ಗೂಳೂರು ಗಣಪತಿ ವಿಸರ್ಜನಾ ಮಹೋತ್ಸವ ನ.26, 27ಕ್ಕೆ

178

Get real time updates directly on you device, subscribe now.


ತುಮಕೂರು: ಇತಿಹಾಸ ಪ್ರಸಿದ್ದ ಗೂಳೂರು ಮಹಾ ಗಣಪತಿಯ ವಿಸರ್ಜನಾ ಮಹೋತ್ಸವ ನ.26 ಮತ್ತು 27 ರಂದು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಲಿದೆ.
ಬಲಿಪಾಢ್ಯಮಿಯಂದು ಪ್ರತಿಷ್ಠಾಪಿಸಲಾಗಿರುವ ಇತಿಹಾಸ ಪ್ರಸಿದ್ದ ಗೂಳೂರು ಮಹಾಗಣಪತಿ ಮೂರ್ತಿಗೆ ಪ್ರತಿದಿನವೂ ಗ್ರಾಮಸ್ಥರಿಂದ ವಿಶೇಷ ಪೂಜಾ ಕೈಂಕರ್ಯ ನೆರವೇರುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಪ್ರತಿನಿತ್ಯ ಭಕ್ತಾದಿಗಳು ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದು ಗೂಳೂರು ಮಹಾಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ.ಎಸ್. ಶಿವಕುಮಾರ್ ತಿಳಿಸಿದ್ದಾರೆ.
ಎರಡು ದಿನಗಳ ಕಾಲ ಗೂಳೂರು ಗಣೇಶ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಆಚರಿಸಲಾಗುವುದು, ನ.26 ರಂದು ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಮತ್ತು ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾ ಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಲಾಗುವುದು.
ನಂತರ ಹೊನ್ನೇನಹಳ್ಳಿಯ ಭೋಮಿ ಸಮುದಾಯ ಸೇರಿದಂತೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ಮಹಾ ಗಣಪತಿಯನ್ನು ದೇವಾಲಯದಿಂದ ಹೊರತಂದು ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ನಂದಿಧ್ವಜ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ರಾತ್ರಿಯಿಡಿ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನ.27 ರಂದು ಭಾನುವಾರ ಮಧ್ಯಾಹ್ನದಿಂದ ಜನಪದ ಕಲಾತಂಡಗಳ ಜೊತೆಗೆ ಆಕರ್ಷಕ ಬಾಣ ಬಿರುಸು, ಸಿಡಿಮದ್ದಿನ ಸದ್ದಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣೇಶಮೂರ್ತಿಯ ಮೆರವಣಿಗೆ ನಡೆಸಲಾಗುವುದು, ಸಂಜೆ ಗೂಳೂರಿನ ಕೆರೆಯಲ್ಲಿ ಗಣೇಶಮೂರ್ತಿಯ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!