ತುಮಕೂರು: ಅವಕಾಶ ವಂಚಿತ ಸಮುದಾಯಗಳ ವಿರುದ್ಧ ನಿರಂತರ ಕ್ರೌರ್ಯ, ದೌರ್ಜನ್ಯ ಹೆಚ್ಚಿದೆ, ಶೋಷಿತ ಸಮುದಾಯಗಳ ಏಳಿಗೆ ಸಹಿಸದವರ ಕೈಗೆ ಅಧಿಕಾರ ಸಿಕ್ಕಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎಂದು ಚಿಂತಕ ಕೆ.ದೊರೆರಾಜು ಅಭಿಪ್ರಾಯಪಟ್ಟಿದ್ದಾರೆ.
ನಗರದ ರೇಷ್ಮೆ ಇಲಾಖೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ, ತುಮಕೂರು ಮತ್ತು ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ, ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅವಕಾಶ ವಂಚಿತರನ್ನು ಮತ್ತಷ್ಟು ಕೆಳಕ್ಕೆ ತುಳಿಯುವ ಪ್ರಕ್ರಿಯೆ ನಡೆಯುತ್ತಿರುವ ಈ ಕಾಲದಲ್ಲಿ ಅದನ್ನು ಎದುರಿಸಿ ನಿಲ್ಲಲ್ಲು ಬೇಕಾದ ಸೈದ್ಧಾಂತಿಕ ಚಲನಶೀಲತೆಯನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ದಲಿತ ಚಳವಳಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದ ಅನೇಕ ಕಾರ್ಯಕ್ರಮಗಳ ಫಲಾನುಭವಿಗಳಾಗಿರುವ ನಾವುಗಳು ಇಂದು ಕೇವಲ ಅವರ ಫೋಟೋಗೆ ಹೂವು ಹಾಕಿ ಗಂಧದ ಕಡ್ಡಿ ಹಚ್ಚಿ ಜನ್ಮ ದಿನ ಆಚರಿಸಲಷ್ಟೇ ಸಿಮೀತವಾಗಿದ್ದೇವೆ, ಆದರೆ ಅವರು ಹಾಕಿಕೊಟ್ಟ ದಾರಿಗಳಲ್ಲಿ ಸಾಗುವುದನ್ನು ಮರೆತಿದ್ದೇವೆ, ಹಾಗಾಗಿ ನಮ್ಮ ವಿರುದ್ಧ ಶಕ್ತಿಗಳು ಅಗಾಧವಾಗಿ ಬೆಳೆಯುತ್ತಿದ್ದಾರೆ, ಇದರ ಬಗ್ಗೆ ಗಂಭೀರವಾಗಿ ಆಲೋಚಿಸದಿದ್ದರೆ, ಹಿಂದೆ ಇದ್ದ ಜಾಗಕ್ಕೆ ಹೋಗಬೇಕಾಗುತ್ತದೆ ಎಂದು ಕೆ.ದೊರೆರಾಜು ಎಚ್ಚರಿಸಿದರು.
ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣ ಕುರಿತು ಉಪನ್ಯಾಸ ನೀಡಿದ ತುಮಕೂರು ವಿವಿ ಕನ್ನಡ ಪ್ರಾಧ್ಯಪಕ ಡಾ.ನಾಗಭೂಷಣ್ ಬಗ್ಗನಡು, ವೃತ್ತಿಯಲ್ಲಿ ಪ್ರಾಧ್ಯಪಕರಾಗಿ, ಪ್ರವೃತ್ತಿಯಲ್ಲಿ ಹೋರಾಟಗಾರರಾಗಿ ಎರಡಕ್ಕೂ ನ್ಯಾಯ ಒದಿಗಿದವರು ಪ್ರೊ.ಬಿ.ಕೆ, ವೃತ್ತಿಯ ಜೊತೆಗೆ ನೊಂದ ಜನರಿಗೆ ಸಾಂತ್ವನ ಹೇಳುತ್ತಲೇ ಅವರನ್ನು ಹೋರಾಟಕ್ಕೆ ಅಣಿ ಮಾಡಿ ಆ ಮೂಲಕ ಕರ್ನಾಟಕದಲ್ಲಿ ಹಲವಾರು ಜನಪರ, ಅದರಲ್ಲಿಯೂ ಶೋಷಿತರ ಪರ ಪಿಟಿಸಿಎಲ್ ಆಕ್ಟ್, ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ, ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇಧ ಸೇರಿದಂತೆ ಹಲವಾರು ಕಾಯ್ದೆಗಳು ಜಾರಿಗೆ ಬರಲು ಕಾರಣರಾದರು, ಅಕಾಡೆಮಿಕ್ ವಲಯದಲ್ಲಿ ಮಾತ್ರ ಇದ್ದ ಜಾತಿ, ಧರ್ಮ, ಜಾತ್ಯಾತೀತತೆ, ಮನುಧರ್ಮ, ಮನು ವಾದದಂತಹ ಪದಗಳನ್ನು ಹೋರಾಟದ ನೆಲೆಗೆ ತಂದು, ದಲಿತೇತರ ಬರಹಗಾರರ ನಡುವೆಯೂ ಈ ಪದಗಳು ಬಳಕೆಯಾಗುವಂತೆ ಮಾಡಿದವರು ಪ್ರೊ.ಬಿ.ಕೆ, ಇಂತಹ ಪ್ರೊ.ಬಿ.ಕೃಷ್ಣಪ್ಪ ಅವರನ್ನು ಮುಂದಿನ ಪೀಳಿಗೆಗೆ ಪುಸ್ತಕ ರೂಪದಲ್ಲಿ ಪರಿಚಯಿಸುವ ಕೆಲಸ ಆಗಬೇಕು ಎಂದರು.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಉಪನ್ಯಾಸ ನೀಡಿದ ತುಮಕೂರು ವಿವಿಧ ಸಂಶೋಧನಾ ಸಹಾಯಕ ಲಕ್ಷ್ಮೀರಂಗಯ್ಯ, ಇತಿಹಾಸ ತೆರೆದುಕೊಂಡಂತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೂರಾರು ಸಾಧನೆಗಳ ಸಾಕ್ಷಿ ಗುಡ್ಡಗಳು ನಮ್ಮ ನಡುವೆ ಕಂಡು ಬರುತ್ತವೆ, ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿದ ರಾಜರುಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಿಗರು, ಅದಕ್ಕಾಗಿಯೇ ಅವರ ಕಾಲವನ್ನು ಕರ್ನಾಟಕದ ಸುವರ್ಣ ಯುಗ ಎನ್ನಲಾಗುತ್ತದೆ, ಕೃಷಿ, ಆರೋಗ್ಯ, ರೈಲ್ವೆ, ಸಾರಿಗೆ, ವಿದ್ಯುತ್, ನೀರಾವರಿ, ಕೈಗಾರಿಕೆ, ಶಿಕ್ಷಣ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅದ್ವಿತಿಯ ಸಾಧನೆ ಮಾಡಿದ್ದಾರೆ, ಮಿಲ್ಲರ್ ಕಮಿಟಿ ಮೂಲಕ ಸಂವಿಧಾನಕ್ಕಿಂತಲು ಮೊದಲೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಕೀರ್ತಿ ಒಡೆಯರ್ಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಅವಕಾಶ ವಂಚಿತ ಸಮುದಾಯ, ಸಣ್ಣ ಅವಕಾಶ ಕಲ್ಪಿಸಿದವರನ್ನು ದೊಡ್ಡದಾಗಿ ನೋಡುತ್ತದೆ, ಇತಿಹಾಸಕಾರರ ನಿರ್ಲಕ್ಷಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾ‘ನೆಗಳನ್ನು ಜನತೆಯ ಮುಂದಿಡುವ ಕೆಲಸ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ದಲಿತ ಮುಖಂಡ ನರಸೀಯಪ್ಪ, ಡಾ.ಬಸವರಾಜು ಅವರು ಸಮಾರಂಭ ಕುರಿತು ಮಾತನಾಡಿದರು. ಸಮಾರಂಭದಲ್ಲಿ 75 ವರ್ಷ ಪೂರೈಸಿದ ಹಿರಿಯ ಚಿಂತಕ ಕೆ.ದೊರೆರಾಜು ಹಾಗೂ ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಆಗಿ ವಯೋನಿವೃತ್ತಿ ಹೊಂದಿದ ಆದಿನಾರಾಯಣ ಅವರನ್ನು ಎರಡು ಸಂಸ್ಥೆಗಳ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಹಲವಾರು ಸರಕಾರಿ ನೌಕರರು, ದಲಿತ ಮುಖಂಡರು ಪಾಲ್ಗೊಂಡಿದ್ದರು.
ಶೋಷಿತರ ಏಳಿಗೆ ಸಹಿಸದವರ ಕೈಗೆ ಅಧಿಕಾರ: ದೊರೆರಾಜು
Get real time updates directly on you device, subscribe now.
Next Post
Comments are closed.