮ ತಂದೆ ಮತ್ತು ಮಾವ ಸ್ವಾತಂತ್ರ ಹೋರಾಟಗಾರರಾಗಿದ್ದು, ಸಮಾಜ ಸೇವೆ ಎಂಬುದು ಹುಟ್ಟಿನಲ್ಲಿಯೇ ಬಂದಿದ್ದು, ಲಯನ್ಸ್ ಸಂಸ್ಥೆಯ ಸದಸ್ಯೆಯಾದ ನಂತರ ರಕ್ತಕ್ಕಾಗಿ ಜನರು ಪರದಾಡುವುದನ್ನು ನೋಡಿ ಅದರ ಬಗ್ಗೆ ಮಾಹಿತಿ ಪಡೆದು ಹದಿನೆಂಟುವರೆ ವರ್ಷದಿಂದ ರಕ್ತದಾನ ಮಾಡಲು ಆರಂಭಿಸಿದೆ, ಮುಂದಿನ ಐದಾರು ವರ್ಷಗಳ ವರೆಗೆ ರಕ್ತದಾನ ಮಾಡಲು ಅವಕಾಶವಿದೆ, ನಾನು ಆರೋಗ್ಯವಂತಳಾಗಿ ಇರುವವರೆಗೂ ರಕ್ತದಾನ ಮಾಡುತ್ತೇನೆ ಎಂದರು.
ನಾನು ಚಿಕ್ಕವಳಿದ್ದಾಗ ಪ್ರಸವದ ಸಮಯದಲ್ಲಿ ರಕ್ತದ ಕೊರತೆಯಿಂದ ಸಾವನ್ನಪ್ಪುವ ಮಹಿಳೆಯರನ್ನು ನೋಡಿದ್ದೆ, ಆಗ ಇಂದಿನಷ್ಟು ರಕ್ತನಿಧಿ ಕೇಂದ್ರಗಳು ಇರಲಿಲ್ಲ, ಒಂದು ಬಾಟಲಿ ರಕ್ತ ಬೇಕೆಂದರೆ 45 ಕಿ.ಮೀ ಹೋಗಿ ಬರಬೇಕಾಗಿತ್ತು, ಈ ಎಲ್ಲಾ ಅಂಶಗಳು ನನ್ನನ್ನು ಸ್ವಯಂ ಪ್ರೇರಿತ ರಕ್ತದಾನಕ್ಕೆ ಪ್ರೇರೆಪಿಸಿದವು, ಅಲ್ಲದೆ ಕಳೆದ 40 ವರ್ಷಗಳಿಂದ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇನೆ, ನನಗೆ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ನೀಡುವ ವೇಳೆ ರಕ್ತದಾನಿಗಳಿಗೆ ನೀನು ರಾಯಭಾರಿಯಾಗು ಎಂದು ಆಶೀರ್ವದಿಸಿದ್ದರು,ಅವರ ಹಾರೈಕೆಯಂತೆ ನನ್ನ ಹೆಸರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ನಲ್ಲಿ ಬಂದು ಪ್ರಶಸ್ತಿ ನೀಡಲು ಬಂದಾಗ ಸಿದ್ದಗಂಗಾ ಶ್ರೀಗಳಿಂದ ಪಡೆಯುವ ಇಚ್ಚೆ ವ್ಯಕ್ತಪಡಿಸಿದೆ, ನನ್ನ ಇಚ್ಚೆಯಿಂದ ಶ್ರೀಗಳ ಸನ್ನಿಧಾನದಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಸದಸ್ಯೆ ಶೈಲಜಾ ಶ್ರೀಕಾಂತ್, ವೈದ್ಯರಾದ ಡಾ.ಶಂಕರಲಿಂಗಯ್ಯ, ಅಶೋಕ್ ಕುಮಾರ್, ನ್ಯೂ ಪಬ್ಲಿಕ್ ಸ್ಕೂಲ್ ನ ಕಾರ್ಯದರ್ಶಿ ಕಲ್ಪನಾ ವೀರೇಶ್, ಜಿ. ಗ್ರೂಪ್ ನ ಜೋತಿ ಮೂರ್ತಿ, ಭೈರವ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!