ಲಾಕ್ ಡೌನ್ ತೋರಿಸಿದ “ರಮ್ಯ ಚೈತ್ರಕಾಲ”

270

Get real time updates directly on you device, subscribe now.

ಪ್ರಕೃತಿ ಮತ್ತು ಪರಿಸರ ನಿಜಕ್ಕೂ ಅದೆಷ್ಟು ಸೊಗಸು ಎಂದು ನೋಡಲಿಕ್ಕೆ ಲಾಕ್ ಡೌನ್ ಒಂದು ರೀತಿ ಸಹಕಾರಿಯಾಗಿದೆ.
ಮಾನವನ ದುರಾಕ್ರಮಣಕ್ಕೆ ಬಲಿಯಾಗಿ ನಲುಗಿಹೋಗಿದ್ದ ಸಸ್ಯಶಾಮಲೆ ಈಗ ಹಸಿರು ಸೀರೆಯುಟ್ಟು ಸಂಭ್ರಮದಿಂದ ನಲಿಯುತ್ತಿದ್ದಾಳೆ. ಇದು ರಮ್ಯ ಚೈತ್ರಕಾಲ ಎಂದು ಕುಣಿದು ಕುಪ್ಪಳಿಸುವಷ್ಟು ಚೇತೋಹಾರಿಯಾಗಿದೆ ಪರಿಸರ. ಗಂಗೆಯಂತೂ ಮಲಿನ ತೊಳೆದುಕೊಂಡು ಸಾಕಷ್ಟು ನಿರ್ಮಲಳಾಗಿದ್ದಾಳಂತೆ.
ನೀರು ಎಷ್ಟು ಶುದ್ಧವಾಗಿದೆಯೆಂದರೆ ಆ ನೀರನ್ನು ಹಾಗೇ ಬೊಗಸೆಯಲ್ಲಿ ಕುಡಿದು ಬಿಡಬಹುದು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು. ಮಿನರಲ್ ವಾಟರ್ ಕಂಪನಿಯವರು ಸೀದಾ ಗಂಗೆ ನೀರು ತುಂಬಿಕೊಂಡು ಬಂದು ಬಾಟಲ್ ಮಾಡಿ ಮಾರುವುದಷ್ಟೇ ಬಾಕಿ!. ಅದಕ್ಕಿಂತ ಹೆಚ್ಚಾಗಿ ನಮ್ಮ ಕೃಷ್ಣಯ್ಯ ಶೆಟ್ಟರು ಅಥವಾ ಸರ್ಕಾರ ಶಿವರಾತ್ರಿಗೆ ಮುಂಚೆಯೇ ದೇವಸ್ಥಾನಗಳಲ್ಲಿ ಗಂಗಾಜಲದ ವಿತರಣೆ ಆರಂಭಿಸಬಹುದಿತ್ತು. ಗಂಗೆ ಕುಡಿದರೆ ಕೊರೋನಾ ಬರಲ್ಲ ಎಂಬ ಪ್ರಚಾರ ಶುರುವಾದರೂ ಆಚ್ಛರಿಯಿಲ್ಲ!

ಆದರೆ ದೇವರಿಗೇ ದಿಗ್ಬಂಧನವಿರುವುದರಿಂದ ಅವನಿಗೂ ಗಂಗಾಸ್ನಾನ ಅಸಂಭವವಾಗಿದೆ. ತೀರಾ ಶುದ್ಧವಾಗಿರುವುದರಿಂದ ಸಾಯುವವರ ಬಾಯಿಗೆ ಬಿಟ್ಟರೂ ಇನ್ ಫ್ಯಾಕ್ಷನ್ ಆಗದ ಕಾರಣ ಇನ್ನೆರಡು ದಿನ ಬದುಕಿಯಾರು. ಇದೆಲ್ಲಾ ತೀರಾ ಉತ್ಪ್ರೇಕ್ಷೆಯೇ ಆದರೂ ಗಂಗೆಯ ಗರ್ಭದಲ್ಲಿ ಮನುಷ್ಯನ ಪಾಪದ ಕೊಳೆ ಕಮ್ಮಿಯಾಗಿರುವುದಂತೂ ಅಕ್ಷರ ಸಹ ಸತ್ಯ. ಹಾಗೇ ಜಲಂದರ್ ನಿಂದ 200 ಕಿಮೀ ದೂರದಲ್ಲಿರುವ ಬೆಟ್ಟವೊಂದು 50 ವರ್ಷಗಳ ನಂತರ ನಿಚ್ಛಳವಾಗಿ ಕಾಣುತ್ತಿದೆಯಂತೆ. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇಂತಹ ಸಂಗತಿಗಳು ಕಂಡ ವರದಿಯಾಗಿವೆ. ತನ್ನೊಡಲಲ್ಲಿ ಕುದಿವ ಲಾವಾರಸ ಇಟ್ಟುಕೊಂಡಿದ್ದರೂ ಸದಾ ತಂಪಾಗಿರುವ ಆಫ್ರಿಕಾದ ಕಿಲಮಂಜಾರೋ ಬೆಟ್ಟ ಸಹ ನೈರೋಬಿಯಿಂದ ಸ್ಪಷ್ಟವಾಗಿ ಕಾಣುತ್ತಿದೆಯಂತೆ. ಸ್ನೇಹಿತರೊಬ್ಬರು ನೈರೋಬಿಯ ತಮ್ಮ ಮನೆಯ ಬಾಲ್ಕನಿಯಿಂದ ತೆಗೆದ ಕಿಲಮಂಜಾರೋ ಪರ್ವತದ ಚಿತ್ರಗಳನ್ನು ಕಿರಿಯ ಸ್ನೇಹಿತ ಭಾನುಪ್ರಕಾಶ್ ಕಳಿಸಿದ್ದಾನೆ.
ಇನ್ನೂ ಮುಂದು ಹೋಗಿ ಹೇಳುವುದಾದರೆ ಅಲೆಲ್ಲೋ ಬರೋರು ಆಂಟಿನೋ, ಹೆಂಡ್ತಿನೋ ಅಂತ ದೂರದಿಂದಲೇ ಕರಾರುವಾಕ್ಕಾಗಿ ಗುರುತಿಸಬಹುದು ಅಂತ ಇದ್ರಲ್ಲೂ ಜೋಕ್ ಮಾಡೋದ್ರು! ಇದೆಲ್ಲಾ ಸರಿ, ಆದರೆ ಇಷ್ಟೆಲ್ಲಾ ಪರಿವರ್ತನೆಯನ್ನು ಮನುಷ್ಯ ಅನುಭವಿಸದಂತೆ ಆಗಿದೆ. ಒಂದು ಹಾಡಿದೆಯಲ್ಲ, ಹೆಣ್ಣಿನಲ್ಲಿ ಅಂದವಿಟ್ಟನೋ ನಮ್ಮ ಶಿವ ಕಣ್ಣುಗಳ ಕಟ್ಟಿಬಿಟ್ಟನೋ, ಕಾಣದಂತೆ ಮಾಯವಾದನೋ, ನಮ್ಮ ಶಿವ ಕೈಲಾಸ ಸೇರಿಕೊಂಡನೋ, ಅನ್ನುವಂತಾಗಿದೆ ನಮ್ಮ ಪರಿಸ್ಥಿತಿ. ಪ್ರಕೃತಿಯ ಈ ಚೇತೋಹಾರಿ ಬೆಡಗನ್ನು ಮನುಷ್ಯ ಯಥೇಚ್ಛವಾಗಿ ಅನುಭವಿಸುವ ಸ್ಥಿತಿಯಲ್ಲಿ ಇಲ್ಲ. ನಿಸರ್ಗದ ಸೊಬಗನ್ನು ಕಣ್ತುಂಬಾ ಸವಿಯುವಂತಿಲ್ಲ, ಪರಿಶುದ್ಧವಾದ ಗಾಳಿಯನ್ನು ಸ್ವಚ್ಛಂದವಾಗಿ ಕುಡಿಯುವಂತಿಲ್ಲ. ಮಾಸ್ಕ್ ಹಾಕಿಕೊಂಡು ಮನೆಯಲ್ಲೇ ಫ್ಯಾನ್ ಗಾಳಿ ಕುಡಿಯುತ್ತಾ ಕುಳಿತಿರಬೇಕು. ಎಂತಹ ವಿಪರ್ಯಾಸ ಅಲ್ಲವಾ? ಇನ್ನೂ ಒಂದು ವಿಷಯ ಇದೆ.
ಒಬ್ಬಾಕೆ ಗಂಡನಿಗೆ ಹೇಳುತ್ತಾಳೆ ರೀ.. ಪಕ್ಕದ ಮನೆ ಲಲಿತ ಒಂದು ದಿನನೂ ನೆಟ್ಟಗೆ ಬಟ್ಟೆ ಒಗೀತಿರಲಿಲ್ಲ, ಎಲ್ಲಾ ಮಬ್ಬು ಮಬ್ಬಾಗಿ ಕಾಣ್ತಿತ್ತು, ಇವತ್ತು ಏನೋ ಗ್ರಹಚಾರಕ್ಕೆ ಬೆಳ್ಳಗೆ ಕಾಣೋ ಹಾಗೆ ಒಗ್ದಿದಾಳೆ ನೋಡಿ ಅಂತ. ಅದಕ್ಕೆ ಗಂಡ ಹೇಳುದ್ನಂತೆ.. ಅದು ಹಾಗಲ್ವೇ? ಕಿಟಕಿ ಗಾಜಿಗೆ ಧೂಳು ತುಂಬ್ಕೊಂಡು ನಿಂಗೆ ಸರಿಯಾಗಿ ಕಾಣ್ತಿರಲಿಲ್ಲ, ಇವತ್ತು ಗಾಜು ಒರ್ಸಿದೀನಿ.. ಅದಕ್ಕೇ ಅವಳು ಒಗ್ದಿರೋ ಬಟ್ಟೆ ಬೆಳ್ಳಗೆ ಕಾಣ್ತಿದೆ ಅಂತ. ಹೀಗೆ ನಾವೂ ನಮ್ಮ ಕಣ್ಣು, ಅಂತಃಚಕ್ಷುವಿನ (ಒಳಗಣ್ಣು) ದೂಳು ಒರೆಸದೆ ಪ್ರಕೃತಿ, ಪರಿಸರ, ನಮ್ ಮುಂದಿನ ಜನಗಳು ಮಬ್ಬು ಮಬ್ಬಾಗಿ ಕಾಣ್ತಿದ್ರು. ಕಡೆದಾಗಿ ಈಗಲಾದ್ರೂ ನಾವು ಕಣ್ ಒರೆಸಿಕೊಂಡು, ಕನ್ನಡಕ ಒರೆಸಿಕೊಂಡು ನೋಡೋದನ್ನ ಅಭ್ಯಾಸ ಮಾಡ್ಕೊಬೇಕಾಗಿದೆ. ಏನಂತೀರಿ?

ತುರುವೇಕೆರೆ ಪ್ರಸಾದ್
ಮೊ.:7975503767

Get real time updates directly on you device, subscribe now.

Comments are closed.

error: Content is protected !!