ವರದಕ್ಷಿಣೆ ಪಡೆಯುವುದು ಅನಾಗರಿಕತೆಯ ಲಕ್ಷಣ

143

Get real time updates directly on you device, subscribe now.


ತುಮಕೂರು: ಹಣ ಗಳಿಕೆಯ ಹಿಂದೆ ಬಿದ್ದಿರುವ ಪರಿಣಾಮ ಕೌಟುಂಬಿಕ ಮೌಲ್ಯಗಳು ಕ್ಷಿಣಿಸುತ್ತಿವೆ. ಸಮಾಜದಲ್ಲಿ ನೈತಿಕತೆ ಮರೆಯಾಗುತ್ತಿದೆ ಎಂದು ವಿದ್ಯೋದಯ ಕಾನೂನು ಮಹಾ ವಿದ್ಯಾಲಯದ ಸಹ ಪ್ರಾಧ್ಯಾಪಕಿ ಕೆ.ಎಸ್.ಪುಷ್ಪ ಅಭಿಪ್ರಾಯಪಟ್ಟರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಯೂನಿಯನ್ ಕ್ರಿಶ್ಚಿಯನ್ ಕಾಲೇಜು, ಮಹಿಳಾ ಇಲಾಖೆ ವತಿಯಿಂದ ನಗರದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವರದಕ್ಷಿಣೆ ನಿಷೇಧ ದಿನಾಚರಣೆ ಹಾಗೂ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ವರದಕ್ಷಿಣೆ, ಕಾನೂನು ಆಯಾಮಗಳು ಕುರಿತು ಮಾತನಾಡಿ, ಹಿಂದೆ ಹೆಣ್ಣು ಮಕ್ಕಳಿಗೆ ಗೌರವ ಪೂರ್ವಕವಾಗಿ ಕೆಲವು ಕಾಣಿಕೆಗಳನ್ನು ಮದುವೆಯಾಗುವಾಗ ನೀಡುತ್ತಿದ್ದರು. ಕ್ರಮೇಣ ಈ ಕೊಡುಗೆ ಸಂಪ್ರದಾಯ ರೂಪ ಪಡೆಯಿತು. ವರದಕ್ಷಿಣೆ ರೂಪದಲ್ಲಿ ಇಡೀ ಸಮಾಜವನ್ನು ಆಕ್ರಮಿಸಿಕೊಂಡು ಇಂದಿಗೂ ಜೀವಂತವಾಗಿರುವುದು ಅತ್ಯಂತ ಅನಾಗರಿಕತೆಯ ಲಕ್ಷಣ. ವಿವಾಹದ ನಂತರವೂ ಮತ್ತಷ್ಟು ಬೇಡಿಕೆ ಇಡುತ್ತಿರುವುದು, ಇದರಿಂದ ಸಂಸಾರಗಳು ಹಾಳಾಗುತ್ತಿರುವುದು ಅತ್ಯಂತ ದುಃಖಕರ ವಿಷಯ ಎಂದರು.

ಎಷ್ಟೋ ಸಾವಿನ ಪ್ರಕರಣಗಳು ಬಹಿರಂಗವಾಗುವುದೇ ಇಲ್ಲ. ವಿವಾಹ ಮಾಡಿಕೊಡುವಾಗ ಹೆಣ್ಣು ಹೆತ್ತ ಪೋಷಕರು ಸಾಕಷ್ಟು ಸಾಲ ಮಾಡಿಕೊಂಡಿರುತ್ತಾರೆ. ಆನಂತರವೂ ಬೇಡಿಕೆ ಇಡುವ ಮೂಲಕ ಮತ್ತೆ ಮತ್ತೆ ಪೋಷಕರ ಮನಸ್ಸನ್ನು ನೋಯಿಸದಿರಿ. ಇಂದಿನ ಯುವ ಪೀಳಿಗೆ ವಿವಾಹವಾಗುವಾಗ ವರದಕ್ಷಿಣೆ ಇಲ್ಲದೆ ಮದುವೆ ಮಾಡಿಕೊಳ್ಳುವ ಶಪಥ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಂವಿಧಾನ ದಿನಾಚರಣೆ ಕುರಿತು ಕೆಎಎಸ್ ಅಧಿಕಾರಿ ಧರ್ಮಪಾಲ್ ಮಾತನಾಡಿ, ನಮ್ಮ ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠತೆ ಪಡೆದಿದೆ. ಆಯಾ ಕಾಲಕ್ಕನುಗುಣವಾಗಿ ಈವರೆಗೆ 103 ಬಾರಿ ತಿದ್ದುಪಡಿಗೆ ಒಳಗಾಗಿದೆ. ಕಾನೂನು ನಮ್ಮನ್ನು ಹೇಗೆ ಸಂರಕ್ಷಿಸುತ್ತಿವೆಯೋ ಹಾಗೆ ಎಲ್ಲಾ ಕಾನೂನು ಹಾಗೂ ಸಮಾಜವನ್ನು ಸಂವಿಧಾನ ಸಂರಕ್ಷಿಸುತ್ತಿದೆ. ದೇಶದಲ್ಲಿ ಲಿಂಗ ತಾರತಮ್ಯ ನಿವಾರಣೆ, ನಿರುದ್ಯೋಗ ನಿವಾರಣೆ, ಬಡತನ ನಿವಾರಣೆಯಂತಹ ಹಲವು ಯೋಜನೆಗಳಿಗೆ ಸಂವಿಧಾನದ ಅಂಶಗಳೇ ಮೂಲ ಕಾರಣ. ಪೀಠಿಕೆಯಲ್ಲಿರುವ ಅಂಶಗಳನ್ನು ನಾವು ಓದಿಕೊಂಡರೆ ಸಾಕು ನಮ್ಮ ಸಂವಿಧಾನದಲ್ಲಿ ಸೌಹಾರ್ದತೆ, ಬ್ರಾತೃತ್ವ, ಸಮಾನತೆ ಕಾಣುತ್ತೇವೆ. ಇಂತಹ ಸಂವಿಧಾನವನ್ನು ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ. ಲಲಿತ ಮಾತನಾಡಿ, ಮನುಷ್ಯನ ಆಸೆಗೆ ಮಿತಿ ಇಲ್ಲವಾಗಿದೆ. ವಿವಾಹ ಮಾಡಿಕೊಡುವ ಸಂದರ್ಭದಲ್ಲಿ ಮಾಡಿದ ಸಾಲಗಳಿಂದಾಗಿಯೇ ಎಷ್ಟೋ ಕುಟುಂಬಗಳು ಅವನತಿಗೆ ಸಿಲುಕಿವೆ. ವರದಕ್ಷಿಣೆ ಕಿರುಕುಳ, ದೌರ್ಜನ್ಯ ಸೇರಿದಂತೆ ಮಹಿಳೆಯರ ಮೇಲಿನ ಪ್ರಕರಣ ಇನ್ನೂ ಮುಂದುವರೆದಿರುವುದು ನಾಗರಿಕ ಸಮಾಜಕ್ಕೆ ಕಳಂಕ ಎಂದರು.

ಲೇಖಕಿ ಬಾ.ಹ. ರಮಾಕುಮಾರಿ ಮಾತನಾಡಿ 1992 ರಿಂದ ಅಸ್ತಿತ್ವಕ್ಕೆ ಬಂದಿರುವ ವರದಕ್ಷಿಣೆ ವಿರೋಧಿ ವೇದಿಕೆಯು ಈವರೆಗೆ ಹಲವು ಅನ್ಯಾಯದ ಪ್ರಕರಣಗಳ ವಿರುದ್ಧ ಹೋರಾಡಿದೆ. ಕಾನೂನಿನಿಂದ ಎಲ್ಲವೂ ಬದಲಾವಣೆ ಸಾಧ್ಯವಿಲ್ಲ. ಸಂಘ ಸಂಸ್ಥೆಗಳು ಮತ್ತು ಯುವಜನರು ಎಚ್ಚೆತ್ತುಕೊಂಡರೆ ಸಾಮಾಜಿಕ ಪಿಡುಗು ನಿವಾರಣೆ ಮಾಡಬಹುದು, ಕುಟುಂಬಗಳಲ್ಲಿ ಮೌಲ್ಯ ಮತ್ತು ನೆಮ್ಮದಿಗಿಂತ ಆರ್ಥಿಕ ವ್ಯವಹಾರಗಳೇ ಮುಖ್ಯವಾಗುತ್ತಿದ್ದು, ಇದರಿಂದ ಶೋಷಣೆ ಮುಕ್ತ ಸಮಾಜ ಸಾಧ್ಯವಿಲ್ಲ ಎಂದರು.

ಪ್ರಾಂಶುಪಾಲ ಡಾ.ಜಾಯ್ ನರೆಲ್ಲಾ, ರಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಾಜೇಶ್.ಆರ್.ಸಿ, ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ಪದಾಧಿಕಾರಿ ಲಲಿತ ಮಲ್ಲಪ್ಪ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವೈ.ಆರ್.ಸದಾಶಿವಯ್ಯ, ಉಪನ್ಯಾಸಕರಾದ ರಾಜೇಶ್, ಶಾಂತಲಾ, ಸುನಿಲ್, ಅಜಿತ್ ಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ, ಗಂಗಲಕ್ಷ್ಮಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!