ಆರೋಗ್ಯ ಸೇವೆಯಲ್ಲಿ ಮಾನವೀಯತೆ ಮುಖ್ಯ

ವೈದ್ಯಕೀಯ ವೃತ್ತಿಗೆ ಬರುವವರಲ್ಲಿ ಬದ್ಧತೆ, ತಾಳ್ಮೆ ಇರಬೇಕು: ಡಾ.ಮಂಜುನಾಥ್

259

Get real time updates directly on you device, subscribe now.


ತುಮಕೂರು: ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಮಂಗಳವಾರ ಕಾಲೇಜಿನ ಪ್ರಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಶುದ್ಧಗಾಳಿ, ಶುದ್ಧ ನೀರು, ಶುದ್ಧ ಆಹಾರ ಸಿಕ್ಕಾಗ ಮಾತ್ರ ಆರೋಗ್ಯ ಭಾರತ ಕಾಣಲು ಸಾಧ್ಯ. ನಮ್ಮ ಜೀವನ ಶೈಲಿ ಬದಲಾವಣೆ ಪ್ರಕೃತಿಯ ಮೇಲೆ ಆಕ್ರಮಣದಿಂದಾಗಿ ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ವಯಸ್ಕರಲ್ಲೆ ಹೃದಯ ತೊಂದರೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಮಧುಮೇಹ, ಕ್ಯಾನ್ಸರ್, ಪಾರ್ಶ್ವವಾಯು ಜೊತೆಗೆ ಮೊಬೈಲ್ ಸ್ಕ್ರೀನ್ ಅಡಿಕ್ಷನ್ ರೋಗವು ನಮ್ಮ ಸುತ್ತಮುತ್ತಲಿನ ಪರಿವೆಯೇ ಇಲ್ಲದಂತೆ ಮನುಷ್ಯನನ್ನು ಏಕಾಂಗಿಯಾಗಿಸಿದೆ ಎಂದರು.
ವೈದ್ಯಕೀಯ ವೃತ್ತಿಗೆ ಬರುವವರಲ್ಲಿ ಬದ್ಧತೆ, ತಾಳ್ಮೆ ಎನ್ನುವುದು ಬಹಳ ಮುಖ್ಯ, ನೀವು ಆಲೋಪತಿ, ಹೋಮಿಯೋಪತಿ, ನೇಚರೋಪತಿ ಹೀಗೆ ಯಾವುದೇ ವೈದ್ಯಕೀಯ ಪದ್ಧತಿ ಪ್ರಾಕ್ಟೀಸ್ ಮಾಡಿ, ಸೇವೆಯಲ್ಲಿ ಮಾನವೀಯತೆ ಬಹಳ ಮುಖ್ಯ. ಗ್ರಾಮೀಣ ಭಾಗದಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುವ ವಾತಾವರಣ ನಿರ್ಮಾಣವಾಗಬೇಕಿದೆ. ತಮ್ಮದಲ್ಲದ ತಪ್ಪಿಗೂ ವೈದ್ಯರನ್ನು ಹೊಣೆ ಮಾಡಲಾಗುತ್ತಿದೆ. ಅವರು ನಮ್ಮಂತೆಯೇ ಮನುಷ್ಯರು, ದೇವರಾಗಲಿ, ಜಾದುಗಾರರಾಗಲಿ ಎಂಬುದನ್ನು ಸಮಾಜ ಮನಗಾಣಬೇಕು ಎಂದರು.
ರಾಜೀವ್ಗಾಂಧಿ ಆರೋಗ್ಯ ವಿವಿ ಉಪ ಕುಲಪತಿ ಡಾ.ಎಂ.ಕೆ.ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತ್ಯಾತೀತ ಶಿಕ್ಷಣ, ದಾಸೋಹ, ಆರೋಗ್ಯ ಸೇವೆಗೆ ಸಿದ್ಧಗಂಗೆ, ಆದಿಚುಂಚನಗಿರಿ, ಸಿರಿಗೆರೆ ಸೇರಿ ರಾಜ್ಯದ ಮಠಗಳು ಉತ್ತಮ ಉದಾಹರಣೆಯಾಗಿದ್ದು, ನಡೆದಾಡುವ ದೇವರೆನಿಸಿದ್ದ ಡಾ.ಶಿವಕುಮಾರ ಶ್ರೀಗಳು 45 ಸಾವಿರ ಮಕ್ಕಳಿಗೆ ಪ್ರತಿವರ್ಷ ತಮ್ಮ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಒದಗಿಸುವ ವ್ಯವಸ್ಥೆ ರೂಪಿಸಿದರು. ಮೆಡಿಕಲ್ ಕಾಲೇಜು ನಡೆಸುವುದು ಸುಲಭವಿಲ್ಲ. 400 ರಿಂದ 500 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ವಾಣಿಜ್ಯದ ಆಯಾಮಗಳು ಪ್ರವೇಶಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಿದ್ಧಗಂಗಾ ಮಠದವರು ಮಠದ ವ್ಯವಸ್ಥೆಗೂ ಧಕ್ಕೆಯಾಗದಂತೆ ಕಾಲೇಜನ್ನು ಮುನ್ನೆಡೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ವೈದ್ಯಕೀಯ ಕ್ಷೇತ್ರ ಬೆಳವಣಿಗೆಯಾಗದ ಕಾರಣ ಮನುಷ್ಯನ ಸರಾಸರಿ ಆಯುಷ್ಯ 35 ವರ್ಷವಿತ್ತು. ಇದೀಗ ಆರೋಗ್ಯ ಕ್ಷೇತ್ರದಲ್ಲಿನ ಅಪಾರ ಸುಧಾರಣೆಯಲ್ಲಿ 78ಕ್ಕೆ ಏರಿಕೆಯಾಗಿದೆ. 600 ವೈದ್ಯಕೀಯ ಕಾಲೇಜುಗಳು ದೇಶದಲ್ಲಿ ತಲೆಎತ್ತಿದೆ. ಸಿದ್ಧಗಂಗಾ ಮೆಡಿಕಲ್ ಕಾಲೇಜು ಅತ್ಯುತ್ತಮ ಕಾಲೇಜಾಗಿ ಹೊರಹೊಮ್ಮುವ ಎಲ್ಲಾ ಗುಣಲಕ್ಷಣ ಹೊಂದಿದ್ದು, ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗೆಳೆಸಿಕೊಳ್ಳುವುದು ಹೆಮ್ಮೆಯ ಸಂಗತಿ ಎಂದರು.
ನಿವೃತ್ತ ಉಪ ಕುಲಪತಿ ಡಾ.ಎಸ್.ಸಚ್ಚಿದಾನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಅತೀ ಕಡಿಮೆ ಅವಧಿಯಲ್ಲಿ ಅತ್ಯುದ್ಭುತ ಸೌಕರ್ಯ ಹೊಂದಿ ವೈದ್ಯರನ್ನು ಲೋಕಕ್ಕೆ ಸಮರ್ಪಿಸಲು ಮುಂದಾಗಿದೆ. ವಿಶ್ವದಲ್ಲೆ ನಂ.1 ಆರೋಗ್ಯ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿನಲ್ಲಿ ನೀವೆಲ್ಲ ವೈದ್ಯ ಪದವಿಗೆ ಸೇರಿರುವುದು ಹೆಮ್ಮೆಯ ಸಂಗತಿ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರು ಬದುಕಿದ್ದಾಗಲೇ ಮೂರು ಬಾರಿ ಮೆಡಿಕಲ್ ಕಾಲೇಜಿಗೆ ಪ್ರಯತ್ನ ಪಟ್ಟು ಅನುಮತಿ ದೊರೆಯದಿದ್ದಾಗ ಬೇಡವೇ ಬೇಡ ಎಂದು ಸುಮ್ಮನಾದರು. 2001ರಲ್ಲಿ ಸಂಸದ ಜಿ.ಎಸ್.ಬಸವರಾಜ್ ಅವರು ಸಿದ್ಧಗಂಗಾ ಆಸ್ಪತ್ರೆ ಸ್ಥಾಪಿಸಲು ಮುಂದಾಗಿ 2015ರ ವರೆಗೆ ಅರೆಬರೆ ಕಟ್ಟಡವಾಗಿಯೇ ಉಳಿದಿತ್ತು. ಕಡೆಗೆ 9 ಮಂದಿ ವೈದ್ಯರೇ ಮುಂದೆ ಬಂದು ಆಸ್ಪತ್ರೆ ಮುನ್ನೆಡೆಸುವಂತಾದಾಗ ಅವರಿಗೆ ಪೂರ್ಣ ಜವಾಬ್ದಾರಿ ವಹಿಸಲಾಯಿತು. ನಮ್ಮ ಪಾತ್ರವಿರದಿದ್ದರೂ ನೋವಿನ ಮಾತುಗಳನ್ನು ಕೇಳಬೇಕಾಯಿತು. ಕಡೆಗೆ ಮಠದ ಸುಪರ್ದಿಗೆ ತೆಗೆದುಕೊಂಡು ಅನಿವಾರ್ಯ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರಿಂದ ವೈದ್ಯಕೀಯ ಕಾಲೇಜು ಸ್ಥಾಪನೆಯ ನಿಯಮ ಸರಳೀಕರಣ, ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಹಾಲಿ ಸಿಎಂ ಹಾಗೂ ಸ್ಥಳೀಯ ಆಡಳಿತದ ಸರ್ಕಾರದಿಂದ ವರ್ಷದೊಳಗೆ ಅನುಮತಿ ದೊರೆತು ಕಾಲೇಜು ತರಗತಿಗಳು ಆರಂಭಗೊಂಡಿವೆ. ಹಿಂದಿನ ಗುರುಗಳು ಹೇಳಿದಂತೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ಕೊಡುತ್ತೇವೆ. ಮಠದ ವ್ಯವಸ್ಥೆಗೂ ಧಕ್ಕೆಯಾಗದಂತೆ ಕಾಲೇಜು ಆಸ್ಪತ್ರೆ ಮುನ್ನೆಡಯಲಿದೆ ಎಂದು ಸ್ಪಷ್ಟೀಕರಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಎಸ್.ಪರಮೇಶ್, ಪ್ರಾಂಶುಪಾಲೆ ಡಾ.ಶಾಲಿನಿ.ಎಂ. ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ಆಡಳಿತ ಮಂಡಳಿಯ ಟಿ.ಎಂ.ಸ್ವಾಮಿ, ಎಸ್ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಎನ್.ಆರ್.ಜಗದೀಶ್, ಕೋರಿ ಮಂಜಣ್ಣ, ಮೇಯರ್ ಪ್ರಭಾವತಿ ಸುಧೀಶ್ವರ್, ಪಾಲಿಕೆ ಸದಸ್ಯೆ ಮತ್ತಿತರ ಗಣ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!