ತುಮಕೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ದೇವೇಗೌಡರ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದ್ದು, ಈ ಕಾರ್ಯಕ್ರಮದ ಮೂಲಕ ಜನರ ಬಳಿಗೆ ಹೋಗುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ರೈತ ಚೈತನ್ಯ, ವಸತಿ ಆಸರೆ ಎಂಬ ಐದು ಅಂಶಗಳನ್ನು ಇಟ್ಟುಕೊಂಡು ಪಂಚರತ್ನ ಯಾತ್ರೆ ನಡೆಯುತ್ತಿದ್ದು, ಈ ಯಾತ್ರೆ ಡಿಸೆಂಬರ್ ಒಂದರಂದು ತುಮಕೂರು ನಗರಕ್ಕೆ ಆಗಮಿಸಲಿದೆ ಎಂದು ಜೆಡೆಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ 1 ರಂದು ತುಮಕೂರು ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಪಂಚರತ್ನ ಯಾತ್ರೆ ಸಾಗಲಿದೆ. ಡಿಸೆಂಬರ್ 2 ರಂದು ಮಧುಗಿರಿ ತಾಲ್ಲೂಕಿನಲ್ಲಿ ಸಾಗಲಿದೆ, ಡಿಸೆಂಬರ್ 3 ರಂದು ಕೊರಟಗೆರೆ, ಡಿಸೆಂಬರ್ 4 ರಂದು ಪಾವಗಡ, ಡಿಸೆಂಬರ್ 5 ರಂದು ಶಿರಾ, ಡಿಸೆಂಬರ್ 6 ರಂದು ಗುಬ್ಬಿ, ಡಿಸೆಂಬರ್ 11 ರಂದು ಚಿಕ್ಕನಾಯಕನಹಳ್ಳಿ, ಡಿಸೆಂಬರ್ 12 ರಂದು ತುರುವೇಕೆರೆ, ಡಿಸೆಂಬರ್ 13 ರಂದು ಕುಣಿಗಲ್, ಡಿಸೆಂಬರ್ 14 ರಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾತ್ರೆ ಸಾಗಲಿದೆ ಎಂದರು.
ಉತ್ತಮ ಜನಪರ ಕಾರ್ಯಕ್ರಮದ ಮೂಲಕ ಜನರ ಬಳಿಗೆ ಹೋಗುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಜನಪರ ಕಾರ್ಯಕ್ರಮ ಇಟ್ಟುಕೊಂಡಿಲ್ಲ. ಬಿಜೆಪಿ ಪಕ್ಷ ಜೆಡಿಎಸ್ ಮುಕ್ತ ಮಾಡುತ್ತೇನೆ ಎಂದು ಹೇಳುತ್ತಾ ಅಭಿವೃದ್ಧಿ ಮರೆತಿದೆ. ಈ ಪಕ್ಷಗಳನ್ನು ಜನರು ತಿರಸ್ಕರಿಸಿ ಜೆಡಿಎಸ್ಗೆ ಈ ಬಾರಿ ಬಹುಮತ ನೀಡಬೇಕು ಎಂದು ಮನವಿ ಮಾಡಿದರು.
ಎಂಎಲ್ಸಿ ತಿಪ್ಪೇಸ್ವಾಮಿ ಮಾತನಾಡಿ, ಜನರ ಸಂಪರ್ಕ ಮಾಡುವ ಯಾತ್ರೆ ಇದು, ರೈತ ಚೈತನ್ಯ, ಶಿಕ್ಷಣ, ಮಹಿಳಾ ಸಬಲಿಕರಣಕ್ಕೆ ಆದ್ಯತೆ ನೀಡಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಗ್ರಾಮಗಳಿಗೆ ತಲುಪುವ ಉದ್ದೇಶ ಪಂಚರತ್ನ ಯಾತ್ರೆಯದ್ದಾಗಿದೆ. ಜೊತೆಗೆ ಗ್ರಾಮ ವಾಸ್ತವ್ಯ ಕೂಡ ನಡೆಯಲಿದೆ ಎಂದರು.
ಮುಖಂಡ ಗೋವಿಂದರಾಜು ಮಾತನಾಡಿ, ಡಿಸೆಂಬರ್ 1 ರಂದು ತುಮಕೂರಿಗೆ ಯಾತ್ರೆ ಬರಲಿದ್ದು, ಮೊದಲಿಗೆ ಕ್ಯಾತ್ರಂದ್ರ ಸ್ಕೂಲ್, ಬಟವಾಡಿ ನಂತರ ಉಪ್ಪಾರಹಳ್ಳಿ, ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದರ್ಶನ ನಂತರ ಕೆಎನ್ಎಸ್ ಮಿಲ್ ಬಳಿ ಸಭೆ ನಡೆಯಲಿದ್ದು ರಾತ್ರಿ ದಿಬ್ಬೂರಿನಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಡಿಸೆಂಬರ್ 2 ರಂದು ಮಧುಗಿರಿ ತಾಲ್ಲೂಕಿಗೆ ಆಗಮಿಸಲಿದ್ದು, ಕೆರೆಗಳಪಾಳ್ಯದಲ್ಲಿ ರಥಯಾತ್ರೆಗೆ ಸ್ವಾಗತ ಮಾಡಲಾಗುವುದು. ನಂತರ ಮಧುಗಿರಿಯಿಂದ ಚಿಕ್ಕಮಾಲೂರು, ದೊಡ್ಡ ಮಾಲೂರು, ಕೊಡಿಗೆನಹಳ್ಳಿ, ಐಡಿ ಹಳ್ಳಿ, ಮಿಡಿಗೇಶಿ, ಹೊಸಕೆರೆ, ಜಕ್ಕೆನಹಳ್ಳಿ, ಬಡವನಹಳ್ಳಿ, ದೊಡ್ಡೇರಿ, ಕೈಮರ ಮೂಲಕ, ದಬ್ಬೆಘಟ್ಟ, ಗುಂಡಲಹಳ್ಳಿಯಲ್ಲಿ ಸಾಗಿ ರಾತ್ರಿ ಮಾಡದಾಳಹಟ್ಟಿಯಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದರು.
ಮಾಜಿ ಶಾಸಕ ಸುಧಾಕರ ಲಾಲ್ ಮಾತನಾಡಿ, ಡಿಸೆಂಬರ್ 3 ರಂದು ಕೊರಟಗೆರೆಯ ಪುರರರ ಹೋಬಳಿ ಮೂಲಕ ರಥಯಾತ್ರೆ ಆರಂಭವಾಗಲಿದ್ದು, ಕೊರಟಗೆರೆ, ತುಂಬಾಡಿ, ವಜ್ಜನಕುರಿಕೆ, ದಾಸನಕುಂಟೆ, ಕೋರ ಹೋಬಳಿಯಲ್ಲಿ ಸಾಗಲಿದೆ. ರಾತ್ರಿ ಕೆಸ್ತೂರಿನಲ್ಲಿ ಗ್ರಾಮ ವಾಸ್ತವ್ಯ ನಡೆಯಲಿದೆ ಎಂದರು.
ಮಾಜಿ ಶಾಸಕ ನಾಗರಾಜಯ್ಯ ಮಾತನಾಡಿ ಡಿಸೆಂಬರ್ 13ರಂದು ಕುಣಿಗಲ್ ತಾಲ್ಲೂಕಿಗೆ ರಥಯಾತ್ರೆ ಬರಲಿದೆ, ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಯಾತ್ರೆ ಸಂಚರಿಸಿ ಕೆಲವು ಕಡೆ ಸಭೆ ನಡೆಸಲಾಗುವುದು. ರಾತ್ರಿ ನಡೆಮಾವಿನಪುರ ಗೊಲ್ಲರಹಟ್ಟಿಯಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದರು.
ಮುಖಂಡರಾದ ನಾಗರಾಜು, ಬೆಳ್ಳಿ ಲೋಕೇಶ್, ಮಹಲಿಂಗಪ್ಪ, ಉಗ್ರೇಶ್, ಮಧು, ವಿಜಯ್ಕುಮಾರ್ ಇನ್ನಿತರರು ಇದ್ದರು.
Get real time updates directly on you device, subscribe now.
Prev Post
Comments are closed.