ಯುವಕರು ಆಕರ್ಷಣೆಗೆ ಒಳಗಾಗಿ ದಾರಿ ತಪ್ಪೋದು ಬೇಡ

914

Get real time updates directly on you device, subscribe now.


ತುಮಕೂರು: ಯುವಕರ ಮುಂದೆ ದಾರಿ ತಪ್ಪಿಸುವ ಅನೇಕ ಆಕರ್ಷಣೆಗಳಿವೆ. ಅವುಗಳನ್ನು ಮೀರಿ ನಡೆದರೆ ಮಾತ್ರ ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ಹೆಸರು ಸಂಪಾದಿಸಲು ಸಾಧ್ಯ ಎಂದು ಕನ್ನಡ ಪ್ರಾಧ್ಯಾಪಕ ಡಾ.ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಂಗ ಕೀರ್ತನ ಸಂಪದ ಮಲ್ಲಸಂದ್ರ ಇವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಿರಿ ಸಿಂಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಾಟ್ಸಾಪ್, ಫೇಸ್ಬುಕ್, ಟ್ವೀಟರ್, ಹುಸಿ ಭ್ರಮಾತ್ಮಕ ಸಿನಿಮಾಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು. ಇವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ನಿಮ್ಮ ಕೆರಿಯರ್ ಬಗ್ಗೆ ಗಮನ ಹರಿಸಿದರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಎಲ್ಲರಲ್ಲಿಯೂ ಕಲಾವಿದ ಇರುತ್ತಾನೆ, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಹೊರ ಹಾಕಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ. ಶಿಕ್ಷಣದ ಜೊತೆ ಜೊತೆಗೆ, ಕಲೆ, ಸಂಗೀತ, ಸಾಹಿತ್ಯ, ಸಾಮಾನ್ಯ ಜ್ಞಾನದ ಕಡೆಗೆ ಗಮನ ಹರಿಸಿದರೆ ಹೆಚ್ಚು ಉನ್ನತ ಮಟ್ಟಕ್ಕೆ ಬೆಳೆಯಬಹುದು. ಕರುಣೆ, ಪ್ರೀತಿ ಮೈಗೂಡಿಸಿಕೊಂಡು, ಪರಸ್ವರ ನಂಬಿಕೆಯ ಜೀವನ ನಡೆಸುವಂತೆ ಡಾ.ಡಿ.ವಿ.ಪರಶಿವಮೂರ್ತಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಆರ್. ಲೀಲಾವತಿ ಮಾತನಾಡಿ, ಅಧ್ಯಯನದ ಜೊತೆಗೆ ಕಲೆಯನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಸಂಗೀತದಿಂದ ಮನುಷ್ಯನಲ್ಲಿರುವ ಕೆಟ್ಟ ವಿಚಾರಗಳು ದೂರವಾಗಿ ಮನಸ್ಸು ಹಗುರವಾಗುತ್ತದೆ. ಜಾನಪದಿಯರು ಬಿದಿರು ಕುರಿತಂತೆ ಒಂದು ಒಳ್ಳೆಯ ಹಾಡು ಕಟ್ಟಿದ್ದಾರೆ. ಮನುಷ್ಯನು ಸಹ ಬಿದಿರಿನಂತೆ ಬಹು ಉಪಯೋಗಿಯಾಗಿ ಬಾಳುವಂತಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ರಂಗಕೀತನ ಸಂಪದದ ಅಧ್ಯಕ್ಷ ಡಾ. ಲಕ್ಷ್ಮಣದಾಸ್ ಮಾತನಾಡಿ, ಸಂಗೀತಕ್ಕೆ ಕಲ್ಲು ಹೃದಯವನ್ನು ಕರಗಿಸುವ ಶಕ್ತಿ ಇದೆ. ಹಲವಾರು ಸಂಶೋಧನೆಗಳು ಸಂಗೀತಕ್ಕೆ ನೋವು ಮರೆಸುವ ಗುಣವಿದೆ ಎಂಬುದನ್ನು ಸಾರಿ ಹೇಳಿವೆ. ಹಾಗಾಗಿ ಮಕ್ಕಳು ಸಂಗೀತದತ್ತ ತಮ್ಮ ಒಲವು ಹೊಂದಬೇಕು. ಆ ಮೂಲಕ ಮನದ ನೋವು ಮರೆಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಶಿವಣ್ಣ ಬೆಳವಾಡಿ, ಸ್ವರಸಿಂಚನ ಸುಗಮ ಸಂಗೀತ, ಜಾನಪದ ಕಲಾ ಸಂಸ್ಥೆಯ ಕೆಂಕೆರೆ ಮಲ್ಲಿಕಾರ್ಜುನ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಪ್ರತಿನಿಧಿ ಡಾ. ತಿಪ್ಪೇಸ್ವಾಮಿ, ಡಾ. ರೇಣುಕಾ, ಡಾ. ಅಯಿಶಾ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!