ದೇಶದ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೇ ರಾಮಬಾಣ : ಸ್ವಾಮೀಜಿ

109

Get real time updates directly on you device, subscribe now.


ತುಮಕೂರು: ದೇಶದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣವೇ ರಾಮಬಾಣ. ಆದ್ದರಿಂದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪೂರಕವಾದ ಶಿಕ್ಷಣವನ್ನು, ಮಕ್ಕಳಿಗೆ ಒದಗಿಸಬೇಕು ಎಂದು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತೀ ಅಭಿಪ್ರಾಯಪಟ್ಟರು.
ರೂಸಾ ಅನುದಾನದಲ್ಲಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಪ್ರಯೋಗಾಲಯ ಕಟ್ಟಡವನ್ನು ಗುರುವಾರ ಉದ್ಘಾಟಸಿ ಮಾತನಾಡಿದರು.
ನಾವು ಸಮಸ್ಯೆ ಮುಕ್ತವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೆ ಹಳೇ ಸಮಸ್ಯೆಗಳ ಚಿಗುರುಗಳನ್ನು ಚಿವುಟುತ್ತಾ ಹೊಸ ಸವಾಲುಗಳಿಗೆ ಸನ್ನದ್ಧರಾಗಬೇಕು ಎಂದರು.
ಇಲ್ಲಿ ಪ್ರತೀ ಒಬ್ಬರಿಗೂ ಒಂದೊಂದು ಕರ್ತವ್ಯವಿದೆ. ಆ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಾವು ನಿಭಾಯಿಸುತ್ತಿದ್ದೇವೆ ಎಂದು ಸಮಾಜ ನಮ್ಮನ್ನು ಗಾಢವಾಗಿ ನಂಬಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವವರು ಸಾಮಾಜಿಕ ಜವಬ್ದಾರಿ ಹೊತ್ತು ನಂಬಿದ ಸಮಾಜಕ್ಕೆ ಪ್ರಾಮಾಣಿಕ ನಿಷ್ಠೆಯನ್ನು ತೋರಬೇಕು ಎಂದರು.
ವಿದ್ಯಾರ್ಥಿಗಳಿಗೆ ಹೊಟ್ಟೆಪಾಡಿನ ಶಿಕ್ಷಣವನ್ನೇನೋ ಗೂಗಲ್ ನೀಡುತ್ತದೆ. ಆದರೆ ಶಿಕ್ಷಣ ಸಂಸ್ಥೆಗಳು ಜೀವನಕ್ಕೆ ಬೇಕಾದ ಶಿಕ್ಷಣವನ್ನು ನೀಡಬೇಕು. ಇದು ಇಂದಿನ ಕಾಲಕ್ಕೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ತುಮಕೂರು ನಗರ ವಿಧಾನಸಭಾಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಜಿ.ಬಿ ಮಾತನಾಡಿ ತುಮಕೂರು ವಿಶ್ವವಿದ್ಯಾನಿಲಯವು ದಿನದಿಂದ ದಿನಕ್ಕೆ ಶಿಕ್ಷಣದ ಕ್ರಾಂತಿಗೆ ಮುಂದಾಗುತ್ತಿದೆ. ದೇಶ ಕಟ್ಟುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವ ಪ್ರೊ.ಕೆ. ಶಿವಚಿತ್ತಪ್ಪ, ವಿಜ್ಞಾನ ಮತ್ತು ಕಲಾ ಕಾಲೇಜಿನ ಪ್ರಾಂಶುಪಾಲರು, ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು, ಬೋಧಕ ಸಿಬ್ಬಂದಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!