ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಅಸ್ಪಷ್ಟ ಬಹುಮತದ ಪ್ರಶ್ನೆಯೇ ಇರುವುದಿಲ್ಲ. ಜೆಡಿಎಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ರಾಜಕೀಯದ ಸುನಾಮಿ ಅಲೆ ಎದ್ದಿದ್ದು, ಜನತಾ ದಳದ ಪರವಾಗಿದೆ. ಜೆಡಿಎಸ್ನ ಈ ಸುನಾಮಿ ಅಲೆಯಲ್ಲಿ ಎಲ್ಲಾ ಪಕ್ಷಗಳು ಕೊಚ್ಚಿ ಹೋಗಲಿವೆ. ರಾಜ್ಯದಲ್ಲಿ ಈ ಬಾರಿ 123 ಸ್ಥಾನವನ್ನು ಜೆಡಿಎಸ್ ಪಕ್ಷ ಗೆಲ್ಲುವ ಗುರಿ ಹೊಂದಲಾಗಿದೆ. ಈ ಗುರಿಯನ್ನು ಜನರ ಆಶೀರ್ವಾದದೊಂದಿಗೆ ಸಾಧಿಸುತ್ತೇವೆ ಎಂಬ ಆತ್ಮವಿಶ್ವಾಸ ತಮಗಿದೆ ಎಂದರು.
ಈಗಾಗಲೇ ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡುವ ತೀರ್ಮಾನ ಮಾಡಿದ್ದಾರೆ. ರಾಜಕೀಯ ಗಾಳಿ ಗಂಧವೇ ಗೊತ್ತಿಲ್ಲದವರು ಸಹ ಕುಮಾರಣ್ಣ ಸಿಎಂ ಆಗಬೇಕು ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಯಾವುದೇ ಸಂದರ್ಭದಲ್ಲೂ ತೊಂದರೆಯಾಗದಂತೆ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡುವುದರೊಂದಿಗೆ ಅವರಿಗೆ ಆರ್ಥಿಕ ಶಕ್ತಿ ತುಂಬಲಾಗುವುದು ಎಂದರು.
ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ನನ್ನ ಹೋರಾಟ ಮತ್ತು ಗುರಿ ಹೊಂದಲಾಗಿದೆ. ಹಾಗಾಗಿ ಪಂಚರತ್ನ ರಥಯಾತ್ರೆ ಮೂಲಕ ನಾಡಿನ ಜನರ ಆಶೀರ್ವಾದ ಪಡೆಯಲು ಹೊರಟಿದ್ದೇನೆ ಎಂದು ಹೇಳಿದರು.
ರಾಜ್ಯದ 36 ವಿಧಾನಸಭಾ ಕ್ಷೇತ್ರದಲ್ಲಿ ಮೊದಲನೇ ಹಂತದ ಕಾರ್ಯಕ್ರಮ ನಿಗದಿ ಮಾಡಲಾಗಿದೆ ಜನವರಿ 3 ರಿಂದ 2ನೇ ಹಂತದ ರಥಯಾತ್ರೆ ಕಲ್ಬುರ್ಗಿ, ಬೀದರ್, ರಾಯಚೂರು, ಬಿಜಾಪುರ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಯಾತ್ರೆ ನಡೆಯಲಿದೆ ಎಂದರು. ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸದ್ಯದಲ್ಲೇ ಘೋಷಣೆ ಮಾಡಲಾಗುವುದು. ಇದಕ್ಕೆ ಪೂರಕವಾಗಿ ರಥಯಾತ್ರೆ ಸಂಚರಿಸಿದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ 10 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಡಿ.7 ರಂದು ಕೆಜಿಎಫ್ನಲ್ಲಿ ರಥಯಾತ್ರೆ ನಡೆಯಲಿದ್ದು, ಆ ಸಂದರ್ಭದಲ್ಲಿ ಆ ಜಿಲ್ಲೆಯ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದರು.
ಈಗಾಗಲೇ 3 ಜಿಲ್ಲೆಗಳಲ್ಲಿ ರಥಯಾತ್ರೆ ಕಾರ್ಯಕ್ರಮ ಮುಗಿಸಿ 4ನೇ ಜಿಲ್ಲೆ ತುಮಕೂರಿಗೆ ಯಾತ್ರೆ ಆಗಮಿಸಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ಪ್ರಾರಂಭ ಮಾಡುವುದಕ್ಕಿಂತ ಮುನ್ನ ಶ್ರೀಗಳ ಗದ್ದುಗೆಗೆ ಪ್ರಣಾಮ ಸಲ್ಲಿಸಿ ಆಶೀರ್ವಾದ ಪಡೆದಿದ್ದೇನೆ ಎಂದರು.
ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಗೆಲ್ಲಲು ಶ್ರಮ ಹಾಕುತ್ತೇವೆ. ಈ ಬಾರಿ 11 ಸ್ಥಾನಗಳಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತ ಎಂದ ಅವರು, 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಬೇಕಾದರೆ ತುಮಕೂರು ಜಿಲ್ಲೆಯಲ್ಲಿ 10 ಜೆಡಿಎಸ್ ಶಾಸಕರನ್ನು ಜನತೆ ಆಯ್ಕೆ ಮಾಡಿದ್ದರು. ಹಾಗೆಯೇ ಈ ಬಾರಿಯೂ 11 ಸ್ಥಾನಗಳಲ್ಲೂ ಜೆಡಿಎಸ್ ಗೆಲ್ಲಲು ಚುನಾವಣಾ ರಣತಂತ್ರ ರೂಪಿಸುವಲ್ಲಿ ನಾವು ಹಿಂದುಳಿದಿಲ್ಲ ಎಂದರು.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನನ್ನದೇ ಆದಂತಹ ಆಂತರಿಕ ಸಮೀಕ್ಷೆಗಳಿವೆ. ಆ ಕ್ಷೇತ್ರದಲ್ಲಿ ಉಪ ಚುನಾವಣೆ ಫಲಿತಾಂಶವೇ ಬೇರೆ, ಸಾರ್ವಜನಿಕ ಚುನಾವಣೆಯ ಫಲಿತಾಂಶವೇ ಬೇರೆಯಾಗಲಿದೆ. ಹಾಗಾಗಿ ಈ ಬಾರಿ ಶಿರಾದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರಾದ ತಿಪ್ಪೇಸ್ವಾಮಿ, ಡಿ. ನಾಗರಾಜಯ್ಯ, ಎಂ.ಟಿ. ಕೃಷ್ಣಪ್ಪ, ಆರ್.ಸಿ.ಆಂಜಿನಪ್ಪ, ಗೋವಿಂದರಾಜು, ಸುರೇಶ್ಬಾಬು, ಉಪ ಮೇಯರ್ ಟಿ.ಕೆ. ನರಸಿಂಹಮೂರ್ತಿ, ಬೆಳ್ಳಿ ಲೋಕೇಶ್, ಶಶಿಕಲಾ ಗಂಗಹನುಮಯ್ಯ, ಟಿ.ಆರ್. ನಾಗರಾಜು ಮತ್ತಿತರರು ಹಾಜರಿದ್ದರು.
Comments are closed.