ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಮತದಾನದ ಮಹತ್ವದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವಿಪ್ ಸಮಿತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿವಿಧ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚುನಾವಣೆಗಳು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು. ಪಾರದರ್ಶಕ ಮತ್ತು ನಿರ್ಭೀತ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನರ ಪಾತ್ರ ಅಪಾರವಾದುದು, ನಮ್ಮ ಯುವ ಸಮೂಹ. ಮತದಾರರ ಜಾಗೃತಿ ಸಂಘಗಳ ವಿದ್ಯಾರ್ಥಿಗಳು ಚುನಾವಣಾ ರಾಯಭಾರಿಗಳಂತೆ ಕೆಲಸ ನಿರ್ವಹಿಸಬೇಕಿದೆ. ನಮ್ಮ ವಿದ್ಯಾರ್ಥಿಗಳು ಚುನಾವಣೆ, ಮತದಾನದ ಬಗ್ಗೆ ತಮ್ಮ ಪೋಷಕರಿಗೆ, ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸುವ ಮೂಲಕ ಗರಿಷ್ಠ ಪ್ರಮಾಣದ ಮತದಾನಕ್ಕೆ ಶ್ರಮಿಸುವಂತೆ ಡಾ.ಕೆ.ವಿದ್ಯಾಕುಮಾರಿ ಕರೆ ನೀಡಿದರು.
ಚುನಾವಣೆ ಹಾಗೂ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಜನತೆ ಮೊದಲು ಖಚಿತ ಪಡಿಸಿಕೊಳ್ಳಬೇಕು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದೇ ಇದ್ದಲ್ಲಿ ಹತ್ತಿರದ ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಿ ಮೊದಲು ಹೆಸರು ಸೇರಿಸಬೇಕು. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಚುನಾವಣಾ ಆಯೋಗವು ಈ ವರ್ಷದಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ವರ್ಷದಲ್ಲಿ ನಾಲ್ಕು ಬಾರಿ ಅವಕಾಶ ಕಲ್ಪಿಸಿದೆ, ಇದನ್ನು ಜಿಲ್ಲೆಯ ಜನತೆ ಸದ್ಬಳಕೆ ಮಾಡಿಕೊಳ್ಳುವಂತೆ ಸಿಇಓ ಮನವಿ ಮಾಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಾಧರ್ ಮಾತನಾಡಿ, ಭಾರತ ದೇಶವು ಶಾಂತಿಯುತ ದೇಶವಾಗಿದ್ದು, ಇಲ್ಲಿನ ನಾಗರಿಕರು ಇಂದಿಗೂ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮ ಸರ್ಕಾರ ಆಯ್ಕೆ ಮಾಡುವುದು ಪ್ರತಿ ನಾಗರಿಕರ ಕರ್ತವ್ಯವಾಗಿದೆ. ಹಾಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಮತ್ತು ಕರ್ತವ್ಯ ಚಲಾಯಿಸುವಂತೆ ಸಲಹೆ ನೀಡಿದರು.
ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಷಣ್ಮುಖ.ಎಸ್. ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ನಮ್ಮೆಲ್ಲ ನಾಗರಿಕರ ಮೇಲಿದೆ. ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೇ ಆದಲ್ಲಿ ಕಲ್ಯಾಣ ಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸಹಾಯಕ ನೋಡೆಲ್ ಅಧಿಕಾರಿ ಜಿ.ಆರ್. ಶ್ರೀನಿವಾಸ್, ಚುನಾವಣಾ ಸಾಕ್ಷರತಾ ಕ್ಲಬ್ ನ ಜಿಲ್ಲಾ ಸಂಚಾಲಕ ಟಿ.ಜೆ. ಜ್ಯೋತಿ ಪ್ರಕಾಶ್, ಐಇಸಿ ಸಂಯೋಜಕ ಟಿ.ಕೆ. ವಿನುತ್, ಉಪನ್ಯಾಸಕರಾದ ಚಿದಾನಂದ್.ಕೆ.ಎಸ್, ಸಿದ್ದಪ್ಪ. ಎನ್, ಕುಮಾರಯ್ಯ ಮತ್ತಿತರರು ಹಾಜರಿದ್ದರು.
Comments are closed.