ಬಿಜೆಪಿ ದುರಾಡಳಿತದ ವಿರುದ್ಧ ಐಕ್ಯತಾ ಸಮಾವೇಶ

112

Get real time updates directly on you device, subscribe now.


ತುಮಕೂರು: ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ರವರ 66ನೇ ಪರಿನಿಬ್ಬಾಣದ ದಿನದ ಅಂಗವಾಗಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಆಶಯ ನಾಶ ಮಾಡುತ್ತಿರುವ ಆರ್ಎಸ್ಎಸ್, ಬಿಜೆಪಿ ದುರಾಡಳಿತದ ವಿರುದ್ಧ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ವ್ಯಕ್ತಪಡಿಸಲು ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ಡಿಸೆಂಬರ್ 6 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಹಿರಿಯ ಮುಖಂಡರು ಹಾಗೂ ಚಿಂತಕ ಕೆ.ದೊರೈರಾಜ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಈ ಸಂದರ್ಭದಲ್ಲಿ, ದೇಶ ಎಲ್ಲಾ ರಂಗಗಳಲ್ಲೂ ಅಧಃಪತನದತ್ತ ಸಾಗುತ್ತಿರುವುದನ್ನು ನಾವೆಲ್ಲಾ ಗಮನಿಸುತ್ತಿದ್ದೇವೆ. ಸಂವಿಧಾನದ ಆಶಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ನ್ಯಾಯ ಕನಸಿನ ಗಂಟಾಗಿದೆ. ನಿರುದ್ಯೋಗ ಯುವ ಜನಾಂಗವನ್ನು ಹತಾಶೆಗೆ ದೂಡಿದೆ, ಕೋಮು ರಾಜಕೀಯ ವಿಜೃಂಭಿಸುತ್ತಿದೆ. ನ್ಯಾಯ ಕೇಳುವವರು ದೇಶ ದ್ರೋಹಿಗಳಾಗುತ್ತಿದ್ದಾರೆ. ಪ್ರಗತಿಪರತೆ, ಜಾತ್ಯತೀತತೆ ಅಪಹಾಸ್ಯಕ್ಕೊಳಗಾಗುತ್ತಿವೆ. ಸಮ ಸಮಾಜದ ಕನಸು ಬಿತ್ತಿದ ಬುದ್ಧ, ಬಸವ, ಅಂಬೇಡ್ಕರ್ ಮರೆಯಾಗಿ, ಕೋಮು ವಿಷದ ಗೋಡ್ಸೆ, ಸಾವರ್ಕರ್ಗಳು ಮುನ್ನೆಲೆಗೆ ಬರುತ್ತಿದ್ದಾರೆ. ಇಡೀ ದೇಶ ಕೋಮು ನಂಜಿನ ಮಾಯಾಜಾಲದೊಳಗೆ ಸಿಲುಕಿ ಮತಿ ಭ್ರಮಣೆಗೊಳಗಾದಂತೆ ವರ್ತಿಸುತ್ತಿವೆ ಎಂದು ಹೇಳಿದರು.
ಬಿಜೆಪಿ ಸರ್ಕಾರವೇ ನೇರವಾಗಿ ಸರ್ಕಾರಿ ಮತ್ತು ಸಹಕಾರಿ ಕ್ಷೇತ್ರದ ಉದ್ದಿಮೆಗಳನ್ನು ಹಾಗೂ ಸಾರ್ವಜನಿಕ ಆಸ್ತಿಗಳನ್ನೆಲ್ಲ ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುತ್ತಾ ಮೀಸಲಾತಿಯ ಅಸ್ತಿತ್ವವನ್ನೇ ನಾಶಗೊಳಿಸಿ ಇನ್ನೊಂದೆಡೆ ಮೀಸಲಾತಿ ಹೆಚ್ಚಳದ ನಾಟಕ ಆಡಿ ಜನರನ್ನು ಮರಳು ಮಾಡುತ್ತಿದೆ. ಶಿಕ್ಷಣ ಹಾಗೂ ಆರೋಗ್ಯದಂತಹ ಸಾರ್ವಜನಿಕ ಕ್ಷೇತ್ರಗಳನ್ನೂ ಖಾಸಗೀಕರಣ ಮಾಡಲಾಗಿದೆ. ಈಗ ಈ ದುಷ್ಟ ಸಂಘ ಪರಿವಾರ ಮತ್ತು ಕ್ರೂರ ಕಾರ್ಪೋರೇಟ್ ಪರಿವಾರ ಇಡೀ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ತನ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳನ್ನೆಲ್ಲ ಕೈ ಬಿಡುತ್ತಿವೆ. ದಲಿತ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್ಶಿಪ್ ಹಣ ನಿಲ್ಲಿಸಲಾಗಿದೆ, ಶಾಲಾ ಪಠ್ಯಗಳನ್ನು ತಿದ್ದುವ ಮೂಲಕ ಮುಗ್ಧ ಮಕ್ಕಳ ಮನಸ್ಸಿಗೆ ಬಾಲ್ಯದಲ್ಲೇ ಕೋಮು ವಿಷ ತುಂಬಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕ ನೋಟು ಅಮಾನ್ಯೀಕರಣದಿಂದ ದೇಶದ ಅರ್ಥ ವ್ಯವಸ್ಥೆಯೇ ಕುಸಿದು ಬಿದ್ದಿದ್ದು, ಜನರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ನಿರುದ್ಯೋಗ, ಬಡತನ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರ ಏರುಗತಿಯಲ್ಲಿ ಸಾಗಿ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಇಂತಹ ದುಸ್ಥಿತಿಯಲ್ಲಿ ಜಿಎಸ್ಟಿಯಂತಹ ಜನ ವಿರೋಧಿ ತೆರಿಗೆ ನೀತಿ ಜಾರಿಗೆ ತಂದು ಕೂಲಿಕಾರರು, ಬಡವರು, ಭಿಕ್ಷುಕರನ್ನೂ ಸುಲಿಯಲಾಗುತ್ತಿದೆ. ದಲಿತರು, ದುರ್ಬಲರು, ರೈತರು, ಕುಶಲ ಕರ್ಮಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನೂ ನಿಲ್ಲಿಸಿ ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾದ ಕಾರ್ಪೊರೇಟ್ ಕುಳಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ದಲಿತ ದಮನಿತ ತಳ ಸಮುದಾಯಗಳ ಶೈಕ್ಷಣಿಕ ಅವಕಾಶಗಳನ್ನೂ ಕಸಿದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಾವು ಇದನ್ನು ಪ್ರಬಲವಾಗಿ ಪ್ರತಿಭಟಿಸಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತವನ್ನು ಉಳಿಸಿಕೊಳ್ಳಲು ನಾವೆಲ್ಲಾ ಒಟ್ಟಾಗಿ ಹೋರಾಟಕ್ಕೆ ಮುಂದಾಗಲೇಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಹಿರಿಯ ಮುಖಂಡ ಕುಂದೂರು ತಿಮ್ಮಯ್ಯ, ಬೆಲ್ಲದಮಡು ಕೃಷ್ಣಪ್ಪ, ಡಾ.ಮುರಳೀಧರ್, ಶಿವಶಂಕರ್ ಕುಣಿಗಲ್, ಚೇಳೂರು ವೆಂಕಟೇಶ್, ಗಂಗಮ್ಮ ಕೆಂಪಯ್ಯ, ಭರತ್ಕುಮಾರ್, ನರಸಿಂಯ್ಯ, ಕೊಟ್ಟ ಶಂಕರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!