ಪೌರ ಕಾರ್ಮಿಕರಿಗೆ ಮನೆ ಹಂಚಲು ಒತ್ತಾಯ

76

Get real time updates directly on you device, subscribe now.


ತುಮಕೂರು: ನಗರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಅನೇಕ ಸರ್ಕಾರ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರು ಸೇರಿದಂತೆ ಇತರರಿಗೆ 2016ರಲ್ಲಿ ದಿಬ್ಬೂರಿನಲ್ಲಿ ಗೃಹಭಾಗ್ಯ ಯೋಜನೆಯಡಿ ಪಾಲಿಕೆಯಿಂದ 72 ಪೌರ ಕಾರ್ಮಿಕರಿಗೆ ನಿರ್ಮಿಸಲಾಗಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಸ್ಥಳೀಯ ಆಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಾಗೂ ತುಮಕೂರು ನಗರ ಅಭ್ಯರ್ಥಿ ಅತಿಕ್ ಅಹಮ್ಮದ್ ಕಿಡಿಕಾರಿದ್ದರು.
ನಗರದ ಆರನೇ ವಾರ್ಡ್ ನಲ್ಲಿರುವ ದಿಬ್ಬೂರಿನಲ್ಲಿ ತುಮಕೂರು ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರಾಗಿ ಅಂದಾಜು 538.50 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮನೆ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಕೂಡಲೇ ಸಂಬಂಧಪಟ್ಟ ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾತನಾಡಿದ ಅತಿಕ್ ಅಹಮದ್ ಅವರು ನಗರ ಅಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ತುಮಕೂರು ಮಹಾನಗರ ಪಾಲಿಕೆ ಇವರುಗಳು 2016ರ ಆಗಸ್ಟ್ 9 ರಂದು ಗೃಹಭಾಗ್ಯ ಯೋಜನೆಯ ಆರನೇ ರಾಜ್ಯಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡು 72 ಮನೆಗಳನ್ನು ನಿರ್ಮಾಣ ಮಾಡಲು ನಿವೇಶನ ಗುರುತಿಸಿ ಮನೆಗಳನ್ನು ನಿರ್ಮಿಸಿದ್ದರು ಈವರೆಗೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ ಎಂದು ಕಿಡಿಕಾರಿದರು.
ಆರು ವರ್ಷಗಳಿಂದ ಮನೆ ನಿರ್ಮಿಸುತ್ತಿರುವ ಕಾಮಗಾರಿ ಕುಂಟುತ್ತಾ ಸಾಗಿದ್ದು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಪೌರಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ ನಿರ್ಮಾಣವಾಗಿರುವ ಮನೆಗಳನ್ನು ವಾಸಕ್ಕೆ ನೀಡದೆ ಮನೆಗಳ ಕಿಟಕಿ ಬಾಗಿಲುಗಳು ಒಡೆದು ಪೌರಕಾರ್ಮಿಕರಿಗೆ ಎಂದೇ ನಿರ್ಮಿಸಲಾಗಿರುವ ಮನೆಗಳು ಸೊರಗುತ್ತಿದ್ದು ಕೂಡಲೇ ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರಿಸಬೇಕು, ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಅವರಿಗೆ ಅನುಕೂಲ ಕಲ್ಪಿಸಬೇಕು, ಮನೆ ಹಸ್ತಾಂತರಕ್ಕೆ ಎದುರಾಗಿರುವ ತೊಡಕುಗಳನ್ನ ನಿವಾರಿಸಿ ಮನೆ ನೀಡಲು ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದರು.
ಅಭಿವೃದ್ಧಿ ಹೆಸರು ಹೇಳುತ್ತಿರುವ ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರು ಕೇವಲ ಒಣ ಭಾಷಣ ಮಾಡುತ್ತಾರೆ ಹೊರತು ಬಡವರ ಪೌರಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ, ಕಳೆದ ಆರು ವರ್ಷಗಳಿಂದ ಕುಂಟಿತವಾಗುತ್ತಿರುವ ಪೌರಕಾರ್ಮಿಕರ ಮನೆಗಳನ್ನು ಹಸ್ತಾಂತರ ಮಾಡದೇ ಅಧಿಕಾರಿಗಳ ಕೈಗೊಂಬೆಯಾಗಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ದಲಿತ ಸಂಘಷರ್ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ನಿವೇಶನ ಖರೀದಿ ಮಾಡಿ ಆರು ವರ್ಷ ಕಳೆದರೂ ಮನೆಗಳನ್ನು ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಈಗಾಗಲೇ ವಿವಿಧ ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಾಣ ಮಾಡಿ ನೀಡಲಾಗಿದೆ, ಈ ಕುರಿತಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅನೇಕ ಸಭೆ ನಡೆಯುತ್ತಿದ್ದರು ತುಮಕೂರಿನ ದಿಬ್ಬೂರಿನಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಹಸ್ತಾಂತರ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ, ಪೌರ ಕಾರ್ಮಿಕರಿಗೆ ಸೌಲಭ್ಯ ನೀಡಬೇಕು ಎಂದು ಸರ್ಕಾರಗಳು ಹೇಳುತ್ತಿದ್ದರು ಮಹಾನಗರ ಪಾಲಿಕೆ ಆಯುಕ್ತರು ಅಧಿಕಾರಿಗಳು ಪೌರಕಾರ್ಮಿಕರ ಬಗ್ಗೆ ಕಾಳಜಿ ಇಲ್ಲದೆ ಕೇವಲ ಸ್ವಚ್ಛತಾ ಕೆಲಸಕ್ಕಾಗಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.

Get real time updates directly on you device, subscribe now.

Comments are closed.

error: Content is protected !!