ಶ್ರೀನಿವಾಸ್ ವಿಧಾನಸೌಧದಲ್ಲಿ ಪ್ರಶ್ನೆ ಕೇಳಲೇ ಇಲ್ಲ

177

Get real time updates directly on you device, subscribe now.


ಗುಬ್ಬಿ: 20 ವರ್ಷ ಆಡಳಿತ ಮಾಡಿರುವ ಶಾಸಕರು ವಿಧಾನಸೌಧದಲ್ಲಿ ಎದ್ದು ನಿಂತು ಗುಬ್ಬಿ ತಾಲೂಕಿನ ಸಮಸ್ಯೆಗಳ ಬಗ್ಗೆ ಕೇಳಿದ್ದು ಇಲ್ಲವೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್. ಪ್ರಸನ್ನಕುಮಾರ್ ಲೇವಡಿ ಮಾಡಿದರು.
ತಾಲೂಕಿನ ಕಡಬ ಗ್ರಾಮದಲ್ಲಿ ಕಾಂಗ್ರೆಸ್ ಸೇವಾದಳ ಕಾರ್ಯಕರ್ತರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಸಕರು ನಿಮ್ಮ ಸೇವಕರೇ ಹೊರತು ಮಾಲೀಕರಲ್ಲ. ಸರಕಾರ ಅವರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಿದ್ದು, ಪ್ರತಿದಿನ ಹಳ್ಳಿಗಳಿಗೆ ಹೋಗಿ ಅಲ್ಲಿನ ಸಮಸ್ಯೆ ಆಲಿಸಿ ಸರ್ಕಾರದ ಮುಂದಿಟ್ಟು, ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿದಾಗ ಮಾತ್ರ ಆ ಸ್ಥಾನಕ್ಕೆ ಗೌರವ ಸಿಗುತ್ತದೆ. ಮತದಾರರು ಸಹ ಪ್ರಶ್ನೆ ಮಾಡುವಂತಹ ಕೆಲಸಕ್ಕೆ ಮುಂದಾಗಬೇಕಾಗಿದೆ. ಕೇವಲ ಚುನಾವಣೆ ಬಂದಾಗ ಹಣ ಹಂಚಿ ಗೆಲ್ಲುವುದು ಸಾಧನೆ ಅಲ್ಲ ಎಂಬುದನ್ನು ತಾವು ಈ ಬಾರಿ ತಿಳಿಸಿಕೊಡಬೇಕು. ಗುಬ್ಬಿ ತಾಲೂಕಿನ ಅಭಿವೃದ್ಧಿಗೆ ತಾವು ಏನು ಮಾಡಿದ್ದೀರಿ ಎಂಬುದನ್ನು ಜನರ ಮುಂದೆ ಶ್ವೇತ ಪತ್ರ ಹೊರಡಿಸಿ ಆಗ ತಿಳಿಯುತ್ತದೆ ಎಂದು ಶಾಸಕರಿಗೆ ಸವಾಲ್ ಹಾಕಿದರು.

ರಾಜ್ಯದಲ್ಲಿ ಗುಬ್ಬಿ ತಾಲೂಕು ಶ್ರೀಮಂತ ತಾಲೂಕು ಎಂದು ಎನಿಸಿದೆ, ಆದರೆ ಅದು ಶಾಸಕರ ಅಭಿವೃದ್ಧಿಯಿಂದ ಅಲ್ಲ. ತಾಲೂಕಿನ ರೈತರು ಕಷ್ಟ ಬಿದ್ದು ದುಡಿದು ವರಮಾನದಲ್ಲಿ ಶ್ರೀಮಂತಿಕೆ ಹೊಂದಿದೆ. ಈಗಿನ ಬಿಜೆಪಿ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಚುನಾವಣೆ ಮತದಾರರ ಪಟ್ಟಿಯಿಂದಲೇ ಅವರಿಗೆ ಮತ ಹಾಕದ ಹೆಸರುಗಳನ್ನು ಕಿತ್ತು ಹಾಕಲು ಮುಂದಾಗಿದ್ದಾರೆ. ಗುಬ್ಬಿ ತಾಲ್ಲೂಕಿನಲ್ಲೇ ಮೂರು ಸಾವಿರ ಮತದಾರರ ಹೆಸರು ಕಿತ್ತು ಹಾಕಿದ್ದಾರೆ ಎಂದು ದೂರಿದರು.

ಮುಖಂಡ ಹೊನ್ನಗಿರಿ ಗೌಡ ಮಾತನಾಡಿ, ಶಾಸಕರ ಮನೆ ಬಾಗಿಲಿಗೆ ಮತದಾರರು ಹೋಗುವುದು ತಪ್ಪಿ ಮತದಾರರ ಮನೆ ಬಾಗಿಲಿಗೆ ಶಾಸಕರು ಆಗಮಿಸಿ ಕೆಲಸ ಮಾಡುವಂತಹ ಶಾಸಕರನ್ನು ತಾವೆಲ್ಲರೂ ಆಯ್ಕೆ ಮಾಡಿದಾಗ ತಾಲೂಕಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ತಾಲೂಕಿನ ದೊಡ್ಡ ಕೆರೆಯಾದ ಕಡಬ ಕೆರೆಗೆ ನಿಮ್ಮಿಂದ ನೀರು ಬಿಡಿಸಲು ಸಾಧ್ಯವಾಗಿಲ್ಲ. ನೀರು ಬಿಡಿಸಿದ್ದು ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿಯವರು, ಆದರೆ ಗಂಗಾ ಪೂಜೆ ಮಾಡಿದ್ದು ಮಾತ್ರ ಗುಬ್ಬಿ ಶಾಸಕರು ಎಂದು ಗೇಲಿ ಮಾಡಿದ ಅವರು ತಾಲೂಕಿನಲ್ಲಿ ಜನರು ಬದಲಾವಣೆ ಕೇಳುತ್ತಿದ್ದಾರೆ. ಹೊಸಮುಖ ಬರಬೇಕು ಎಂದು ಜನರ ಇಚ್ಛೆಯಾಗಿದ್ದು ಈ ಬಾರಿ ಬದಲಾವಣೆಯಾಗುವುದು ಸತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಂಕರಾನಂದ, ಮುಖಂಡರಾದ ಸಲೀಂ, ಸೌಭಾಗ್ಯಮ್ಮ, ಶಿವಾನಂದ, ಸೇವಾದಳದ ಶಿವಕುಮಾರ್, ಹೇಮಂತ್ ಕುಮಾರ್, ವಸಂತಮ್ಮ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!