ತುಮಕೂರು: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಂಬೇಡ್ಕರ್ರವರ ಪರಿನಿರ್ವಾಣ ದಿನ ಆಚರಣೆಯಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿ ನಿರ್ವಾಣವಾದಂತಹ ದಿನ, ದೇಶಾದ್ಯಂತ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ದಿನವನ್ನು ಅತ್ಯಂತ ಅರ್ಥ ಪೂರ್ಣವಾಗಿ ಮತ್ತು ಅಷ್ಟೇ ಭಕ್ತಿ, ಗೌರವದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಅಂಬೇಡ್ಕರ್ ರವರ ಪರಿನಿರ್ವಾಣ ದಿನ ಆಗಿರುವುದರಿಂದ ಯಾವುದೇ ಆಡಂಬರ ಇಲ್ಲದೆ ಅವರ ತತ್ವಾದರ್ಶಗಳ ಬಗ್ಗೆ ಪ್ರಚಾರ ಮಾಡಬೇಕು ಎನ್ನುವುದು ರಾಜ್ಯ ಸರ್ಕಾರ ಹಾಗೂ ಸಂಘಟನೆಗಳ ಉದ್ದೇಶವಾಗಿದೆ. ಅಂಬೇಡ್ಕರ್ರವರು ಶ್ರೇಷ್ಠ ತತ್ವವನ್ನು ನಮಗೆ ಕೊಟ್ಟಿದ್ದಾರೆ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳು ಹಾಗೂ ಸಮಾನತೆಗಾಗಿ ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಸಮಾಜ ಸುಧಾರಕರು, ಅವರು ತೋರಿಸಿದ ಸಮಾನತೆಯ ಹಾದಿಯಲ್ಲಿ ನಡೆಯುವುದು ನಾವು ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗುತ್ತದೆ, ಭಾರತ ದೇಶದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ಇಂತಹ ಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮ, ಮುಖಂಡರಾದ ವೈ.ಹೆಚ್.ಹುಚ್ಚಯ್ಯ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಅಂಬೇಡ್ಕರ್ ತತ್ವಾದರ್ಶ ಪಾಲಿಸಿ: ಜಿಲ್ಲಾಧಿಕಾರಿ
Get real time updates directly on you device, subscribe now.
Prev Post
Comments are closed.