ಗುಬ್ಬಿ: ಶಾಸಕ ಎಸ್.ಆರ್. ಶ್ರೀನಿವಾಸ್ ಯಾವುದೇ ಪಕ್ಷಕ್ಕೆ ಹೋದರು ನೀವು ಯಾರು ಮತ ಹಾಕಬಾರದು ಎಂದು ಕಾಂಗ್ರೆಸ್ ಮುಖಂಡ ಹೊನ್ನಗಿರಿ ಗೌಡ ಮನವಿ ಮಾಡಿದರು.
ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಆಯೋಜನೆ ಮಾಡಿದ್ದ ಸಮಚಿತ್ತ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ ತಾಲ್ಲೂಕಿನ ಮುಖಂಡರಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಟಿಕೆಟ್ ನೀಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಕೆಲಸಕ್ಕೆ ಮುಂದಾಗಬೇಕು. ಕಷ್ಟ ಬಿದ್ದು ಕಟ್ಟಿರುವ ಪಕ್ಷಕ್ಕೆ ಮತ್ತೊಬ್ಬರನ್ನು ತಂದು ಟಿಕೆಟ್ ಕೊಟ್ಟು ಗೆಲ್ಲಿಸಿ ಕೊಡುವಂತಹ ಕೆಲಸಕ್ಕೆ ಮುಂದಾಗಬಾರದು. ಕಾಂಗ್ರೆಸ್ ಪಕ್ಷ ಗುಬ್ಬಿಯಲ್ಲಿ ಉತ್ತಮ ಸಂಘಟನೆಯತ್ತ ಸಾಗುತ್ತಿದ್ದು ಪಕ್ಷ ಕಟ್ಟಿದವರಿಗೆ ಗೌರವ ಸಿಗಬೇಕು ಎಂದರೆ ಪಕ್ಷದಲ್ಲಿ ನಿರಂತರವಾಗಿ ಕೆಲಸ ಮಾಡುವವರಿಗೆ ಟಿಕೆಟ್ ನೀಡಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಜಿ ಎಸ್ ಪ್ರಸನ್ನಕುಮಾರ್ ಮಾತನಾಡಿ, ಕೋಗಿಲೆ ಕಟ್ಟುವಂತ ಗೂಡಿಗೆ ಕಾಗೆ ಬಂದು ಮೊಟ್ಟೆ ಇಡುವಂತೆ ಆಗಿದೆ ಗುಬ್ಬಿಯ ಕಾಂಗ್ರೆಸ್ ಪರಿಸ್ಥಿತಿ. ಅದು ಆಗುವುದಕ್ಕೆ ತಾವು ಯಾರು ಬಿಡಬಾರದು. 20 ವರ್ಷಗಳಿಂದ ಆಡಳಿತ ಮಾಡಿರುವ ಶಾಸಕ ಶ್ರೀನಿವಾಸ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ತಾಲೂಕಿನಲ್ಲಿ ಸಂಪೂರ್ಣವಾಗಿ ಆಡಳಿತ ಕುಸಿದಿದೆ. ಉದಾಹರಣೆಗೆ ಚೇಳೂರು ಗ್ರಾಮ ಪಂಚಾಯಿತಿಯಲ್ಲಿ ರಸ್ತೆ ಕಾಮಗಾರಿಗಳೇ ನಡೆಯದೆ ಅವರಿಗೆ ಬೇಕಾದವರಿಗೆ ಬಿಲ್ ಪಾವತಿಯಾಗಿದೆ ಅದನ್ನು ತಿದ್ದುವ ಕೆಲಸಕ್ಕೆ ಅಧಿಕಾರಿಗಳು ರಾತ್ರಿ ಹೊತ್ತಿನಲ್ಲಿ ಮುಂದಾಗುತ್ತಾರೆ ಎಂದರೆ ತಾಲೂಕಿನಲ್ಲಿ ಎಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂತಹವರಿಗೆ ಮತ್ತೊಮ್ಮೆ ಮನ್ನಣೆ ನೀಡಿದರೆ ತಾಲ್ಲೂಕು ಮತ್ತಷ್ಟು ಅನಾಭಿವೃದ್ಧಿಯಾಗುತ್ತದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ. ಇನ್ನೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ವಸ್ತುಗಳು ಸಹ ದುಬಾರಿಯಾಗಿದೆ. ಹಾಗಾಗಿ ಬಡವರಿಗೆ, ಹಿಂದುಳಿದವರ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಶಂಕರಾನಂದ ಮಾತನಾಡಿ, ಈಗಿನ ಬಿಜೆಪಿ ಸರ್ಕಾರ ಎರೆಹುಳುವನ್ನು ಎಸೆದು ತಿಮಿಂಗಿಲ ಹಿಡಿಯುವ ಕೆಲಸಕ್ಕೆ ಮುಂದಾಗಿದ್ದು, ಈ ಸರ್ಕಾರದಿಂದ ಯಾವುದೇ ಬಡವರು, ಆರ್ಥಿಕವಾಗಿ ಹಿಂದುಳಿದವರು ಜೀವನ ಮಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕೆಲಸ ಮಾಡಿದಾಗ ಖಂಡಿತವಾಗಲೂ ಗೆಲುವಿನ ದಡ ಸೇರುತ್ತೇವೆ. ಇದಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ನಿಟ್ಟೂರು ಹೋಬಳಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಭಾಗ್ಯಮ್ಮ ಮಾತನಾಡಿ, ಕಾಂಗ್ರೆಸ್ ಪಕ್ಷ ಹಲವು ದಶಕಗಳಿಂದಲೂ ಮಹಿಳೆಯರ ಪರವಾಗಿ ದಲಿತರ ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಹಾಗಾಗಿ ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಜೊತೆಯಲ್ಲಿದ್ದು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ಜಯಣ್ಣ, ಮುಖಂಡರಾದ ಶ್ರೀನಿವಾಸ್, ಚಿಕ್ಕರಂಗೇಗೌಡ, ಶಶಿಕಿರಣ್, ಶಿವಾನಂದ, ಪಣೀಂದ್ರ ಕುಮಾರ್, ಚಂದ್ರಶೇಖರ್, ರಾಧಾ ಇನ್ನಿತರರು ಹಾಜರಿದ್ದರು.
Comments are closed.