ಜಿಲ್ಲಾಸ್ಪತ್ರೆ ಖಾಸಗೀಕರಣ ಬೇಡವೇ ಬೇಡ

198

Get real time updates directly on you device, subscribe now.


ತುಮಕೂರು: ತುಮಕೂರು ನಗರ ವಂಚಿತ ಯುವಜನರ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲಾಸ್ಪತ್ರೆ ಖಾಸಗೀಕರಣ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಮುಖಂಡರ ಮತ್ತು ನಾಗರಿಕರ ಸಮಾಲೋಚನಾ ಸಭೆ ನಡೆಸಲಾಯಿತು.
ಕರ್ನಾಟಕ ಜನಾರೋಗ್ಯ ಚಳವಳಿಯ ಸಂಚಾಲಕರಾದ ಡಾ. ಅಖಿಲವಾಸನ್ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಕರ್ನಾಟಕದ 9 ಜಿಲ್ಲೆಗಳಲ್ಲಿ ಮತ್ತು ತುಮಕೂರು ಜಿಲ್ಲಾಸ್ಪತ್ರೆ ಖಾಸಗೀಕರಣ ಪ್ರಕ್ರಿಯೆ ಕುರಿತು ಮಾಹಿತಿ ನೀಡಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯದ ಆರೋಗ್ಯ ನೀತಿಗಳು ಅತ್ಯಂತ ಜನ ವಿರೋಧಿಯಾಗಿದ್ದು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ನಾಶ ಮಾಡುವ ಹಾದಿಯಲ್ಲಿ ನಡೆಯುತ್ತಿದೆ. ಇದರ ಪರಿಣಾಮವಾಗಿ ತಾಯಂದಿರ ಮರಣ ಪ್ರಮಾಣ ಮತ್ತು 1 ವರ್ಷದೊಳಗಿನ ಶಿಶುಗಳ ಮರಣ ಪ್ರಮಾಣ, 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ದಕ್ಷಿಣ ಭಾರತದ ರಾಜ್ಯಗಳಲ್ಲೇ ಕರ್ನಾಟಕದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿದೆ. ಭಾರತದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸಿ ಆರೋಗ್ಯ ಕ್ಷೇತ್ರವನ್ನು ಖಾಸಗಿ ಒಡಂಬಡಿಕೆಗಳ ಮೂಲಕ ಮುಕ್ತಗೊಳಿಸುವ ಈ ವಿನಾಶಕಾರಿ ನಡೆಯಿಂದ ತಾಯಿ ಮತ್ತು ಮಕ್ಕಳ ಹಾಗೂ ಜನಸಾಮಾನ್ಯ ಜೀವಗಳನ್ನು ಕಾಪಾಡುವ ರಾಜಕೀಯ ಇಚ್ಚಾಶಕ್ತಿ ರಾಜ್ಯಕ್ಕೆ ಇಲ್ಲವೆಂಬುದು ಸ್ಪಷ್ಟವಾಗುತ್ತಿದೆ ಎಂದರು.
ಕೇಂದ್ರದ ಆರೋಗ್ಯ ನೀತಿಗಳನ್ನು ರಾಜ್ಯ ಅನುಸರಿಸುವ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕುಂದು ತರುವ ನೀತಿಗಳಿಗೆ ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗುತ್ತಿರುವುದು ನಾಚಿಕೆಗೇಡಾಗಿದೆ,.ಈ ಹಿಂದೆ ರಾಯಚೂರಿನ ರಾಜೀವ್ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಒಪೆಕ್ ಅನುದಾನದ ಮೂಲಕ ಅಪೊಲೊ ಆಸ್ಪತ್ರೆಗೆ ನೀಡಿ ನಡೆಸಲಾಗದೆ, ದೀವಾಳಿಯಾಗಿದೆ. ಅದೇ ರೀತಿ ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಜಿಲ್ಲಾಸ್ಪತ್ರೆಯನ್ನು ಬಿಆರ್ಎಸ್ ಕಂಪನಿಗೆ ನೀಡಿ ನಡೆಸಲಾಗದೆ ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ. ಈಗ ಪಿಪಿಪಿ ಮಾದರಿಯಲ್ಲಿ ರಾಜ್ಯದ ಮೆಡಿಕಲ್ ಕಾಲೇಜ್ ಪ್ರಾರಂಭಿಸುವ 9 ಜಿಲ್ಲೆಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳನ್ನು ಖಾಸಗೀಯವರಿಗೆ ನೀಡಿ ಸರ್ಕಾರವೇ ಭೂಮಿ ಮತ್ತು ಮೂಲ ಸೌಕರ್ಯ ನೀಡಿ ಇದರಲ್ಲಿ 10 ರಿಂದ 20 ರಷ್ಟು ಪ್ರಮಾಣದ ಬೆಡ್ಗಳನ್ನು ಬಡಜನರಿಗೆ ನೀಡಲು ಮುಂದಾಗಿರುವುದು ಲಾಭಕೋರತನವಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಈಗ ಉತ್ತರದಾಯತ್ವವಿದೆ ಖಾಸಗೀಯವರಿಗೆ ನೀಡಿದರೆ ಈ ಉತ್ತರದಾಯತ್ವ ಮತ್ತು ಪಾರದರ್ಶಕತೆ ಇರುವುದಿಲ್ಲ, ಸರ್ಕಾರ ಬಿಡ್ ಮೂಲಕ ಖಾಸಗಿ ಸಂಸ್ಥೆಗಳನ್ನು ಆಯ್ಕೆ ಮಾಡಿ ಷೇರು ಹೋಲ್ಡರ್ಸ್ ಮತ್ತು ಬೋರ್ಡ್ ಆಫ್ ಡೈರೆಕ್ಷರ್ಗಳನ್ನು ನೇಮಕ ಮಾಡುವ ಪರಿಭಾಷೆ ಕಾರ್ಪೋರೇಟಿಕರಣವಾಗಿದ್ದು ಸಂವಿಧಾನ ವಿರೋಧಿ ಈ ನಡೆಯ ವಿರುದ್ಧ ಪ್ರಜ್ಞಾವಂತರು ಧ್ವನಿ ಎತ್ತಬೇಕಿದೆ ಎಂದರು.
ಆರೋಗ್ಯ ಇಲಾಖೆಯ ನಿವೃತ್ತ ಆರೋಗ್ಯ ಅಧಿಕಾರಿ ಡಾ .ಹೆಚ್ ವಿರಂಗಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿ ಎರಡು ದಶಕದ ಹಿಂದೆಯೇ ಆರೋಗ್ಯ ಕ್ಷೇತ್ರವನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ಸರ್ಕಾರವೇ ಕಾಳಜಿ ವಹಿಸಿ ಸಾರ್ವಜನಿಕ ಆರೋಗ್ಯ ಕಾಪಾಡಿದೆ. ಹಾಗಾಗಿ ಈಗಿರುವ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತೀಕರಿಸಿ ಮೂಲಭೂತ ಸೌಲಭ್ಯಗಳ ಜೊತೆಗೆ ಮಾನವಅಭಿವೃದ್ಧಿ ನೇಮಕಾತಿ ಮಾಡಬೇಕೆಂದು ಒತ್ತಾಯಿಸಬೇಕು.
ಪರಿಸರವಾದಿ ಸಿ. ಯತಿರಾಜ್ ಮಾತನಾಡಿ, ರಾಷ್ಟ್ರಿಯ ಆರೋಗ್ಯ ನೀತಿ ವಿರುದ್ಧ ಹೋರಾಟ ರೂಪಿಸಿದರೆ ಮಾತ್ರ ಜಿಲ್ಲಾಸ್ಪತ್ರೆ ಖಾಸಗೀಕರಣ ತಪ್ಪಿಸಬಹುದು. ಕೇಂದ್ರದ ವಿಪರೀತವಾದ ಕೇಂದ್ರಿತ ಯೋಜನೆ ರಾಜ್ಯಗಳ ಸ್ವಾಯತ್ತತೆಗೆ ದಕ್ಕೆ ತಂದಿದೆ. ಇದರಿಂದಾಗಿ ಮಾರುಕಟ್ಟೆಗೆ ಬೇಕಾದುದನ್ನು ಕೇಂದ್ರ ಸೃಷ್ಟಿ ಮಾಡುತ್ತಿದ್ದು ಇದರ ವಿರುದ್ಧ ಧ್ವನಿಯೆತ್ತಬೇಕು ಎಂದರು.
ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ. ದೊರೈರಾಜ್ ಮಾತನಾಡಿ, ಆರೋಗ್ಯರಕ್ಷಾ ಸಮಿತಿಗೆ ಶಾಸಕರು ಅಧ್ಯಕ್ಷರಾಗಿದ್ದು ಸರ್ಕಾರದ ಈ ನಡೆ ಖಂಡಿಸಿ ಜನಾಂದೋಲನ ರೂಪಿಸಬೇಕು. ಚುನಾವಣೆ ಸಮಯವಾಗಿರುವುದರಿಂದ ನಾವು ವ್ಯಾಪಕ ಜಾಗೃತಿ ತಂದು ಜನರಿಗೆ ತಿಳುವಳಿಕೆ ಮೂಡಿಸಬೇಕೆಂದರು.
ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್ ಮಾತನಾಡಿ, ಬಡ ಜನರಿಗೆ ಜಿಲ್ಲಾಸ್ಪತ್ರೆ ಆರೋಗ್ಯ ಸೇವೆ ನೀಡುತ್ತಿದ್ದು ಇದು ಖಾಸಗೀಯವರಿಗೆ ನೀಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದರಿಂದ ತಕ್ಷಣವೇ ಹೋರಾಟ ರೂಪಿಸಲು ಎಲ್ಲಾ ಪಕ್ಷಗಳ ಮತ್ತು ರೈತಸಂಘ ಇನ್ನಿತರೆ ಸಂಘಟನೆಗಳನ್ನೊಳಗೊಂಡ ದುಂಡು ಮೇಜಿನ ಸಭೆ ಕರೆದು ಬೃಹತ್ ಹೋರಾಟ ರೂಪಿಸಬೇಕೆಂದರು.
ಸಭೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ. ನರಸಿಂಹಮೂರ್ತಿ, ವೆಲ್ಫೇರ್ ಪಾರ್ಟಿಯ ತಾಜುದ್ದೀನ್ ಷರೀಫ್, ಮಾದಿಗ ದಂಡೋರದ ಆಟೋಶಿವರಾಜ್, ರಂಜನ್, ಎಎಂಎಸ್ನ ಕಲ್ಯಾಣಿ, ಎಸ್ಯುಸಿಐ ನ ಸ್ವಾಮಿ, ಗ್ರಾಮ ಸ್ವರಾಜ್ನ ಪಂಡಿತ್ ಜವಾಹರ್, ಸಮತಾ ಬಳಗದ ನಟರಾಜಪ್ಪ, ನಾಗೇಂದ್ರಪ್ಪ, ತಮ್ಮ ಅಭಿಪ್ರಾಯ ಹೇಳಿದರು.
ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿ ದೀಪಿಕಾ, ಕಣ್ಣನ್, ಅರುಣ್, ತಿರುಮಲಯ್ಯ, ಗಣೇಶ್, ಮೋಹನ್, ಫುಟ್ಬಾತ್ ವ್ಯಾಪಾರಿಗಳ ಸಂಘದ ವಾಸೀಮ್, ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಸುಧಾ, ಭಾರತಿ ನಗರದ ಶಾರದಮ್ಮ, ಗಂಗಮ್ಮ ಮುಂತಾದವರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!