ತುಮಕೂರು: ಮತದಾರರ ಪಟ್ಟಿಯ ಪರಿಷ್ಕರಣೆಗೆ ಅವಕಾಶ ನೀಡಲಾಗಿದ್ದು, ಮತದಾರರು ತಪ್ಪದೇ ತಮ್ಮ ಹೆಸರು ಪರಿಶೀಲನೆ ಮಾಡಿಕೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಮತದಾರರ ಹೆಸರು ಬಿಟ್ಟು ಹೋಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ, ಜಿಲ್ಲೆಯ ಇಆರ್ಒ, ಇಒ, ಎಇಆರ್ಒ ಹಾಗೂ ಇತರ ಅಧಿಕಾರಿಗಳೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ- 2023, ಮನೆ ಮನೆ ಭೇಟಿ ಹಾಗೂ ಇತರೆ ಚುನಾವಣೆ ವಿಷಯಗಳ ಚರ್ಚಿಸಿ ಮಾತನಾಡಿ, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ, ನಿರ್ದೇಶನ ಅನುಸರಿಸಿ ಮತದಾರರ ಪಟ್ಟಿ ತಯಾರಿಸಲಾಗುತ್ತದೆ. 18 ವರ್ಷ ತುಂಬಿದ ಪ್ರತಿಯೊಬ್ಬರೂ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸುತ್ತಮುತ್ತಲಿನ, ಅಕ್ಕಪಕ್ಕದವರಲ್ಲೂ ಈ ಜಾಗೃತಿ ಮೂಡಿಸಬೇಕು. ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದಲ್ಲಿ ಮತ್ತೆ ಸೇರ್ಪಡೆ ಮಾಡಿಸಿಕೊಳ್ಳಬಹುದು. ಮೊಬೈಲ್ ಸಂಖ್ಯೆ ಬದಲಾವಣೆ, ವಿಳಾಸ ಬದಲಾವಣೆ, ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಈ ಕುರಿತು ನಿಗದಿತ ಅರ್ಜಿ ಸಲ್ಲಿಸಬೇಕು ಎಂದರು.
ಜಿಲ್ಲೆಯಲ್ಲಿ 21,62,613 ಮತದಾರರಿದ್ದಾರೆ. ಅವರಲ್ಲಿ 10,82,752 ಪುರುಷ, 10,79,769 ಮಹಿಳಾ ಮತದಾರರಿದ್ದಾರೆ. 01 ಜನವರಿ 2023ಕ್ಕೆ ಅನ್ವಯವಾಗುವಂತೆ ಅರ್ಹ ಮತದಾರರನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ಹೊಸ ಮತದಾರರು ನಿಗದಿತ ಅರ್ಜಿ ನಮೂನೆ ಸಲ್ಲಿಸಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಬೇಕು. ಚುನಾವಣಾ ಆಯೋಗ, ಜಿಲ್ಲಾಡಳಿತ ನೀಡಿರುವ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ದೋಷರಹಿತ ಮತದಾರ ಪಟ್ಟಿ ಮೂಲ ಆಧಾರವಾಗಿದೆ. ಇದನ್ನು ಅರಿತು ಕಾರ್ಯೋನ್ಮುಖರಾಗಿ ಎಂದು ಕರೆ ನೀಡಿದರು. ಮತದಾರರ ಪಟ್ಟಿಗೆ ಮತದಾರರನ ಹೆಸರು ನೋಂದಾಯಿಸುವ ಬಗ್ಗೆ ಯಾವುದಾದರೂ ತೊಂದರೆ, ಗೊಂದಲಗಳಿದ್ದರೆ ಎಇಆರ್ಒ ಕಚೇರಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳುವಂತೆ ತಿಳಿಸಿದರು.
ಆಧಾರ್ ಜೋಡಣೆ: ಜಿಲ್ಲೆಯ ಒಟ್ಟು ಮತದಾರರಲ್ಲಿ 19,22,638 ಮತದಾರರು ಈಗಾಗಲೇ ಎಪಿಕ್ ಕಾರ್ಡ್ ಜೊತೆಗೆ ಆಧಾರ್ ನೋಂದಣಿ ಮಾಡಿಸಿಕೊಂಡಿದ್ದಾರೆ. ಎಪಿಕ್ ಕಾರ್ಡ್ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮತದಾರರಿಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಪಿಕ್ಗೆ ಆಧಾರ್ ಜೋಡಣೆ ಪ್ರಮಾಣವು ಶೇ 88.90 ಆಗಿದೆ ಎಂದರು.
ಮನೆ ಮನೆ ಸಮೀಕ್ಷೆ: ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಈಗಾಗಲೇ ನೇಮಕಗೊಂಡ ಮತಗಟ್ಟೆ ಮಟ್ಟದ ಅಧಿಕಾರಿಗಳು 09 ನವೆಂಬರ್ 2022 ರಿಂದ 08 ಡಿಸೆಂಬರ್ 2022ರ ವರೆಗೆ ಮನೆ ಮನೆ ಸಮೀಕ್ಷೆ ನಡೆಸಲಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದ ಸಮಯದಲ್ಲಿ ಜಿಲ್ಲೆಯ ಎಲ್ಲಾ ಮತದಾರರು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ನಮೂನೆ-6ರ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ನಮೂನೆ-7 ಪಟ್ಟಿಯಿಂದ ಹೆಸರನ್ನು ಕಿತ್ತುಹಾಕಲು ಅಥವಾ ಹೆಸರುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಮತ್ತು ನಮೂನೆ-8ರ ಮೂಲಕ ಮತದಾರರ ಹೆಸರು ತಿದ್ದುಪಡಿ ಮಾಡುವುದು.
ಜಿಲ್ಲೆಯ ಎಲ್ಲಾ ವಿಧಾನಸಭಾ, ತಾಲೂಕು ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಜಾಲತಾಣ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ. ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲವಾದಲ್ಲಿ ಅಥವಾ ಕರಡು ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗಳೇನಾದರೂ ಇದ್ದಲ್ಲಿ 18 ವರ್ಷ ಮೇಲ್ಪಟ್ಟ ಅರ್ಹ ನಾಗರಿಕರೆಲ್ಲರೂ ನ್ಯಾಷನಲ್ ವೋಟರ್ಸ್ ಸರ್ವೀಸ್ ಪೋರ್ಟಲ್, ವೋಟರ್ ಪೋರ್ಟಲ್ ಅಥವಾ ವೋಟರ್ ಹೆಲ್ಪ್ಲೈನ್ ಆ್ಯಪ್ನಲ್ಲಿ ನೊಂದಾಯಿಸಿದ ನಂತರ ನಮೂನೆ-6ನ್ನು ಭರ್ತಿ ಮಾಡಿ ಜಾಲತಾಣ ಮೂಲಕ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ, ಹೆಚ್ಚಿನ ಮಾಹಿತಿಗಾಗಿ ಸಮೀಪದ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1950ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿಗಳಾದ ರಿಷಿ ಆನಂದ್, ಅಜಯ್, ಚುನಾವಣೆ ಶಿರಸ್ತೇದಾರ್ ಎನ್.ನರಸಿಂಹರಾಜು, ತಹಸೀಲ್ದಾರ್ಗಳು, ಇಆರ್ಒ, ಇಒ, ಎಇಆರ್ಒ, ಚುನಾವಣೆ ಶಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
Comments are closed.