ಕಾಂಗ್ರೆಸ್‌ನಲ್ಲೇ ರಾಜಕೀಯ ಕದನ ಪರಂ, ಟಿಬಿಜೆ ಮೇಲೆ ಮುಂದುವರೆದ ಮುನಿಸು ಶಿರಾ ಕ್ಷೇತ್ರದ ಮೇಲೆ ಕೆ.ಎನ್.ರಾಜಣ್ಣ ಕಣ್ಣಾಕಿದ್ಯಾಕೆ?

228

Get real time updates directly on you device, subscribe now.

ತುಮಕೂರು: ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತೆ ಘರ್ಜಿಸಿದ್ದಾರೆ, ಕೆಎನ್‌ಆರ್ ಘರ್ಜನೆ ಕಾಂಗ್ರೆಸ್ ಪಕ್ಷದಲ್ಲಿ ಹೊಸದೇನಲ್ಲ ಎನ್ನುತ್ತಾರೆ ಕೆಲವು ಕಾರ್ಯಕರ್ತರು, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ತೊಡೆತಟ್ಟಿದ್ದರು, ಅವರ ಸೋಲಿಗೆ ಪರೋಕ್ಷವಾಗಿ ಕಾರಣರಾಗಿದ್ದರು ಎಂದೇ ಹೇಳಲಾಗುತ್ತದೆ. ಇಷ್ಟೇ ಅಲ್ಲ, ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಗೆ ಡಿಸಿಎಂ ಪಟ್ಟ ಸಿಕ್ಕಿದ ಮೇಲೆ ಜೀರೋ ಟ್ರಾಫಿಕ್ ಎಂದು ಕರೆದು ಡಾ.ಜಿ.ಪರಮೇಶ್ವರ್ ಅವರನ್ನು ಛೇಡಿಸಿ ಕಾಲೆಳೆದಿದ್ದರು.
ಒಂದೇ ಪಕ್ಷದಲ್ಲಿದ್ದು ಹೀಗೆ ಕಾಲೆಳೆಯೋದು, ಅನಿಸಿದ್ದನ್ನು ನೇರವಾಗಿ ಹೇಳೋದು ಕೆಎನ್‌ಆರ್ ಗುಣ ಮತ್ತು ಛಲ, ಆದರೆ ಎಲ್ಲವನ್ನು ಉದ್ದೇಶಪೂರ್ವಕವಾಗಿ ಮಾತನಾಡಲ್ಲ, ಕಾಕತಾಳೀಯ ಎಂಬಂತೆ ಅವರ ಹೇಳಿಕೆಗಳನ್ನು ನಿಷ್ಠೂರವಾಗಿ ಖಂಡಿಸುವಂತಹವರು ಜಿಲ್ಲೆಯಲ್ಲಿ ಯಾರು ಇಲ್ಲ.
ಈಚೆಗಷ್ಟೇ ಕೊರಟಗೆರೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ತಾನು ಇದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿ ಡಾ.ಜಿ.ಪರಮೇಶ್ವರ್ ಮೇಲಿನ ಆಕ್ರೋಶ ಹೊರ ಹಾಕಿದ್ದರು. ಈಗ ಮತ್ತೆ ಅಂತಹದ್ದೇ ಹೇಳಿಕೆ ನೀಡಿದ್ದಾರೆ.
ಈಚೆಗಷ್ಟೇ ಶಿರಾ ಶಾಸಕ ಬಿ.ಸತ್ಯನಾರಾಯಣ್ ನಿಧನ ಹೊಂದಿದರು, ಶಿರಾ ಕ್ಷೇತ್ರದಲ್ಲಿ ಇನ್ನೂ ರಾಜಕೀಯ ಚಟುವಟಿಕೆ ಗರಿಗೆದರಿಲ್ಲ, ಕೆಲವೇ ತಿಂಗಳಲ್ಲಿ ಉಪ ಚುನಾವಣೆ ಎದುರಾಗಲಿದ್ದು, ವಾಸ್ತವವಾಗಿ ಚುನಾವಣೆಗೆ ಯಾವ ಪಕ್ಷದವರೂ ಸಿದ್ಧತೆ ನಡೆಸಿಲ್ಲ, ಅಸಲಿಗೆ ಜೆಡಿಎಸ್ ಟಿಕೆಟ್ ಯಾರಿಗೆ ಎಂಬುದು ಇನ್ನೂ ಕುತೂಹಲದಿಂದ ಕೂಡಿದೆ.
ಇದರ ಮಧ್ಯೆ ಸಮಾಜ ಸೇವಕ ಕಲ್ಕೆರೆ ರವಿಕುಮಾರ್ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಬಿಜೆಪಿ ಟಿಕೆಟ್ ಯಾರಿಗೆ ಎಂಬ ಗೊಂದಲ ಇದ್ದೇ ಇದೆ. ಆದರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಶಿರಾದಿಂದ ಸ್ಪರ್ಧಿಸುವ ಆಲೋಚನೆ ಇದೆ ಎಂದು ಹೇಳುವ ಮೂಲಕ ಶಿರಾ ಕ್ಷೇತ್ರದ ಮೇಲೆ ಕಣ್ಣು ಹಾಕಿ ಬಿಟ್ಟರೇ ಎಂಬ ಅನುಮಾನ ಶಿರಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದೆ.
ಈಗ ಕೆಎನ್‌ಆರ್ ಒರಟುತನದ ಹೇಳಿಕೆ ಶಿರಾ ಕಾಂಗ್ರೆಸ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೊನ್ನೆ ಮೊನ್ನೆಯಷ್ಟೇ ಕೆಎನ್‌ಆರ್ ಕೊರಟಗೆರೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿ ಜಾಸ್ತಿ ದಿನ ಕಳೆದಿಲ್ಲ, ಆಗಲೇ ಶಿರಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಾಂಬ್ ಸ್ಪೋಟಿಸಿದ್ದಾರೆ.
ಹಾಗಾದರೆ ಕೆಎನ್‌ಆರ್ ಸ್ಪರ್ಧೆಗೆ ಯಾವ ಪಕ್ಷ ಮಣೆ ಹಾಕಲಿದೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರ ಬಯಸಿದ್ದಾರಾ? ಪಕ್ಷೇತರರಾಗಿ ಸ್ಪರ್ಧಿಸುವ ಆಲೋಚನೆ ಇದೆಯಾ? ಹೀಗೆ ಹಲವಾರು ಪ್ರಶ್ನೆಗಳು ಎದುರಾಗಿವೆ.
ಕಾಂಗ್ರೆಸ್ ತೊರೆದರೆ ಅವರಿಗಾಗುವ ನಷ್ಟವೇನು ಎಂದು ಲೆಕ್ಕಚಾರ ಹಾಕಿದ್ದಾರಾ? ಇಡೀ ಒಂದು ಸಮುದಾಯವನ್ನು ಎದುರು ಹಾಕಿಕೊಂಡು ರಾಜಕೀಯದಲ್ಲಿ ಮುನ್ನುಗ್ಗುವುದು ಸಾಧ್ಯವಿದೆಯಾ? ಈ ಲೆಕ್ಕಾಚಾರ ಮುಂದೆ ತಮ್ಮ ಪುತ್ರನ ರಾಜಕೀಯ ಭವಿಷ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆಯಾ? ಹೀಗೆ ಹಲವು ಪ್ರಶ್ನೆಗಳು ಎದುರಿಗೆ ನಿಲ್ಲಲಿವೆ.
ಕೆಎನ್‌ಆರ್ ಸೋಲು ಹೀಗೆಲ್ಲಾ ಹೇಳಿಕೆ ನೀಡುವಂತೆ ಮಾಡಿದೆಯಾ? ಅಸಲಿಗೆ ಅವರ ಸೋಲಿಗೆ ಯಾರು ಕಾರಣ ಎಂಬ ಪ್ರಶ್ನೆ ಈಗ ಎದುರಾಗಿದೆ. ಟಿ.ಬಿ.ಜಯಚಂದ್ರ, ಡಾ.ಜಿ.ಪರಮೇಶ್ವರ್ ಮೇಲೆ ಇಷ್ಟು ಕತ್ತಿ ಮಸೆಯಲು ಅಸಲಿ ಕಾರಣವೇನು ಎಂಬ ಪ್ರಶ್ನೆಯೂ ಮೂಡಿದೆ.
ಇತ್ತ ಹೇಳಿದಂತೆ ಕೆಎನ್‌ಆರ್ ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜಯಚಂದ್ರರಿಗೆ ಸವಾಲ್ ಹಾಕುತ್ತಾರಾ? ಗೊತ್ತಿಲ್ಲ, ಆದರೆ ಕೆಎನ್‌ಆರ್ ಹೇಳಿಕೆ ಮಾತ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ, ಒಬ್ಬ ಕಾಂಗ್ರೆಸ್ ನಾಯಕ ಮತ್ತೊಬ್ಬ ಕಾಂಗ್ರೆಸ್ ನಾಯಕನ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದು ಸವಾಲ್ ಹಾಕುವುದು ದೊಡ್ಡ ಗತ್ತೇ ಸರಿ, ಆದರೆ ರಾಜಣ್ಣರ ಸ್ಪರ್ಧೆ ಖಚಿತವಲ್ಲ, ಅದು ಅಂತೆ ಕಂತೆಯ ಮಾತಾಗಿದೆ.
ರಾಜಣ್ಣ ಶಾಸಕರಾಗಿದ್ದಾಗ ಮಧುಗಿರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿ ಸೈ ಎನಿಸಿಕೊಂಡಿದ್ದರು, ಜಯಚಂದ್ರ ಶಿರಾ ಕ್ಷೇತ್ರದಲ್ಲಿ ಹಿಂದೆ ಶಾಸಕರಾಗಿ, ಸಚಿವರಾಗಿ ಅಭಿವೃದ್ಧಿ ಕಾರ್ಯ ಮಾಡಿ ಜನ ಮನ್ನಣೆ ಗಳಿಸಿದ್ದರು, ಆದರೂ ಇಬ್ಬರು ನಾಯಕರು ಕಳೆದ ಚುನಾವಣೆಯಲ್ಲಿ ಸೋಲುಂಡು ಮನೆ ಸೇರುವಂತಾಯಿತು, ಇಲ್ಲಿ ಇಬ್ಬರ ಸೋಲಿನ ಹಿಂದೆ ಯಾರಿದ್ದರೂ ಎಂಬುದು ಈಗ ಬೇಡವಾದ ವಿಚಾರ, ಶಿರಾದಲ್ಲಿ ಸ್ಫರ್ಧಿಸುವ ಮಾತನಾಡುತ್ತಿದ್ದಾರೆ, ಇಲ್ಲಿ ರಾಜಣ್ಣ ಸ್ಪರ್ಧಿಸುವುದೇ ಖಚಿತವಾದರೆ ಗೆಲುವು ಅಷ್ಟು ಸುಲಭಾನಾ? ಎಂಬ ಪ್ರಶ್ನೆಯೂ ಎದ್ದೇಳುತ್ತೆ, ರಾಜಕೀಯ ಲೆಕ್ಕಾಚಾರಗಳೇ ಬೇರೆ ರೀತಿ ಇರಲಿದೆ, ಸ್ಪರ್ಧೆ ಮಾಡ್ತೀನಿ ಎಂದ ತಕ್ಷಣ ಗೆದ್ದೇ ಬಿಟ್ಟೆ ಎಂದು ಅರ್ಥವಲ್ಲ, ಸ್ಪರ್ಧೆ ಬೇರೆ, ಗೆಲುವೇ ಬೇರೆ, ಅದು ಕೆ.ಎನ್.ರಾಜಣ್ಣ ಅವರಿಗೂ ಗೊತ್ತಿದೆ. ಒಟ್ಟಾರೆ ರಾಜಣ್ಣ ಅವರು ಜಯಚಂದ್ರರತ್ತ ಸ್ಪರ್ಧೆಯ ಟ್ರಿಗರ್ ಒತ್ತಿದ್ದಾರೆ, ಆದರೆ ಅದು ಇನ್ನು ಸಿಡಿದಿಲ್ಲ. ಆದರೆ ಕೆ.ಎನ್‌.ರಾಜಣ್ಣ ಅವರು ಮುನಿಸು ತೊರೆಯಬೇಕಿದೆ. ಟಿ.ಬಿ.ಜಯಚಂದ್ರ, ಡಾ.ಜಿ.ಪರಮೇಶ್ವರ್ ವಿರುದ್ಧ ಸಮರ ಸಾರುವುದುನಿಲ್ಲಿಸಿ, ಈ ನಾಯಕರಲ್ಲಿ ಒಗ್ಗಟ್ಟು ಮೂಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!