ಅಂಗಡಿಗಳಲ್ಲಿ ಲಕ್ಷಾಂತರ ಮೌಲ್ಯದ ಸಿಗರೇಟ್, ನಗದು ಕಳ್ಳತನ

122

Get real time updates directly on you device, subscribe now.


ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಎರಡು ಅಂಗಡಿಗಳ ಬೀಗ ಮುರಿದ ಕಳ್ಳರು ಲಕ್ಷಾಂತರ ಮೌಲ್ಯದ ಸಿಗರೇಟ್ ಹಾಗೂ 40 ಸಾವಿರಕ್ಕೂ ಹೆಚ್ಚು ನಗದು ದೋಚಿ ಪರಾರಿಯಾಗಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆಗೆ ಹೊಂದಿಕೊಂಡಂತಿರುವ ರಾಘವೇಂದ್ರ ಹೋಟೆಲ್ ಪಕ್ಕದ ಧನಲಕ್ಷ್ಮೀ ಸ್ಟೋರ್ಸ್ ಹಾಗೂ ಬೀಡಾ ಅಂಗಡಿಯ ಬೀಗವನ್ನು ಕಳ್ಳರು ಮುರಿದಿದ್ದಾರೆ. ಹೋಲ್ಸೇಲ್ ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಸಿಗರೇಟ್, ಹುಂಡಿಯಲ್ಲಿರಿಸಿದ್ದ ಸುಮಾರು 20 ಸಾವಿರ ನಗದು ಹಾಗೂ ಬೀಡಾ ಅಂಗಡಿಯಿಂದ 20 ಸಾವಿರ ನಗದು ದೋಚಿದ್ದಾರೆ ಎಂದು ಅಂಗಡಿ ಮಾಲೀಕ ಮಾಂಗೀಲಾಲ್ ಪಟೇಲ್ ಮಾಹಿತಿ ನೀಡಿದ್ದಾರೆ. ಶಾರ್ಟ್ ಸರ್ಕ್ಯೂಟ್ ಭೀತಿಯಿಂದ ಅಂಗಡಿಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ ಆಫ್ ಮಾಡಿದ್ದಾಗಿ ತಿಳಿಸಿರುವ ಅವರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ತಾಲೂಕಿನ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆದ ಕೊಬ್ಬರಿ ಕಳ್ಳತನ, ವಿದ್ಯಾನಗರದಲ್ಲಿ ಸರಣಿ ಮನೆಗಳ್ಳತನ, ಕುರಿ ಕಳ್ಳತನ ಘಟಿಸಿದ್ದವು. ಕೆಲ ದಿನಗಳ ಹಿಂದೆಯಷ್ಟೇ ನಡುವನಹಳ್ಳಿ ಅಮ್ಮನವರ ದೇಗುಲದಲ್ಲಿ ಕಳ್ಳತನದ ಯತ್ನ ನಡೆದಿತ್ತು. ಈ ಎಲ್ಲಾ ಘಟನೆಗಳು ಜನಮಾನಸದಿಂದ ದೂರಾಗುವ ಮುನ್ನವೇ ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿರುವ ಅಂಗಡಿಗಳ ಕಳ್ಳತನದಿಂದ ನಾಗರಿಕರು ಬೆಚ್ಚಿ ಬೀಳುವಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಯುವ ಮುಖಂಡ ದೊಡ್ಡಾಘಟ್ಟ ಚಂದ್ರೇಶ್ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿರುವ ಕಳ್ಳತನಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪಟ್ಟಣದಲ್ಲೇ ನಡೆದಿರುವ ಕಳ್ಳತನ ಪೊಲೀಸರ ವೈಫಲ್ಯ ಎತ್ತಿ ತೋರಿಸುತ್ತಿದೆ. ಜಿಲ್ಲಾ ಎಸ್ಪಿ ಅವರು ಇತ್ತ ಗಮನಹರಿಸಿ ಕಳ್ಳರನ್ನು ಬಂಧಿಸಲು ಸೂಚನೆ ನೀಡಲಿ, ಇಲ್ಲವಾದಲ್ಲಿ ಪೊಲೀಸ್ ವೈಫಲ್ಯ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!