ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕೈ ಕಾರ್ಯಕರ್ತರು ಸಜ್ಜಾಗಲಿ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿ

115

Get real time updates directly on you device, subscribe now.


ತುಮಕೂರು: ಕರ್ನಾಟಕದ ಜನತೆ ಬದಲಾವಣೆ ಬಯಸುತ್ತಿದ್ದು, ಇದನ್ನು ಸಕಾರಗೊಳ್ಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಬ್ಲಾಕ್ ಮತ್ತು ಬೂತ್ ಹಂತದಲ್ಲಿ ಮನೆ ಮನೆಗೆ ತೆರಳಿ ಜನರ ಮನವೊಲಿಸುವ ಕೆಲಸ ಮಾಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಉಸ್ತುವಾರಿ ಮಯೂರ ಜಯಕುಮಾರ್ ತಿಳಿಸಿದ್ದಾರೆ.
ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಹೆಚ್ಎಂಎಸ್ ಕಾಲೇಜು ಆವರಣದಲ್ಲಿ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿರುವ ಜನ ವಿರೋಧಿ, ಶೇ.40ರ ಕಮಿಷನ್ ಆಧಾರಿತ ಬಿಜೆಪಿ ಸರಕಾರ ಕಿತ್ತೊಗೆಯಲು ಜನತೆ ಬಯಸಿದ್ದು, ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಸಜ್ಜಾಗಬೇಕೆಂದರು.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಪ್ರಸ್ತುತ ಬಿಜೆಪಿ ಸರ್ಕಾರದಿಂದ ಜನರಿಗೆ ಯಾವುದೇ ರೀತಿಯ ಅನುಕೂಲವಿಲ್ಲ. ಜಿಎಸ್ಟಿ, ಇನ್ನಿತರ ತೆರಿಗೆಗಳ ಮೂಲಕ ಸಾಕಷ್ಟು ಹಣ ವ್ಯಯಿಸುತಿದ್ದಾರೆ. ಆದರೆ ಅದರ ಬಹುಪಾಲು ರಾಜ್ಯದ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ. ಬದಲಾಗಿ ಬಿಜೆಪಿ ಶಾಸಕರು, ಅವರ ಹಿಂಬಾಲಕರ ಜೇಬು ಸೇರುತ್ತಿದೆ, ಕಾಂಗ್ರೆಸ್ ಸರ್ಕಾರವಿದ್ದಾಗ ಜಾರಿಗೆ ತಂದ ಅನೇಕ ಜನಪರ, ಬಡವರ ಪರ ಕಾರ್ಯಕ್ರಮಗಳು ರದ್ದಾಗಿವೆ. ಇಂದಿರಾ ಕ್ಯಾಂಟಿನ್ನಂತಹ ಯೋಜನೆ ರದ್ದಾಗಿರುವುದು ನಿಜಕ್ಕೂ ಈ ಸರ್ಕಾರ ಯಾರ ಪರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಕೇವಲ ಕಚೇರಿ ಉದ್ಘಾಟಿಸಿದರೆ ಸಾಲದು, ಪ್ರತಿ ದಿನ ಬ್ಲಾಕ್ ಮತ್ತು ಬೂತ್ ಲೆವೆಲ್ ಕಾರ್ಯಕರ್ತರು ಕೂತು ಚರ್ಚೆ ನಡೆಸಿ ಜನರ ಸಮಸ್ಯೆಗಳನಿಟ್ಟು ಚರ್ಚೆ ನಡೆಸಿ ಜನರ ಮುಂದಿಡುವ ಕೆಲಸ ಮಾಡಬೇಕೆಂದು ಮಯೂರ ಜಯಕುಮಾರ್ ಸೂಚಿಸಿದರು.

ಮಾಜಿ ಶಾಸಕ ಎಸ್. ಷಫಿ ಅಹಮದ್ ಮಾತನಾಡಿ, ಇಂದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಕಾಲವಿರಬಹುದು, ಆದರೆ ಎಂದಿಗೂ ಕಾರ್ಯಕರ್ತರು ಎದೆಗುಂದಬಾರದು. ಎಲ್ಲರೂ ಒಗ್ಗೂಡಿ ಮುನ್ನೆಡೆದರೆ ಗೆಲುವು ನಿಶ್ಚಿತ. ಈ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷದ ಹೈಕಮಾಂಡ್ ನೀಡುವ ಸೂಚನೆ ಪಾಲಿಸುತ್ತಾ ಪಕ್ಷ ಸಂಘಟಿಸಿ ಮುಂದಿನ ಚುನಾವಣೆಯಲ್ಲಿ 11ಕ್ಕೆ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್. ರಾಮಕೃಷ್ಣ ಮಾತನಾಡಿ, ಪಕ್ಷದ ಹೈಕಮಾಂಡ್ ಸೂಚನೆಯಂತೆ ಎಲ್ಲಾ ಬ್ಲಾಕ್ಗಳಲ್ಲಿಯೂ ಪಕ್ಷದ ಕಚೇರಿ ತೆರೆಯಲಾಗುತ್ತಿದೆ. ಅದರ ಭಾಗವಾಗಿ ಇಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಚೇರಿ ಆರಂಭಗೊಂಡಿದೆ. ಪ್ರತಿಯೊಬ್ಬ ಬೂತ್ ಮಟ್ಟದ ಸಹಾಯಕನು ತಮ್ಮ ಬೂತ್ನಲ್ಲಿ ಡಿಲೀಟ್ ಆಗಿರುವ ಮತದಾರರನ್ನು ಪತ್ತೆ ಹೆಚ್ಚಿ, ಡಿಸೆಂಬರ್ 08 ರೊಳಗೆ ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸುವ ಮೂಲಕ ಮತದಾರರ ಹಕ್ಕು ದೊರೆಯುವಂತೆ ಮಾಡಬೇಕೆಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ತುಮಕೂರು ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸುವ ಮೂಲಕ ಹೊಸ ಶಕ್ತಿ ತುಂಬಿದೆ. ವಾಮಮಾರ್ಗದ ಮೂಲಕ ಗೆಲುವ ಕನಸು ಕಾಣುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕೆಂದರು.
ಮಾಜಿ ಶಾಸಕ ಡಾ.ಎಸ್. ರಫೀಕ್ ಅಹಮದ್ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಕಚೇರಿ ತೆರೆಯುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಈ ಕಚೇರಿಯನ್ನು ಪಕ್ಷ ಸಂಘಟನೆಗೆ ಬಳಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ತುಮಕೂರು ನಗರ ಕ್ಷೇತ್ರದ ಉಸ್ತುವಾರಿ ಕೇಶವಮೂರ್ತಿ, ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ಮೇಯರ್ ಪ್ರಭಾವತಿ ಸುಧೀಶ್ವರ್, ಹೊನ್ನಗಿರಿಗೌಡ, ಗೀತಾರುದ್ರೇಶ್, ನಯಾಜ್ ಅಹಮದ್, ಗೀತಾರುದ್ರೇಶ್, ಫರ್ಜಾನಾ ಖಾನಂ, ರೆಡ್ಡಿ ಚಿನ್ನಯಲ್ಲಪ್ಪ, ಬಾಲಕೃಷ್ಣ, ವಾಲೆಚಂದ್ರ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!