ಕೊರಟಗೆರೆ: ಕರ್ನಾಟಕ ರಾಜ್ಯದಲ್ಲಿ ಕೊರಟಗೆರೆ ಕ್ಷೇತ್ರವನ್ನು ಗುರುತಿಸುವ ರೀತಿಯಲ್ಲಿ ನಾನು 15 ವರ್ಷದಿಂದ ಅಭಿವೃದ್ಧಿ ಮಾಡಿದ್ದೇನೆ. ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ನನ್ನದೇ ಆದಂತಹ ವಿಶೇಷ ಕೊಡುಗೆ ನೀಡಿದ್ದೇನೆ. ನನ್ನ ಕನಸಿನ ಯೋಜನೆಯನ್ನೇ ಮಾಡುವ ಉದ್ದೇಶದಿಂದ 2023ಕ್ಕೆ ನನಗೆ ಮತ್ತೆ ಆಶೀರ್ವಾದ ನೀಡಬೇಕಿದೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಮನವಿ ಮಾಡಿದರು.
ಕೊರಟಗೆರೆ ಪಟ್ಟಣದ ಪದವಿ ಪೂರ್ವಕಾಲೇಜು ಮೈದಾನದಲ್ಲಿ ಅಖಿಲ ಕರ್ನಾಟಕ ಡಾ.ಜಿ. ಪರಮೇಶ್ವರ ಯುವ ಸೈನ್ಯದ ವತಿಯಿಂದ ಏರ್ಪಡಿಸಲಾಗಿದ್ದ ನಾಡಿಗೆ ನಾಯಕ ಧ್ವನಿ ಸುರುಳಿ ಬಿಡುಗಡೆ ಮತ್ತು ಕೊರಟಗೆರೆಯ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಧುಗಿರಿಯಿಂದ ಸ್ಪರ್ಧಿಸಲು ಮೊದಲ ಸಲ ನನಗೆ ರಾಜೀವ್ ಗಾಂಧಿ ಟಿಕೆಟ್ ನೀಡಿದ್ರು, ಮಧುಗಿರಿ ನನ್ನ ರಾಜಕೀಯ ತವರು ಕ್ಷೇತ್ರ. 20 ವರ್ಷ ಮಧುಗಿರಿ ಕ್ಷೇತ್ರದ ಜನತೆಯ ಸೇವೆ ಮಾಡಿದ್ದೇನೆ. ಕೊರಟಗೆರೆಯಲ್ಲಿ ಸೋತ್ರು 15 ವರ್ಷ ಅಭಿವೃದ್ಧಿ ಕೆಲಸ ಮಾಡಿದ್ದೇನೆ. 35 ವರ್ಷಗಳ ರಾಜಕೀಯ ಜೀವನವು ನನಗೆ ತೃಪ್ತಿ ನೀಡಿದೆ. ನಿಮ್ಮೆಲ್ಲರ ಹಾರೈಕೆಯೇ ನನಗೆ ಶ್ರೀರಕ್ಷೆಯಾಗಿದೆ ಎಂದು ತಿಳಿಸಿದರು.
ಗೋಧಿ ಉಪ್ಪಿಟ್ಟು ಮತ್ತು ಹಾಲು ಕುಡಿದು ಬೆಳೆದ ಶೈಕ್ಷಣಿಕ ಬಡ ಜೀವನದ ಬಗ್ಗೆ ನನಗೆ ನೆನಪಿದೆ. ಯುವಕರೇ ಇದು ನಿಮ್ಮ ಭವಿಷ್ಯದ ಭಾರತ, ಸಮಾನತೆಯ ಬದುಕು ಕಟ್ಟಿಕೊಳ್ಳುವ ಭವ್ಯ ಭಾರತದ ಕನಸು ನಿಮ್ಮ ಕೈಯಲ್ಲಿದೆ. ಕೊರಟಗೆರೆ ಕ್ಷೇತ್ರದ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. 2023ಕ್ಕೆ ಮತ್ತೊಮ್ಮೆ ನಿಮ್ಮ ಬಳಿಗೆ ಬರುತ್ತೇನೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮುರುಳಿಧರ ಹಾಲಪ್ಪ, ತುಮಕೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ಗೌಡ, ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ, ಕೊರಟಗೆರೆ ಬ್ಲಾಕ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ವಿನಯ್, ಆಯೋಜಕ ನಗುತಾ ರಂಗನಾಥ್, ಅರವಿಂದ್, ಬಾಬು, ರವಿಕುಮಾರ್ ಇತರರು ಇದ್ದರು.
Comments are closed.