ತುಮಕೂರು: ದೇಶದ ಎಲ್ಲಾ ವರ್ಗ, ಶೋಷಿತ ಸಮುದಾಯ ವರ್ಗದವರ ಧ್ವನಿಯಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜ್ಞಾನದ ಬೆಳಕು, ಜ್ಯೋತಿಯನ್ನು ದೇಶ ವಾಸಿಗಳಿಗೆ ನೀಡಿದ ಮಹಾನ್ ಪುರುಷ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಬಣ್ಣಿಸಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಮಾನತೆಯ ಹರಿಕಾರ ಮತ್ತು ಮಹಾನ್ ಮಾನವತಾವಾದಿ, ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ರವರ 66ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ನಮಿಸಿ ಮಾತನಾಡಿ, ವಿಶ್ವಜ್ಞಾನಿ, ದಲಿತರ ಸೂರ್ಯರಂತೆ ಪ್ರಜ್ವಲಿಸಿದ ಅಂಬೇಡ್ಕರ್, ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದವ. ಅವರೊಳಗೆ ದೇಶದ ಐಕ್ಯತೆ, ರಾಷ್ಟ್ರ ಪ್ರೇಮ, ಜಾಗೃತ ಜ್ಯೋತಿ ಇದ್ದು, ಸಮಾನತೆಯ ಹರಿಕಾರ, ಮೀಸಲಾತಿ ನೀಡಿಕೆಯ ಮಹಾತಪಸ್ವಿಯಾಗಿದ್ದರು. ಅವರ ಪುಸ್ತಕ ಭಂಡಾರದಲ್ಲಿ 50000ಕ್ಕೂ ಹೆಚ್ಚು ಪುಸ್ತಕ ಸಂಗ್ರಹವಿತ್ತು. ಸುಮಾರು 195 ದೇಶಗಳಲ್ಲಿ ಅವರು ಪ್ರಖ್ಯಾತರಾಗಿದ್ದವರು ಎಂದು ವೈ.ಹೆಚ್.ಹುಚ್ಚಯ್ಯ ವಿವರಿಸಿದರು.
ಸಂವಿಧಾನ ರಚನಾ ಸಭೆಯ ಕಾರ್ಯ ಚಟುವಟಿಕೆಗಳಲ್ಲಿ ರಾಷ್ಟ್ರೀಯತೆ, ಐಕ್ಯತೆ ಚೌಕಟ್ಟು ಮೀರಲಾಗದ ಹಾಗೆ ಎಚ್ಚರ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್, ಅಖಂಡ ಭಾರತವೆಂಬುದು ಕೇವಲ ಕಲ್ಪನೆಯಲ್ಲ, ಭಾರತ ಪ್ರಕೃತಿ ದತ್ತವಾಗಿಯೇ ಅಖಂಡವಾಗಿದ್ದ ಭಾರತವನ್ನು ವಿಭಜಿಸುವುದು ಎಂದರೆ ವಿಭಾಗ ಮಾಡುವುದು ಎಂದಲ್ಲ, ಒಂದು ಭಾಗವನ್ನು ಕತ್ತರಿಸುವುದು ಎಂದೇ ಅಂಬೇಡ್ಕರ್ ನುಡಿದಿದ್ದರು ಎಂದು ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಎನ್.ನರಸಿಂಹಮೂರ್ತಿ ತಿಳಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಂದಿನ ಕಾಂಗ್ರೆಸ್ ನೇತೃತ್ವ ವಹಿಸಿದ್ದ ಜವಹರ ಲಾಲ್ ನೆಹರೂ ಅವಮಾನಿಸಿದ್ದರು, ಅಂಬೇಡ್ಕರ್ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ಸಾಮಾನ್ಯ ವ್ಯಕ್ತಿಯನ್ನು ಹುರಿಯಾಳಿಸಿ ಸೋಲು ಅನುಭವಿಸುವಂತೆ ಮಾಡಿದರು. ಅವರು ಸಾವನಪ್ಪಿದಾಗ ದೆಹಲಿಯಲ್ಲಿ ದಫನ್ ಮಾಡಲೂ ಕಾಂಗ್ರೆಸ್ ಅವಕಾಶ ಮಾಡಿಕೊಡಲಿಲ್ಲ ಎಂದರು.
ಜನರಿಗೆ ಸಮಾನ ಹಕ್ಕು, ಮತದಾನದ ಹಕ್ಕು, ಮಹಿಳೆಯರಿಗೆ ಸಮಾನತೆ, ಅಸ್ಪೃಶ್ಯತೆ ಆಚರಣೆ ವಿರುದ್ಧ ಧ್ವನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ, ಕಾಂಗ್ರೆಸ್ ಭಾರತರತ್ನ ನೀಡಲಿಲ್ಲ. ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರಿಗೆ ಕಾಂಗ್ರೆಸ್ ಭಾರತರತ್ನ ನೀಡಿತ್ತು. ಬಿಜೆಪಿ ಹಿರಿಯ ಮುತ್ಸದ್ಧಿ ನಾಯಕರಾದ ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿರವರ ಒತ್ತಾಸೆಯಂತೆ ಪ್ರಧಾನಿ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ತುಮಕೂರು ನಗರ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಅಂಬೇಡ್ಕರ್ ಅವರೊಳಗೆ ದೇಶ ಐಕ್ಯತೆ, ರಾಷ್ಟ್ರಪ್ರೇಮ ಜಾಗೃತ ಜ್ಯೋತಿ ಇತ್ತು. ಆ ಅದಮ್ಯ ಧ್ಯೇಯ ಸಾರ್ವತ್ರಿಕವಾಗಿತ್ತು, ಶೋಷಿತ ವರ್ಗದವರು ನಮ್ಮ ಉಸಿರ ಬಿಸಿ ತಗ್ಗಿದ್ದು ಅಂಬೇಡ್ಕರ್ ಅವರಿಂದಲೇ ಎಂಬ ಭಾವವನ್ನು ಇಂದಿಗೂ ಇರಿಸಿಕೊಂಡಿದ್ದಾರೆ ಎಂದರು.
ಬಿಜೆಪಿ ಹಿರಿಯ ಮುಖಂಡ ಹಾಗೂ ನಿವೃತ್ತ ಅಧಿಕಾರಿ ವಿಶ್ವನಾಥ್ ಸ್ವಾಮಿ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಲೋಕೇಶ್, ಕಾರ್ಯದರ್ಶಿ ಮಧುವನಿತ, ಖಜಾಂಚಿ ಯೋಗೀಶ್ ಸೋರೆಕುಂಟೆ, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಟೂಡಾ ಸದಸ್ಯ ಹಾಗೂ ರೈತ ಮೋರ್ಚಾ ನಗರಾಧ್ಯಕ್ಷ ಸತ್ಯಮಂಗಲ ಜಗದೀಶ್, ಎಸ್ಸಿ ಮೋರ್ಚಾ ನಗರ ಉಪಾಧ್ಯಕ್ಷ ಸಿದ್ದಗಂಗಯ್ಯ, ಪ್ರಧಾನ ಕಾರ್ಯದರ್ಶಿ ಹನುಮಂತರಾಜು, ಶಿವರಾಜು ಇತರರು ಇದ್ದರು.
Comments are closed.