ಕುಣಿಗಲ್: ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ತಾಲೂಕು ಬಿಜೆಪಿಯಲ್ಲಿ ಬಣ ರಾಜಕೀಯ ಸ್ಪೋಟಗೊಂಡಿದ್ದು, ಒಬ್ಬ ನಾಯಕರ ಫ್ಲೆಕ್ಸ್ಅನ್ನು ಇನ್ನೊಬ್ಬರು ಕಿತ್ತು ಹಾಕುತ್ತಿದ್ದಾರೆಂದು ಆರೋಪಿಸಿ ಎರಡು ಬಣದ ಕಾರ್ಯಕರ್ತರು ನಡು ರಸ್ತೆಯಲ್ಲಿ ಬಡಿದಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ತಾಲೂಕು ಬಿಜೆಪಿ ವತಿಯಿಂದ ಬುಧವಾರ ಜನಸಂಕಲ್ಪ ಯಾತ್ರೆ ನಡೆಯುತ್ತಿದೆ. ಇದರ ಅಂಗವಾಗಿ ಬಿಜೆಪಿ ಮುಖಂಡರು ತುಮಕೂರು ರಸ್ತೆಯ ಮಾರ್ಗವಾಗಿ ಆಗಮಿಸುವ ಮುಖ್ಯಮಂತ್ರಿಗಳು, ವರಿಷ್ಠರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಕಟ್ಟಲು ಮುಂದಾಗಿದ್ದರು. ರಾಜ್ಯ ಹೆದ್ದಾರಿ 33ರ ಕೊತ್ತಗೆರೆ ಗ್ರಾಮದ ದೊಡ್ಡಕೆರೆ ಕೋಡಿ ಸಮೀಪದಲ್ಲಿ ಬಿಜೆಪಿ ಮುಖಂಡ ಹೆಚ್.ಡಿ.ರಾಜೇಶ್ಗೌಡ ಅವರು ಶುಭಕೋರುವ ಫ್ಲೆಕ್ಸ್ಗಳನ್ನು ಹರಿದು ಕೆರೆ ಕೋಡಿ ಪ್ರದೇಶಕ್ಕೆ ಡಿ.ಕೃಷ್ಣಕುಮಾರ್ ಬೆಂಬಲಿಗರು ಹಾಕಿದ್ದಾರೆಂದು ರಾಜೇಶಗೌಡ ಬೆಂಬಲಿಗರು ಡಿ.ಕೃಷ್ಣಕುಮಾರ್ ಬೆಂಬಲಿಗರೊಂದಿಗೆ ವಾಗ್ವಾದಕ್ಕೆ ಇಳಿದು ಪರಸ್ಪರ ನಿಂದಿಸ ತೊಡಗಿದರು.
ಈ ವೇಳೆ ಸ್ಥಳಕ್ಕಾಗಮಿಸಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿಲೀಪ್, ರಾಜೇಶಗೌಡ ಬೆಂಬಲಿಗ ಸತೀಶ್ ನಡುವೆ ವಾಗ್ವಾದ ತೀವ್ರಗೊಂಡಿದ್ದು, ರಾಜೇಶಗೌಡ ಬೆಂಬಲಿಗರಾದ ಭರತ್, ವೆಂಕಟೇಶ, ರಂಗನಾಥ್ ಸಹ ವಾಗ್ವಾದಕ್ಕೆ ಇಳಿದರು. ಈ ವೇಳೆ ಪರಸ್ಪರ ವಾದ, ವಿವಾದ ಏರ್ಪಟ್ಟು ತಳ್ಳಾಟ ನೂಕಾಟ ನಡೆಯಿತು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಕುಣಿಗಲ್ ಪೊಲೀಸರು ಸ್ಥಳಕ್ಕಾಗಮಿಸಿ ಕಾರ್ಯಕರ್ತರನ್ನು ಚದುರಿಸಿದರು. ಮೇಲ್ನೋಟಕ್ಕೆ ಎರಡು ಬಣದವರ ನಡುವೆ ಅಸಮಾಧಾನ ತಣ್ಣಗಾಗುವಂತೆ ಕಂಡರೂ ಒಳಗೊಳಗೆ ಬೂದಿಮುಚ್ಚಿದ ಕೆಂಡದ ಸ್ಥಿತಿ ಉಂಟಾಗಿದೆ.
ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಯಾವುದೇ ಅಚಾತುರ್ಯವಾಗದಂತೆ ಕ್ರಮ ಕೈಗೊಳ್ಳಲು ಪಕ್ಷದ ವರಿಷ್ಠರು ಯತ್ನಿಸುತ್ತಿದ್ದಾರೆ. ಪೊಲೀಸರು ಯಾವುದೇ ಅಚಾತುರ್ಯ ನಡೆಯದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎರಡೂ ಬಣದ ಮುಖಂಡರಿಗೆ ಸೂಚನೆ ನೀಡಿದ್ದು, ಅವರ ಮುಖಂಡರ ಪರವಾಗಿ ಹಾಕಿರುವ ಫ್ಲೆಕ್ಸ್ಗಳ ಕಾಯಲು ಕಾರ್ಯಕರ್ತರೆ ಸಿದ್ಧತೆ ನಡೆಸಿದ್ದಾರೆ. ತಾಲೂಕು ಬಿಜೆಪಿಯಲ್ಲಿ ಮೂರು ಬಣಗಳಾಗಿದ್ದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡರ ಬಣವೂ ತಾಲೂಕು ಬಿಜೆಪಿ ಆಯೋಜಿಸುವ ಎಲ್ಲಾ ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಳ್ಳುತ್ತಿರುವ ಕಾರಣ ಯಾವುದೆ ಗೊಂದಲಕ್ಕೆ ಸಿಲುಕಿಲ್ಲ ಎನ್ನಲಾಗುತ್ತಿದೆ.
ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಬಿಜೆಪಿ ಬಣ ಬಡಿದಾಟ
Get real time updates directly on you device, subscribe now.
Prev Post
Comments are closed.