ಭಾಷೆಯ ಮೂಲ ಉದ್ದೇಶ ಸಂವಹನವಾಗಿದೆ: ಪ್ರೊ. ತಮಿಳ್ ಸೆಲ್ವಿ

100

Get real time updates directly on you device, subscribe now.


ತುಮಕೂರು: ಇಂದಿನ ದಿನಗಳಲ್ಲಿ ಇಂಗ್ಲೀಷ್ ಬಲ್ಲವನಾಗಿದ್ದರೆ ಮಾತ್ರ ಬೆಲೆ ಎಂಬಂತಾಗಿದೆ. ಆದರೆ ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಾಗಿದ್ದು, ಭಾಷೆಯ ಮೂಲ ಉದ್ದೇಶವೇ ಸಂವಹನವಾಗಿದೆ ಎಂದು ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ತಮಿಳ್ ಸೆಲ್ವಿ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಕಾವ್ಯ: ತ್ಯಾಗ ಭೋಗ ಸಮನ್ವಯ ದೃಷ್ಟಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾಷಾವಾರು ಪ್ರಾಂತ್ಯಗಳನ್ನು ರೂಪಿಸುವಲ್ಲಿ ಕನ್ನಡಿಗರ ಹೋರಾಟ ಅತಿ ದೊಡ್ಡದು. ಇಡೀ ವಿಶ್ವದಲ್ಲಿ ಭಾಷೆಯ ಕುರಿತಾಗಿ ದಿನಾಚರಣೆಯನ್ನು ಉತ್ಸವದ ರೀತಿಯಲ್ಲಿ ಆಚರಿಸುವ ಏಕೈಕ ಭಾಷೆ ಕನ್ನಡ. 5 ಭಾಷೆಗಳು ಮಾತ್ರ ದ್ರಾವಿಡ ಭಾಷೆಗಳಲ್ಲ. ಇವುಗಳನ್ನು ಹೊರತುಪಡಿಸಿ ತುಳು, ಲಂಬಾಣಿ ಹಾಗೆಯೇ ಆದಿವಾಸಿ ಭಾಷೆಗಳು ಸಹ ದ್ರಾವಿಡ ಭಾಷೆಗಳಿವೆ ಎಂದರು.
ಕನ್ನಡ ಭಾಷೆ 2000 ವಷರ್ಗಳ ಸಾಹಿತ್ಯ ಶ್ರೀಮಂತಿಕೆಯನ್ನು ಹೊಂದಿದೆ ಎಂಬುದು ಅಧಿಕೃತ ದಾಖಲೆಗಳ ಮೂಲಕ ಸಾಬೀತಾಗುತ್ತದೆ. ಆದರೆ ಅದಕ್ಕೂ ಮುಂಚಿನಿಂದಲೂ ಕನ್ನಡವನ್ನು ಆಡು ಭಾಷೆಯಾಗಿ ಬಳಸಲಾಗುತ್ತಿತ್ತು. ಆದರೆ ಕೇವಲ ವ್ಯವಹಾರಿಕ ಹಾಗೆ ದಾಖಲೆಯ ಉದ್ದೇಶದಿಂದ ಆಡು ಭಾಷೆಗೆ ಲಿಖಿತ ರೂಪ ನೀಡಲಾಗಿದೆ ಎಂದರು.
ಕನ್ನಡ ಭಾಷೆ ಕುರಿತಾದ ದಾಖಲೆ ಕರ್ನಾಟಕದಲ್ಲಿ ಮಾತ್ರವಲ್ಲ ದೂರದ ಈಜಿಪ್ಟ್ ದೇಶದಲ್ಲಿ ನಿರ್ಮಿಸಲಾದ ಗೋಡೆಗಳ ಮೇಲೆಯೂ ಕನ್ನಡದ ಅಕ್ಷರಗಳನ್ನು ನಾವು ಕಾಣಬಹುದಾಗಿದೆ. ಈ ಮೂಲಕವಾಗಿ ಕನ್ನಡ ಭಾಷೆಯು ಗತವೈಭವವನ್ನು ತಿಳಿಯಬಹುದು ಎಂದರು.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಲು ಕನ್ನಡ ಭಾಷೆ ಸೇರಿದಂತೆ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ಕನ್ನಡದ ಕುರಿತಾದ ಅನೇಕ ಉಲ್ಲೇಖಗಳ ಮೂಲಕವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ ಎಂದು ವಿಶ್ಲೇಷಿಸಿದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್ ರಾಜು ಮಾತನಾಡಿ ವಿದ್ಯಾರ್ಥಿಗಳೇ ಮುಂದೆ ಬಂದು ಕನ್ನಡ ದಿನಾಚರಣೆಯನ್ನು ಆಚರಿಸುತ್ತಿರುವುದು ನಿಜಕ್ಕೂ ವಿದ್ಯಾರ್ಥಿಗಳಲ್ಲಿ ಕನ್ನಡದ ಕುರಿತ ಪ್ರೀತಿ ಹೆಚ್ಚುತ್ತಿರುವುದನ್ನು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಶೇಟ್ ಪ್ರಕಾಶ್ ಎಮ್, ಕುವೆಂಪು ಅಧ್ಯಯನ ಪೀಠ ಸಂಯೋಜಕರಾದ ಡಾ. ಗೀತಾ ವಸಂತ, ಸಾಹಿತಿ ಎಸ್. ಪಿ. ಪದ್ಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!