ಕುಣಿಗಲ್: ಹಾಲಿ ಶಾಸಕರು ಸೋಲುವ ಕಾರಣ ನನಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ನ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕಿನ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ, ಕೈ ಪಾಳೆಯದಲ್ಲಿ ತಲ್ಲಣ ಉಂಟು ಮಾಡಿದೆ.
ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ ಹೇಳಿಕೆ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮಾಜಿ ಶಾಸಕರು ನೀಡಿರುವ ಹೇಳಿಕೆಯಲ್ಲಿ ಹಾಲಿ ಶಾಸಕರು ಈ ಬಾರಿ ಸೋಲುವುದರಿಂದ, ಸೋಲುವ ಅಭ್ಯರ್ಥಿಗೆ ನಾವು ಪ್ರಚಾರ ಮಾಡಲು ಸಿದ್ಧರಿಲ್ಲ. ಹೀಗಾಗಿ ನಮಗೆ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.
ತಮಗೂ 66 ವರ್ಷವಾಗಿದ್ದು ಮುಂದೆ ಚುನಾವಣೆ ಮಾಡಲಾಗದ ಕಾರಣ ಈ ಬಾರಿ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದೇನೆ. ಒಂದು ವೇಳೆ ಹೈಕಮಾಂಡ್ ಪರಿಶೀಲಿಸದೆ ಇದ್ದಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಆಗಿಯಾದರೂ ಸರಿ ನಿಂತು ಚುನಾವಣೆ ಎದುರಿಸುತ್ತೇನೆ. ಕ್ಷೇತ್ರದ ಜನರು ತಮ್ಮನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸುತ್ತಾರೆ ಎಂದು ಹೇಳಿದ್ದಾರೆ. ಈಗಾಗಲೆ ಕುಣಿಗಲ್ ತಾಲೂಕಿನಲ್ಲಿ ಚುನಾವಣೆ ತಯಾರಿಗೆ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿವೆ.
ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಡಾ. ರಂಗನಾಥ್, ಮಹಿಳಾ ಮತದಾರರ ಸಮಾವೇಶ ಸೇರಿದಂತೆ ಮತಬೇಟೆಗೆ ಪುಣ್ಯ ಕ್ಷೇತ್ರ ಪ್ರವಾಸ ಸೇರಿದಂತೆ ಇತರೆ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಹಳೆ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಅಲ್ಲಿನ ಸಮಸ್ಯೆ ಬಗೆಹರಿಸಿ ಗ್ರಾಮಸ್ಥರ ಮನ ಗೆಲ್ಲಲು ಮುಂದಾಗುವ ಜೊತೆಯಲ್ಲಿ ಪುನಃ ಆರೋಗ್ಯ ಶಿಬಿರ ಆರಂಭಿಸಿ ಕ್ಷೇತ್ರದ ವರ್ಛಸ್ಸು ಹೆಚ್ಚಿಸಿಕೊಳ್ಳುವ ತವಕದಲ್ಲಿರುವಾಗಲೆ ಕಾಂಗ್ರೆಸ್ ಪಕ್ಷದವರೆ ಆದ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡರೆ ನೇರವಾಗಿ ಈ ಬಾರಿ ಹಾಲಿ ಶಾಸಕರು ಗೆಲ್ಲುವುದಿಲ್ಲ. ಹೀಗಾಗಿ ನಾವು ಅವರಿಗೆ ಮತಪ್ರಚಾರ ಮಾಡುವುದರಲ್ಲಿ ಅರ್ಥವೂ ಇಲ್ಲ. ಮಾಡುವುದೂ ಇಲ್ಲ ಎಂಬ ಹೇಳಿಕೆ ನೀಡಿದ್ದು, ತಾಲೂಕಿನ ಕೈ ಪಾಳೆಯದಲ್ಲಿ ತಲ್ಲಣ ಸೃಷ್ಟಿಸಿದೆ.
ಕಾಂಗ್ರೆಸ್ನಿಂದ ಎರಡು ಬಾರಿ ಶಾಸಕರಾಗಿದ್ದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇ ಗೌಡರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ತಾಲೂಕಿನ ಕೈ ಪಾಳೆಯಕ್ಕೆ ಒಂದು ರೀತಿ ತಲೆ ನೋವಾದರೆ. ಇದೀಗ ಕಾಂಗ್ರೆಸ್ನ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ ನೇರಾನೇರ ತಮ್ಮದೆ ಪಕ್ಷದ ಮುಖಂಡ ಸೋಲುತ್ತಾರೆ ಎಂದು ಹೇಳಿಕೆ ನೀಡಿರುವುದು ಕೈಪಾಳೆಯದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ. ಇದಲ್ಲದೆ ಇತ್ತೀಚೆಗೆ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ ಪಕ್ಷದ ವರಿಷ್ಠರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಬಳಿಯೂ ಈ ಬಾರಿ ಹಾಲಿ ಶಾಸಕರು ಸೋಲುತ್ತಾರೆ. ಹೀಗಾಗಿ ನನಗೆ ಟಿಕೆಟ್ ನೀಡುವಂತೆ ಆಗ್ರಹಿಸಿರುವ ವೀಡಿಯೋ ತುಣುಕು ಹರಿದಾಡುತ್ತಿದ್ದು ಕೈ ಪಾಳೆಯದಲ್ಲಿ ತಲ್ಲಣ ಉಂಟು ಮಾಡಿದ್ದು ಇರುವ ಗೊಂದಲವನ್ನು ಹೈಕಮಾಂಡ್ ಹೇಗೆ ಬಗೆಹರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments are closed.