ಕುಣಿಗಲ್: 42 ವರ್ಷಗಳ ನಂತರ ಗ್ರಾಮಕ್ಕೆ ಸಂಪರ್ಕ ರಸ್ತೆ ಕಲ್ಪಿಸಲು ಶ್ರಮಿಸಿದ ಶಾಸಕ ಡಾ.ರಂಗನಾಥ್ಗೆ ಗ್ರಾಮಸ್ಥರು ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿದ ಘಟನೆ ಮುತ್ತುಗದ ಹಳ್ಳಿಯಲ್ಲಿ ಶುಕ್ರವಾರ ನಡೆಯಿತು.
ತಾಲ್ಲೂಕಿನ ಕಸಬಾ ಹೋಬಳಿಯ ಮುತ್ತುಗದಹಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಮಕ್ಕೆ ರಸ್ತೆ ಇರಲಿಲ್ಲ. ಗ್ರಾಮಸ್ಥರ ಕೋರಿಕೆ ಮೇರೆಗೆ ಹಳೆರಾಷ್ಟ್ರೀಯ ಹೆದ್ದಾರಿ 48 ರಿಂದ ಗ್ರಾಮಕ್ಕೆ ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲು ಮುಂದಾದಾಗ ಗ್ರಾಮಸ್ಥರು 42 ವರ್ಷದ ನಂತರ ತಮ್ಮ ಗ್ರಾಮಕ್ಕೆ ರಸ್ತೆ ಸಂಪರ್ಕಕ್ಕೆ ಅನುದಾನ ತಂದ ಶಾಸಕರಿಗೆ ಗ್ರಾಮಸ್ಥರು ಚಿನ್ನದ ಉಂಗುರ ಹಾಕಿ ಸನ್ಮಾನಿಸಿದರು. ಆದರೆ ಶಾಸಕರು ತಾವು ಜನ ಸೇವೆಗೆ ಕೆಲಸ ಮಾಡುತ್ತಿದ್ದು ಗ್ರಾಮಸ್ಥರು ನೀಡಿದ ಉಂಗುರವನ್ನು ಬೆಟ್ಟದರಂಗ ಸ್ವಾಮಿ ದೇವಾಲಯಕ್ಕೆ ಸಮರ್ಪಿಸುವುದಾಗಿ ಹೇಳಿದರು.
ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಶಾಸಕ, ತಾಲೂಕಿನ ಹಲವಾರು ಗ್ರಾಮಗಳಲ್ಲಿ ರಸ್ತೆಗಳ ಸಮಸ್ಯೆ ಇದ್ದರೂ ತಾಲ್ಲೂಕನ್ನು ಪ್ರತಿನಿಧಿಸಿದ ಯಾವುದೇ ಜನಪ್ರತಿನಿಧಿಗಳು ಬಗೆಹರಿಸಲು ಮುಂದಾಗಿರುವುದು ಬೇಸರದ ಸಂಗತಿ. ರಾಜ್ಯಸರ್ಕಾರ ಕೊವಿಡ್ ಸಮಸ್ಯೆಯ ನೆಪವೊಡ್ಡಿ ಯಾವುದೇ ಅನುದಾನ ನೀಡುತ್ತಿಲ್ಲ. ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಸಮಗ್ರ ರಸ್ತೆ ಅಭಿವೃದ್ಧಿಗೆ 150 ಕೋಟಿ ಅನುದಾನ ನೀಡಲಾಗಿತ್ತು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಅನುದಾನ ತಡೆ ಹಿಡಿದಿದ್ದು, ತಾವು ಖುದ್ದು ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿದರೂ ಅನುದಾನ ಬಿಡುಗಡೆ ಮಾಡಲಿಲ್ಲ. ಕೊನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಒತ್ತಡ ಹಾಕಿದ ಮೇರೆಗೆ ಅನುದಾನ ನೀಡಿದ್ದಾರೆ. ಇದಕ್ಕೆ ಸಿಎಂ ಸೇರಿದಂತೆ ಇಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿ ಸರ್ಕಾರ ಜನಪರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ತಾಲ್ಲೂಕಿನ ನೀರಾವರಿ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಲಿಂಕ್ ಕೆನಾಲ್ಗೆ ನೀಡಿದ್ದ 615 ಕೋಟಿ ರೂ. ಅನುದಾನ ತಡೆ ಹಿಡಿದಿದೆ. ಮುಂದಿನ ದಿನಗಳಲ್ಲಿ ಚುನಾವಣೆ ಬರಲಿದ್ದು, ಜನಪರ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ತಾಲ್ಲೂಕಿನಲ್ಲಿ 25 ಸಾವಿರ ಮಂದಿಗೆ ಉಚಿತ ಗ್ಯಾಸ್ ಸಂಪರ್ಕ ಕೊಡಿಸಿದ್ದು, ಇದೀಗ ಕೇಂದ್ರಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿ ಜನ ಜೀವನ ದುಸ್ತರವಾಗುವಂತೆ ಮಾಡಿದೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನ ಮುಟ್ಟುವಂತಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲು ಸಹಕರಿಸಬೇಕೆಂದರು.
ಪಿಡಬ್ಲ್ಯುಡಿ ಎಇಇ ಗುರುಸಿದ್ದಪ್ಪ, ಮುಖಂಡರಾದ ಬೋರೇಗೌಡನಪಾಳ್ಯ ರಾಜು, ಕೆಂಪಣ್ಣ, ಪಾಪಣ್ಣ, ತಿಮ್ಮೇಗೌಡ, ರಂಗಸ್ವಾಮಿ, ವೆಂಕಟಲಕ್ಷ್ಮಮ್ಮ, ಶಿವಣ್ಣ ಇತರರು ಇದ್ದರು.
ಶಾಸಕರಿಗೆ ಚಿನ್ನದುಂಗುರ ನೀಡಿ ಗ್ರಾಮಸ್ಥರಿಂದ ಸನ್ಮಾನ
42 ವರ್ಷದ ನಂತರ ಮುತ್ತುಗದಹಳ್ಳಿ ಗ್ರಾಮಕ್ಕೆ ಸಂಪರ್ಕ ರಸ್ತೆ ನಿರ್ಮಾಣ
Get real time updates directly on you device, subscribe now.
Prev Post
Comments are closed.