ಕುಣಿಗಲ್: ಕನಕಪುರದವರು ಈ ಬಾರಿಯ ಚುನಾವಣೆಯಲ್ಲಿ ಹಣ ಕೊಡ್ತಾರೆ ಪಡೆದುಕೊಳ್ಳಿ ಬೇಡ ಅನ್ಬೇಡಿ, ಆದರೆ ಮತ ಮಾತ್ರ ಜೆಡಿಎಸ್ಗೆ ಹಾಕಿ, ತಾಲೂಕಿನಲ್ಲಿ ಕಲ್ಲುಗಣಿಯಲ್ಲಿ ಲೂಟಿ ಹೊಡೆಯುವ ಮೂಲಕ ಸಂಪಾದಿಸಿದ ಹಣ ನೀಡಿ ಗೆಲ್ಲಲು ಈ ಬಾರಿ ಕನಕಪುರದವರು ಯೋಚಿಸಿದ್ದಾರೆ ಎಂದು ಮಾಜಿ ಸಚಿವ ಡಿ. ನಾಗರಾಜಯ್ಯ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಅರೆಪಾಳ್ಯದ ಬಳಿ ಪಂಚರತ್ನ ಯೋಜನೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಕಸಬಾ ಹೋಬಳಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಹಾಲಿ ಕಾಂಗ್ರೆಸ್ನ ಶಾಸಕರು ಕನಕಪುರದ ಕಡೆಯ ಸಂಬಂಧಿಕರು. ತಾಲೂಕನ್ನು ಪ್ರತಿನಿಧಿಸಿದ ಮೂಡಲಗಿರಿಗೌಡ, ತಮ್ಮಣ್ಣಗೌಡ, ವೈ.ಕೆ. ರಾಮಯ್ಯ, ಮುದ್ದಹನುಮೇಗೌಡ, ನಿಂಗಪ್ಪ, ರಾಮಸ್ವಾಮಿಗೌಡ ಸೇರಿದಂತೆ ಯಾವುದೇ ಜನಪ್ರತಿನಿಧಿ ಕಲ್ಲುಗಣಿಗಾರಿಕೆಗೆ ಕೈಹಾಕಲಿಲ್ಲ. ಹಾಲಿ ಶಾಸಕರು ತಾಲೂಕಿನಲ್ಲಿ ಕಲ್ಲುಗಣಿಗಾರಿಕೆಗೆ ಕೈಹಾಕಿ, ತಾಲೂಕಿನ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಇದಲ್ಲದೆ ಕಾಮಗಾರಿಗಳಲ್ಲಿ ಅಕ್ರಮ ಎಸಗಿದ್ದಾರೆ. ಇದೆ ಹಣವನ್ನು ಈ ಬಾರಿ ಚುನಾವಣೆಯಲ್ಲಿ ಚೆಲ್ಲಿ ಪುನಃ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಸ್ತ್ರೀಶಕ್ತಿ ಸಂಘದವರಿಗೆ ಸೀರೆ, ಮನೆಗಳಿಗೆ ಕುಕ್ಕರ್, ತವಾ ನೀಡಿದ್ದಲ್ಲದೆ ಈಗ ಎರಡು ಬಸ್ ಬಿಟ್ಟು ಜನರ ಪ್ರವಾಸ ಮಾಡಿಸುತ್ತಿದ್ದಾರೆ. ಇದಕ್ಕೆಲ್ಲ ಹಣದ ಮೂಲ ತಾಲೂಕಿನಲ್ಲಿ ಲೂಟಿ ಹೊಡೆದಿದರುವ ಕಲ್ಲು ಗಣಿಗಾರಿಕೆಯ ಹಣ ಎಂದರು.
ತಾಲೂಕಿನಲ್ಲಿ ಯಾವುದೇ ಅಭಿವೃದ್ದಿ ಮಾಡದೆ ಸಂಪೂರ್ಣ ಕ್ಷೇತ್ರವನ್ನು ಕಡೆಗಣಿಸಿರುವ ಶಾಸಕರನ್ನು ಈ ಬಾರಿ ಜನರು ತಿರಸ್ಕರಿಸಲಿದ್ದಾರೆ ಅನುಮಾನವೆ ಇಲ್ಲ. ಜನತೆ ಎಚ್ಚರಿದಿಂದ ಇದ್ದು ಅವರು ಕೊಡುವ ಎಲ್ಲಾ ರೀತಿಯ ಆಮೀಷ ಸ್ವೀಕರಿಸಿ ಮತ ಮಾತ್ರ ಜೆಡಿಎಸ್ ಪಕ್ಷಕ್ಕೆ ಹಾಕುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು. ಸಿಎಂ ಕೆಂಗಲ್ ಹನುಮಂತಯ್ಯನವರನ್ನು ಎದುರಿಸಿದ ಹುಚ್ಚಮಾಸ್ತಿಗೌಡ, ಸಿಎಂ ಎಸ್.ಎಂ. ಕೃಷ್ಣರವರನ್ನೇ ಎದುರಿಸಿದ ವೈಕೆಆರ್ ಕುಣಿಗಲ್ ತಾಲೂಕಿನವರಾಗಿದ್ದು ತಾಲೂಕಿನ ಇತಿಹಾಸ ಅರಿಯದ ಕನಕಪುರದವರು ತಾಲೂಕಿನ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಇದಕ್ಕೆ ಕಾಲ ಬಂದಾಗ ಉತ್ತರ ನೀಡಬೇಕಿದೆ. ತಾಲೂಕಿನಲ್ಲಿ ಡಿಸೆಂಬರ್ನಲ್ಲಿ ನಡೆಯುವ ಪಂಚರತ್ನ ಯೋಜನೆ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಮಾತನಾಡಿ, ತಾಲೂಕಿನಲ್ಲಿ ಎಂತೆಂಥಹ ರಾಜಕಾರಣಿಗಳು ಆಡಳಿತ ನಡೆಸಿದ್ದಾರೆ. ತಾಲೂಕಿನಿಂದ ಎಷ್ಟು ರಾಜಕಾರಣಿಗಳು ರಾಜ್ಯದ ವಿವಿಧೆಡೆಯಲ್ಲಿ ಛಾಪು ಮೂಡಿಸಿದ್ದಾರೆ ಎಂಬ ಕನಿಷ್ಟ ಅರಿವು ಇಲ್ಲದ ಸಂಸದರು, ತಾಲೂಕಿನ ಜನರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ತಾಲೂಕಿನ ಜನರು ಇದಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಮಾಡಿದ ಸಾಲ ಮನ್ನಾ ಯೋಜನೆಯಿಂದ ತಾಲೂಕಿನಲ್ಲಿ ಸಾವಿರಾರು ಕುಟುಂಬಗಳಿಗೆ ಪಕ್ಷಾತೀತವಾಗಿ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನ ಇಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಉಚಿತ ಶಿಕ್ಷಣ, ಆರೋಗ್ಯ, ಸಾಲ ಮನ್ನಾ ಸೇರಿದಂತೆ ಹಲವು ರೀತಿಯ ಜನಪರ ಸಮಸ್ಯೆ ಬಗೆಹರಿಸಲಾಗುವುದು. ಈ ಬಗ್ಗೆ ಕಾರ್ಯಕರ್ತರು ಜನರಲ್ಲಿ ಅರಿವು ಮೂಡಿಸಿ ತಾಲೂಕಿನಲ್ಲಿ ಹಾಗೂ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಬೇಕೆಂದರು.
ಮುಖಂಡರಾದ ಹರೀಶ್ನಾಯಕ್, ಜಯಣ್ಣ, ಹನುಮೇಗೌಡ, ಮೊದೂರು ಗಂಗಾಧರ, ತರಿಕೆರೆ ಪ್ರಕಾಶ, ಬೇಗೂರು ಮೂರ್ತಿ, ಹೇರೂರು ರಾಮಣ್ಣ, ಶಂಕರಣ್ಣ, ಚಂದ್ರಣ್ಣ ಇತರರು ಇದ್ದರು.
Comments are closed.