ತುಮಕೂರು ನಗರದಲ್ಲಿ ಹನುಮ ನಾಮ ಸ್ಮರಣೆ

ಆಂಜನೇಯ ದೇಗುಲಗಳಲ್ಲಿ ವಿಶೇಷ ಅಲಂಕಾರ, ಪೂಜೆ- ಭಕ್ತರಿಗೆ ಪ್ರಸಾದ ವಿತರಣೆ

146

Get real time updates directly on you device, subscribe now.


ತುಮಕೂರು: ಕಲ್ಪತರು ನಾಡಿನ ವಿವಿಧೆಡೆ ಮುಂಜಾನೆಯಿಂದಲೇ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಗರದ ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಗೇಟ್ನಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಾಲಯ, ಬಿ.ಹೆಚ್. ರಸ್ತೆಯ ಆರ್ಟಿಓ ಕಚೇರಿ ಮುಂಭಾಗದಲ್ಲಿರುವ ವರಪ್ರಸಾದ ವೀರಾಂಜನೇಯ ಸ್ವಾಮಿ ದೇಗುಲ, ಬಟವಾಡಿ ಸಮೀಪದ ಭಕ್ತಾಂಜನೇಯ ಸ್ವಾಮಿ ದೇವಾಲಯ, ವಿದ್ಯಾನಗರದ ಪುಟ್ಟಾಂಜನೇಯ ಸ್ವಾಮಿ ದೇವಸ್ಥಾನ, ಹನುಂತಪುರದ ಬಯಲಾಂಜನೇಯ ಸ್ವಾಮಿ ದೇವಾಲಯ, ಬನಶಂಕರಿಯ ಮಾರುತಿ ದೇವಾಲಯ, ಮೆಳೇಕೋಟೆಯ ಅಭಯ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯದೊಂದಿಗೆ ಹನುಮ ನಾಮ ಸ್ಮರಣೆ, ಭಜನೆ, ವೇದ ಘೋಷ ಮೊಳಗಿದವು.
ಹನುಮ ಜಯಂತಿ ಪ್ರಯುಕ್ತ ಕೋಟೆ ಶ್ರೀಆಂಜನೇಯ ಸ್ವಾಮಿ ವೃತ್ತ, ಟೌನ್ ಹಾಲ್ ವೃತ್ತ ಸೇರಿದಂತೆ ಜಿಲ್ಲೆಯಾದ್ಯಂತ ಪಟ್ಟಣಗಳು, ಹೋಬಳಿ ಕೇಂದ್ರಗಳು ಕೇಸರಿ ಧ್ವಜಗಳಿಂದ ಕಂಗೊಳಿಸುತ್ತಿದ್ದು, ಕೋಟೆ ಶ್ರೀ ಆಂಜನೇಯ ಸ್ವಾಮಿ ಯುವಕರ ಬಳಗ ಹನುಮ ಜಯಂತಿ ಪ್ರಯುಕ್ತ ದೇವಾಲಯಕ್ಕೆ ಬರುವ ಭಕ್ತರಿಗೆ ಹೆಸರು ಬೇಳೆ, ಪಾನಕ, ಮಜ್ಜಿಗೆಯನ್ನು ಪ್ರಸಾದವಾಗಿ ವಿನಿಯೋಗಿಸಿತು.

ಹನುಮ ಜಯಂತಿ ಅಂಗವಾಗಿ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಹೋಮ ಹವನ, ಭಜನಾ ಕಾರ್ಯಕ್ರಮ ನಡೆದಿದ್ದು, ಆಂಜನೇಯ ಸ್ವಾಮಿ ವಿಗ್ರಹ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು,
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಪುರಾತನ ದೇವಸ್ಥಾನವಾಗಿದ್ದು, ಈ ದೇವಸ್ಥಾನದ ವಿಶೇಷತೆ ಎಂದರೆ ಗರ್ಭಗುಡಿಯ ಒಳಗೆ ಹನುಮನ ಎರಡು ಮೂರ್ತಿಗಳಿವೆ. ಈ ಪೈಕಿ ಒಂದು ಮೂರ್ತಿ ಪುರಾತನ ಕಾಲದ್ದಾಗಿದ್ದು, ಇನ್ನೊಂದು ಆ ಬಳಿಕ ಸ್ಥಾಪನೆ ಮಾಡಿದ ಮೂರ್ತಿಯಾಗಿದೆ. ಬೆಳಗ್ಗೆಯಿಂದಲೇ ಭಕ್ತಾದಿಗಳು ಆಂಜನೇಯ ಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪಂಚಾಮೃತ ಅಭಿಷೇಕ, ಮಂಗಳಾರತಿ, ಪ್ರಾಕಾರೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನಡೆದವು. ಮಧ್ಯಾಹ್ನ ಕೋಟೆ ಆಂಜನೇಯಸ್ವಾಮಿಯ ರಥೋತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

ಮೆಳೇಕೋಟೆಯ ಅಭಯಾಂಜನೇಯ ಸ್ವಾಮಿಗೆ ಸುಪ್ರಭಾತ ಸೇವೆಯೊಂದಿಗೆ ಆರಂಭವಾದ ಧಾರ್ಮಿಕ ಕೈಂಕರ್ಯದಲ್ಲಿ ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಅಲಂಕಾರದೊಂದಿಗೆ ಮಹಾ ಮಂಗಳಾರತಿ ನಡೆಯಿತು.
ಬೆಳಗ್ಗೆ ಪಂಚಾಮೃತ ಅಭಿಷೇಕ, ಮಹಾ ಗಣಪತಿ ಪೂಜೆ, ಕಳಶಾರಾಧನೆ, ನವಗ್ರಹ ಹೋಮ, ಪಂಚಮುಖಿ ಪಂಚಮುಖಿ ಆಂಜನೇಯ ಸ್ವಾಮಿ ಹೋಮ, ರಜತಾಲಂಕಾರ ಹಮ್ಮಿಕೊಳ್ಳಲಾಗಿತ್ತು.
ನಗರದ ವಿವಿಧೆಡೆ ಹನುಮನ ದೇವಾಲಯಗಳಲ್ಲಿ ಬೆಳಗ್ಗೆಯಿಂದ ಪೂಜಾ ವಿಧಿ ವಿಧಾನಗಳು ನೆರವೇರಿದ್ದು, ಭಕ್ತಾದಿಗಳಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!