ತುಮಕೂರು: ಭಾರತವು ವಿಭಿನ್ನ ಸಂಸ್ಕೃತಿ ವಿವಿಧ ಜನಾಂಗ ಹಾಗೂ ಭಾಷೆಗಳಿಂದ ಕೂಡಿದ ದೇಶವಾಗಿದ್ದರೂ ವಿವಿಧತೆಯಲ್ಲಿ ಏಕತೆ ಸಾರುವ ಸಂವಿಧಾನ ಯಶಸ್ವಿಯಾಗಿ ಅಳವಡಿಸಿಕೊಂಡಿದ್ದೇವೆ ಎಂದು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೀತಾ.ಕೆ.ಬಿ. ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ 72 ನೇ ಸಂವಿಧಾನ ದಿನಾಚರಣೆ ಹಾಗೂ ಭಾರತ್ ಲೋಕತಂತ್ರ ಕೀ ಜನನಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಸಂವಿಧಾನದ ಕೊಡುಗೆ ಅಪಾರ. ಸಂವಿಧಾನ ರಚಿಸಲು ಕರಡು ರಚನಾ ಸಮಿತಿ ಬಹಳಷ್ಟು ಶ್ರಮ ವಹಿಸಿದ್ದು, ಬೇರೆ ಬೇರೆ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಭಾರತಕ್ಕೆ ಸರಿ ಹೊಂದುವ ಹಾಗೂ ಅಗತ್ಯವಿರುವ ಅಂಶಗಳನ್ನು ಬಳಸಿ ಸಂವಿಧಾನ ರೂಪಿಸಲಾಗಿದೆ ಎಂದರು. ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಕರ್ತವ್ಯ ಮತ್ತು ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ಅರ್ಥೈಸಿಕೊಂಡು ಅದರಂತೆ ನಾವು ಜೀವಿಸಬೇಕು ಎಂದು ತಿಳಿಸಿದರು.
ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಭಾರತೀಯ ಸಂವಿಧಾನವು ಪ್ರಪಂಚದಲ್ಲಿಯೇ ಪವಿತ್ರ ಸಂವಿಧಾನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಭವಿಷ್ಯತ್ತಿನ ಕುರಿತಾದ ಆಲೋಚನೆ ಬಹುದೊಡ್ಡದು. ನಮ್ಮ ಹಕ್ಕುಗಳನ್ನು ಹೇಗೆ ಬಳಸಿಕೊಳ್ಳುತ್ತೇವೊ ಹಾಗೆಯೇ ಮೂಲಭೂತ ಕರ್ತವ್ಯ ಸಹ ಪಾಲಿಸಬೇಕು. ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಆಚರಿಸಿದಾಗ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ತುಮಕೂರು 3ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಭಾರ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಇರ್ಫಾನ್ ಮಾತನಾಡಿ, ಭಾರತವು ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬೆಳೆಯಬೇಕೆಂದರೆ ಅದಕ್ಕೆ ವಿದ್ಯಾರ್ಥಿಗಳ ಪಾತ್ರ ಬಹು ದೊಡ್ಡದು. ನಾವು ಚುನಾವಣೆಗಳಲ್ಲಿ ಉತ್ತಮರನ್ನು ಆಯ್ಕೆ ಮಾಡಿದರೆ ದೇಶವನ್ನು ಉತ್ತಮವಾಗಿಸಲು ಸಾಧ್ಯವಾಗುತ್ತದೆ. ಭಾರತೀಯರಿಗೆ ಎಲ್ಲಕ್ಕಿಂತ ದೊಡ್ಡ ಧರ್ಮ ಭಾರತೀಯತ್ವ, ಇದೇ ಸಂವಿಧಾನದ ಆಶಯವೂ ಕೂಡ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಜಿ., ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ವಿ.,ಇತರರು ಇದ್ದರು.
Get real time updates directly on you device, subscribe now.
Prev Post
Comments are closed.