ಪೋಷಕರು ಮಕ್ಕಳಿಗೆ ತಪ್ಪದೆ ಜೆಇ ಲಸಿಕೆ ಹಾಕಿಸಿ: ಜಿಎಸ್ ಬಿ

189

Get real time updates directly on you device, subscribe now.


ತುಮಕೂರು: ಜಪಾನಿಸ್ ಎನ್ಸೆಫಲೈಟಿಸ್ ಲಸಿಕೆಗಳಿಂದ ಮೆದುಳು ಜ್ವರದ ವಿರುದ್ಧ ಹೋರಾಡಲು ಅಂದರೆ ಡಿಸೆಂಬರ್ 5 ರಿಂದ 24ರ ವರೆಗೆ, ಒಂದರಿಂದ ಹದಿನೈದು ವರ್ಷದ ಮಕ್ಕಳಿಗೆ ಜೆಇ ಲಸಿಕೆ ಚುಚ್ಚುಮದ್ದು ನೀಡಲಿದ್ದು, ಪೋಷಕರು ತಪ್ಪದೇ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಸಂಸದ ಜಿ.ಎಸ್.ಬಸವರಾಜು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಇ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ಪೋಷಕರಿಗೆ ಈ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ಅಗತ್ಯತೆ ಇದೆ. ಭಯ ಬೀಳದೆ ಮಕ್ಕಳಿಗೆ ಈ ಲಸಿಕೆ ಹಾಕಿಸಬೇಕು. ಈ ಖಾಯಿಲೆ ಕಾಣಿಸಿಕೊಂಡ ಮಕ್ಕಳಲ್ಲಿ ಮರಣ ಪ್ರಮಾಣ ಶೇ.20 ರಿಂದ 30 ರಷ್ಟಿದ್ದು, ಗುಣ ಹೊಂದಿದವರಲ್ಲಿ ಶೇ.30 ರಿಂದ 50 ರಷ್ಟು ಪ್ರಕರಣಗಳಲ್ಲಿ ನರ ದೌರ್ಬಲ್ಯ, ಬುದ್ಧಿಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟಾಗುತ್ತದೆ, ಆದುದರಿಂದ 1 ರಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಈ ಲಸಿಕೆ ಹಾಕಿಸುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯ ಸುಮಾರು ಐದೂವರೆ ಲಕ್ಷ ಮಕ್ಕಳಿಗೆ ಈ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಖಾಸಗಿ, ಅನುದಾನಿತ ಸೇರಿದಂತೆ ಎಲ್ಲಾ ಶಾಲೆಯ ಮಕ್ಕಳು ಹಾಗೂ ತದನಂತರ ಅಂಗನವಾಡಿ ಮಕ್ಕಳಿಗೂ ಸಹ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇನ್ನು ಮೂರು ವಾರದೊಳಗಾಗಿ ಈ ಲಸಿಕಾ ಅಭಿಯಾನ ಸಂಪೂರ್ಣ ಯಶಸ್ವಿಗೊಳಿಸಬೇಕಿದ್ದು, ಇದೊಂದು ದೊಡ್ಡ ಮಟ್ಟದ ಲಸಿಕಾ ಅಭಿಯಾನವಾಗಿದ್ದು, ಸಾರ್ವಜನಿಕರು, ಪೋಷಕರು ಸಹಕರಿಸುವಂತೆ ಕೋರಿದರು.
2ನೇ ಹಂತದಲ್ಲಿ ತುಮಕೂರು ಜಿಲ್ಲೆಯಲ್ಲಿ ಈ ಲಸಿಕಾ ಅಭಿಯಾನ ಹಮ್ಮಿಕೊಳ್ಳಲು ಆರೋಗ್ಯ ಇಲಾಖೆಯು ನಿರ್ದೇಶಿಸಿದ್ದು, ಈ ಅಭಿಯಾನದ ದಿನಾಂಕಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಹೆಚ್ಓ ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ, ಆರ್ಸಿಹೆಚ್ ಅಧಿಕಾರಿ ಡಾ.ಕೇಶವರಾಜ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರಜನಿ, ರಾಜ್ಯ ನೋಡಲ್ ಅಧಿಕಾರಿ ಡಾ.ಪ್ರಶಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!