ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ಧತೆಗೆ ಡೀಸಿ ಸೂಚನೆ

162

Get real time updates directly on you device, subscribe now.


ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 15 ಹಾಗೂ 16ರಂದು ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಜಾತ್ರೆಯಾದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸುವ ದೃಷ್ಟಿಯಿಂದ ಸಮ್ಮೇಳನದಲ್ಲಿ ಕನ್ನಡ ನಾಡು- ನುಡಿ ಕುರಿತು ಉತ್ತಮ ಕವಿಗೋಷ್ಠಿ, ಸಂವಾದ, ವಿಶೇಷ ಉಪನ್ಯಾಸ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಆಯಾಮಗಳು, ಸಾಹಿತ್ಯ ಪರಂಪರೆ, ಸಾಂಸ್ಕೃತಿಕ ಪರಂಪರೆ, ಜಾನಪದ ಕಲಾ ಪ್ರದರ್ಶನ, ಸಂಗೀತ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಜರುಗುವ ಗಾಜಿನಮನೆ ಸೇರಿದಂತೆ ಸುತ್ತಮುತ್ತ ಸ್ವಚ್ಛಗೊಳಿಸಿ ಸಮ್ಮೇಳನಕ್ಕೆ ಆಗಮಿಸುವವರಿಗೆ ಮೂಲಭೂತ ಸೌಕರ್ಯ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಪಾಲಿಕೆಗೆ ಸೂಚನೆ ನೀಡಿದರು. ವೇದಿಕೆ ಹಾಗೂ ಸಭಾಂಗಣ ಸಜ್ಜುಗೊಳಿಸುವ ಜವಾಬ್ದಾರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತು ಕರಪತ್ರ, ಪ್ರಶಸ್ತಿ ಪತ್ರ, ಆಹ್ವಾನ ಪತ್ರಿಕೆ, ನೆನಪಿನ ಕಾಣಿಕೆಗಳ ಜವಾಬ್ದಾರಿಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಹಾಗೂ ಕಲಾ ತಂಡಗಳಿಂದ ಕಲಾ ಪ್ರದರ್ಶನದ ವ್ಯವಸ್ಥೆಯ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಿದರು.

ಸಮ್ಮೇಳನದ ಪ್ರಯುಕ್ತ ಸ್ತ್ರೀಶಕ್ತಿ ಸಂಘ, ಸ್ವ- ಸಹಾಯ ಸಂಘಗಳಿಂದ ಕರಕುಶಲ ಪ್ರದರ್ಶನ ಮತ್ತು ಮಾರಾಟ ಹಾಗೂ ಆಹಾರ ಮೇಳ ಮಳಿಗೆ ತೆರೆಯಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಸಮ್ಮೇಳನ ದಿನಗಳಂದು ದಾಸೋಹ ವ್ಯವಸ್ಥೆಯ ಜವಾಬ್ದಾರಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ವಹಿಸಿಕೊಂಡು ಮಾತನಾಡಿ, ಸಮ್ಮೇಳನ ದಿನಗಳಂದು ನಗರವನ್ನು ಅಲಂಕರಿಸಬೇಕು. ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿಯ ಮೌಲ್ಯಗಳ ಬಗ್ಗೆ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡುವ ಸಮ್ಮೇಳನವಾಗಬೇಕೆಂದು ಆಶಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಡಿಸೆಂಬರ್ 15ರ ಬೆಳಗ್ಗೆ 10.30 ಗಂಟೆಗೆ ಉದ್ಘಾಟನೆ ಸಮಾರಂಭ ಜರುಗಲಿದ್ದು, ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಿರಿಯ ಸಾಹಿತಿ ಎಂ.ವಿ. ನಾಗರಾಜರಾವ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಬೆಳಗ್ಗೆ 8.30 ಗಂಟೆಗೆ ನಡೆಯಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಕಲಾವಿದರು ಬೆಳ್ಳಿರಥ, ಆನೆ, ಕೋಲಾಟ, ನಂದೀಧ್ವಜ, ವೀರಗಾಸೆ, ಡೊಳ್ಳುಕುಣಿತ, ಸೋಮನಕುಣಿತ, ನಾಸಿಕ್ ಡೋಲು, ನಾದಸ್ವರ, ಗಾರುಡಿಗೊಂಬೆ ಸೇರಿದಂತೆ ಸುಮಾರು 35 ಕಲಾ ಪ್ರಕಾರಗಳ ಪ್ರದರ್ಶನ ನೀಡಲಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವ ನೌಕರರಿಗೆ ಅನುವಾಗುವಂತೆ ಓಓಡಿ ಸೌಲಭ್ಯ ನೀಡಲು ಆದೇಶ ಹೊರಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರಲ್ಲದೆ ನೌಕರರು ಸಮ್ಮೇಳನದಲ್ಲಿ ಭಾಗವಹಿಸಲು 200 ರೂ. ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ. ರವೀಶ್ ಹಾಗೂ ಕಲಾವಿದ ಮನುಚಕ್ರವರ್ತಿ ಅವರು ವಿನ್ಯಾಸಗೊಳಿಸರುವ ಸಮ್ಮೇಳನದ ಲೋಗೋ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಟೂಡಾ ಅಧ್ಯಕ್ಷೆ ಹೆಚ್.ಜಿ. ಚಂದ್ರಶೇಖರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪ ವಿಭಾಗಾಧಿಕಾರಿ ವಿ. ಅಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ರಾಣಿ ಸತೀಶ್, ಮಲ್ಲಿಕಾರ್ಜುನ ಕೆಂಕೆರೆ, ಟೂಡಾ ಆಯುಕ್ತ ಗೋಪಾಲ್ ಜಾದವ್, ಪಾಲಿಕೆ ಉಪ ಆಯುಕ್ತ ಗಿರೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!