ಮಧುಗಿರಿ: ದೇವೇಗೌಡರ ಕುಟುಂಬಕ್ಕೆ ನೋ ಎನ್ನಲು ಆಗುವುದಿಲ್ಲ. ಮುಂಬರುವ ಚುನಾವಣೆಯಲ್ಲೂ ಮಧುಗಿರಿಯಿಂದ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಶಾಸಕ ಎಂ. ವಿ. ವೀರಭದ್ರಯ್ಯ ಸ್ಪಷ್ಟಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲ ಕಾರಣಗಳಿಂದಾಗಿ ಮತ್ತು ನನ್ನ ಕುಟುಂಬದವರೂ ಸಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎನ್ನುತ್ತಿದ್ದರು, ಹಾಗಾಗಿ ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸಬಾರದು ಎಂದು ಈ ಹಿಂದೆ ತೀರ್ಮಾನಿಸಿದ್ದೆ, ಆದರೆ ಮಾಧ್ಯಮಗಳಲ್ಲಿ ವರದಿ ಬಂದ ನಂತರ ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನಲ್ಲಿರುವ ನಮ್ಮ ಮನೆಗೆ ಬಂದು ನಾನು ಸ್ಪರ್ಧಿಸಲೇಬೇಕೆಂದು ಹಠ ಹಿಡಿದು ಧರಣಿ ನಡೆಸಿದ್ದರು. ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ನನ್ನ ಮತ್ತು ನನ್ನ ಮಗನ ಜೊತೆ ಮಾತನಾಡಿದ್ದು, ಎಲ್ಲಾ ಗೊಂದಲಗಳಿಗೆ ಹೈ ಕಮಾಂಡ್ ತೆರೆ ಎಳೆದಿದೆ, ಹೈಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯಕ್ಕೆ ಮಣಿದಿದ್ದು, ನಾನೇ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಮುಂಬರುವ ಚುನಾವಣೆಯಲ್ಲೂ ನಾನೇ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಮಧುಗಿರಿಯನ್ನು ಜಿಲ್ಲೆಯನ್ನಾಗಿಸುವುದು ಮತ್ತು ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಾಡಿದಾಗ ಮಾತ್ರ ನನಗೆ ಸಮಾಧಾನ. ಕುಮಾರಸ್ವಾಮಿಯವರನ್ನು ಸಿಎಂ ಮಾಡುವುದೇ ನಮ್ಮ ಗುರಿ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಮುಂಬರುವ ಚುನಾವಣೆಯಲ್ಲೂ ನೀವೇ ಸ್ಪರ್ಧಿಸಬೇಕು ಎಂದು ಸೂಚಿಸಿದ್ದು, ನಾನು ಅವರ ಮನೆಯ ಮಗನಿದ್ದಂತೆ, ಅವರ ಕುಟುಂಬಕ್ಕೆ ನೋ ಎನ್ನುವ ಪ್ರಶ್ನೆಯೇ ಇಲ್ಲ. ನಾನು ಈ ಹಿಂದೆ ಅಧಿಕಾರಿಯಾಗಿದ್ದವನು, ಆಕಸ್ಮಿಕವಾಗಿ ರಾಜಕೀಯಕ್ಕೆ ಬರಬೇಕಾಯಿತು. ರಾಜಕೀಯ ಹೊರತಾಗಿಯೂ ಕಾರ್ಯಕರ್ತರ ಜೊತೆ ಇರುತ್ತೇನೆ ಎಂದು ಹಿಂದೆಯೇ ಹೇಳಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ಪುರಸಭಾ ಸದಸ್ಯರಾದ ಚಂದ್ರಶೇಖರ್ ಬಾಬು, ನಾರಾಯಣ್, ನರಸಿಂಹಮೂರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜು, ಮುಖಂಡರಾದ ಗೋವಿಂದರೆಡ್ಡಿ, ಲಕ್ಷ್ಮೀನರಸಿಂಹರೆಡ್ಡಿ, ರಾಮಚಂದ್ರಪ್ಪ, ಎಸ್.ಆರ್.ನಾಗರಾಜು, ಜಬೀವುಲ್ಲಾ, ಬಾವಿಮನೆ ಕಾಂತಣ್ಣ, ಹಂಸರಾಜ್, ಎಸ್ಸಿ ಘಟಕದ ಅಧ್ಯಕ್ಷ ಗುಂಡುಗಲ್ ಶಿವಣ್ಣ, ನಾಸೀರ್, ಕಂಬತ್ತನಹಳ್ಳಿ ರಘು, ಚೌಡಪ್ಪ, ಗಬಾಲಿ ರಾಜು, ಡೈರಿ ತಿಮ್ಮಣ್ಣ, ನಾಗಭೂಷಣ್, ಬಿ.ಎಸ್.ಶ್ರೀನಿವಾಸ್, ರಂಗನಾಥ್, ವೆಂಕಟಾಪುರ ಗೋವಿಂದರಾಜು, ಮಿಲ್ ಚಂದ್ರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
ಮುಂಬರುವ ಚುನಾವಣೆಯಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ: ವೀರಭದ್ರಯ್ಯ ದೇವೇಗೌಡರ ಕುಟುಂಬಕ್ಕೆ ‘ನೋ’ ಎನ್ನಲು ಆಗಲ್ಲ
Get real time updates directly on you device, subscribe now.
Prev Post
Next Post
Comments are closed.