ಗುಬ್ಬಿ: ಕೊಚ್ಚೆಗೆ ಕಲ್ಲೆಸೆಯುವ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಹೆಸರು ಹೇಳದೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಟಾಂಗ್ ನೀಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಲ್ಲಿ ಏನು ಮಾಡಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಿ, ನನ್ನನ್ನು ಒಮ್ಮೆ ಪರಿಪೂರ್ಣವಾಗಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ರಾಜ್ಯದ ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ಇಲ್ಲದೆ ಹೋದರೆ ಇಡಿ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದರು.
ಕೋಲಾರ ಜಿಲ್ಲೆಯಿಂದ ಆರಂಭವಾಗಿರುವ ಈ ಪಂಚರತ್ನ ಯಾತ್ರೆಯು ಯಶಸ್ವಿಯಾಗಿ ಎಲ್ಲಾ ಕಡೆಯೂ ನಡೆದು ಬಂದಿದ್ದು 19ನೇ ದಿನವಾಗಿ ಗುಬ್ಬಿಯಲ್ಲಿ ನಡೆಯುತ್ತಿದೆ. ಪ್ರತಿಯೊಬ್ಬರಿಗೂ ಕೂಡ ಆರೋಗ್ಯ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಪಂಚರತ್ನ ಯೋಜನೆಯಲ್ಲಿ ವಿಶೇಷ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಬೇಕು ಎಂದು ಬಯಸಿದ್ದೇನೆ. ಕೊರೊನಾ ಸಂದರ್ಭದಲ್ಲಿ ಆಗಿರುವ ಅನಾಹುತ ನೆನೆದಾಗ ಪ್ರತಿಯೊಬ್ಬರಿಗೂ ಆರೋಗ್ಯ ನೀಡಬೇಕು ಎಂಬುದು ನಮ್ಮ ಆಶಯವಾಗಿದೆ. ಹಾಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಹಾಸಿಗೆ ಉಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಬದ್ಧವಾಗಿದ್ದೇನೆ. ಮಹಿಳೆಯರ ಸಬಲೀಕರಣ ಸಿರಿವಂತ ಬಡವ ಎನ್ನದೆ ಪ್ರತಿಯೊಬ್ಬರಿಗೂ ಶಿಕ್ಷಣ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗೊಂದು ಮಾದರಿ ಸುಸಜ್ಜಿತ ಶಾಲೆ ಸೇರಿದಂತೆ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ ಆಗಿದೆ ಎಂದು ತಿಳಿಸಿದರು.
ಗುಬ್ಬಿಯಲ್ಲಿ ದಲಿತ ಮಿತ್ರರು ನನ್ನ ವಿರುದ್ಧ ಪತ್ರಿಕಾಗೋಷ್ಠಿ ನಡೆಸುತ್ತಾರೆ. ದಲಿತರ ಹಿತ ಕಾಯುವುದಕ್ಕೆ ಎಲ್ಲಾ ರೀತಿಯಲ್ಲೂ ಬದ್ಧವಾಗಿರುವ ನಾನು ಹಿಂದಿನಿಂದಲೂ ಎಲ್ಲಾ ಸಮುದಾಯಗಳಿಗೂ ಮಾನ್ಯತೆ ನೀಡಿದ್ದೇನೆ. ಬಡವರು ಚೆನ್ನಾಗಿರಬೇಕು ಎಂದು ಸರಾಯಿ ನಿಷೇಧ, ಲಾಟರಿ ನಿಷೇಧ ಮಾಡಿ ಕುಟುಂಬಗಳನ್ನು ಉಳಿಸಿದ್ದೇನೆ ಮತ್ತು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ, ಸೈಕಲ್ ವಿತರಣೆ ಮಾಡಿದ್ದೇನೆ. ಪಕ್ಷದ ಪ್ರಣಾಳಿಕೆಯಲ್ಲಿ ವಿಶೇಷ ಚೇತನರಿಗೆ ತಿಂಗಳಿಗೆ 2500 ರೂಪಾಯಿ ಗೌರವ ಧನ, 60 ವರ್ಷ ಮೇಲ್ಪಟ್ಟವರಿಗೆ 5000 ಗೌರವ ಧನ ಸೇರಿದಂತೆ ಹತ್ತು ಹಲವು ಯೋಜನೆ ಮಾಡಲು ಬದ್ಧವಾಗಿದ್ದೇನೆ ಎಂದು ತಿಳಿಸಿದರು. ಕಾಂಗ್ರೆಸ್ ವಿರೋಧದ ನಡುವೆಯೂ 27 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಗುಬ್ಬಿ ತಾಲೂಕಿನಲ್ಲಿ 16,000 ಕುಟುಂಬದ ರೈತರಿಗೆ ಇದರಿಂದ ಅನುಕೂಲವಾಗಿದೆ ಎಂದು ತಿಳಿಸಿದರು.
ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ಬಿ.ಎಸ್.ನಾಗರಾಜು ಅವರನ್ನು ಆಯ್ಕೆ ಮಾಡಿದ್ದು, ಯಾವುದೇ ಜಾತಿ ಮತವನ್ನು ಬದಿಗಿಟ್ಟು ಎಲ್ಲರೂ ಅವರಿಗೆ ಮತ ಹಾಕುವ ಮೂಲಕ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮಾತನಾಡಿ, ಜೆಡಿಎಸ್ ಪಕ್ಷ ಸಾಮಾನ್ಯ ಜನರ ಪಕ್ಷವಾಗಿದೆ. ಪಂಚರತ್ನ ಯೋಜನೆ ಇಡೀ ರಾಜ್ಯದ ಜನರಿಗೆ ಒಳಿತು ಬಯಸುವ ಯೋಜನೆಯಾಗಿದೆ. ರೈತರ ಮಗನಾದ ಕುಮಾರಸ್ವಾಮಿ ಅವರಿಗೆ ರೈತರ ಕಷ್ಟ ಗೊತ್ತಿದೆ. ತಾಲೂಕಿನ ಜನರು ನಾನು ನಿಮ್ಮ ಮನೆಗೆ ಬಂದಾಗ ಅನ್ನ ಹಾಕಿದ್ದೀರಾ, ಪ್ರೀತಿ ಕೊಟ್ಟಿದ್ದೀರಾ, ಹಾಗಾಗಿ ನಿಮ್ಮೆಲ್ಲರ ಋಣ ತೀರಿಸಬೇಕಿದೆ. ಹಾಗಾಗಿ ಕುಮಾರಣ್ಣ ನನಗೆ ಅವಕಾಶ ಕೊಟ್ಟಿದ್ದಾರೆ ಅದನ್ನು ನಾನು ಉಳಿಸಿ ಕೊಳ್ಳುತ್ತೇನೆ. 20 ವರ್ಷದ ಆಡಳಿತದಲ್ಲಿ ಏನೆಲ್ಲಾ ನಡೆದಿದೆ ಅನ್ನೋದು ನಿಮಗೆ ಗೊತ್ತಿದೆ. ಒಮ್ಮೆ ಅವಕಾಶ ನೀಡಿ ತಾಲ್ಲೂಕಿನ ಅಭಿವೃದ್ಧಿ ಮಾಡುತ್ತೇವೆ ಎಂದರು.
ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಭೂ ಕಬಳಿಕೆ ನಡೆದಿದೆ. ಅದೆಲ್ಲ ಇಲ್ಲಿನ ಶಾಸಕರಿಗೆ ಗೊತ್ತಿದ್ದರೂ ಏನು ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ ದೇವೇಗೌಡರ ಹಾಗೂ ಕುಮಾರಸ್ವಾಮಿಯವರ ಭಾವಚಿತ್ರವಿಲ್ಲದೆ ಕ್ಯಾನ್ವಾಸ್ ಮಾಡುತ್ತಿದ್ದೆ ಎಂದು ಹೇಳಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಕೃಷ್ಣಪ್ಪ, ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿದರು. ಕಳ್ಳಿಪಾಳ್ಯ ಗ್ರಾಮದಿಂದ ಮೆರವಣಿಗೆ ಮೂಲಕ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಬಸ್ ನಿಲ್ದಾಣದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಕುಮಾರಸ್ವಾಮಿ ಅವರಿಗೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಂತರ ಕೆ.ಜಿ.ಟೆಂಪಲ್, ಕುನ್ನಲಾ ಕಡೆ ರಥಯಾತ್ರೆ ಸಾಗಿತು.
ಎಂಎಲ್ಸಿ ಬೋಜೇಗೌಡ, ರಾಜ್ಯ ಯುವ ಉಪಾಧ್ಯಕ್ಷ ಬೆಳ್ಳಿ ಲೋಕೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕವೀರಯ್ಯ, ಮುಖಂಡರಾದ ಸುರೇಶ ಗೌಡ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಗಾಯತ್ರಿ ನಾಗರಾಜು, ಶಿವಲಿಂಗೇಗೌಡ, ಯಲ್ಲಪ್ಪ ಇತರರು ಹಾಜರಿದ್ದರು.
Comments are closed.